ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಾದ್ಯಂತ ಕಾಂಗ್ರೆಸ್ ಪಕ್ಷದ ಪರವಾಗಿ ಅತ್ಯುತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಈ ಕ್ಷೇತ್ರದಲ್ಲಿ ಮೋದಿಯವರ ಮ್ಯಾಜಿಕ್ ನಡೆಯುವುದಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಪ್ರಚಾರ ಸಮಿತಿ ಅಧ್ಯಕ್ಷ ಸಯದ್ ಹನೀಫ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ತಮ್ಮ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಯವರು ನಡೆಸಿದ ಭಾರತ್ ಜೋಡೋ ಯಾತ್ರೆ ಹಾಗೂ ಭಾರತ್ ನ್ಯಾಯ ಯಾತ್ರೆಯು ದ್ವೇಷ, ಭಾವನಾತ್ಮಕ ವಿಚಾರಗಳಿಂದ ಒಡೆದು ಹೋಗಿದ್ದ ಜನರ ಬದುಕಿನಲ್ಲಿ ಪ್ರೀತಿಯ ಅಂಗಡಿ ತೆರೆದು ಪಂಚ ನ್ಯಾಯ ಗ್ಯಾರಂಟಿಗಳ ಮೂಲಕ ಜನರ ಆಶೋತ್ತರಗಳಿಗೆ ಪರಿಹಾರ ರೂಪಿಸಿದ್ದಾರೆಂದು ಹೇಳಿದರು.

೨೨ ಮಂದಿ ಶ್ರೀಮಂತರ ಉದ್ಯಮಿಗಳಿಗೆ ೧೬ ಲಕ್ಷ ಕೋಟಿ ಸಾಲ ಮನ್ನಾ ಮಾಡಿರುವ ಕೇಂದ್ರ ಸರ್ಕಾರ ದೇಶದ ಬೆನ್ನೆಲುಬಾಗಿರುವ ರೈತರ ೨ ಲಕ್ಷ ಕೋಟಿ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಿದ್ದು, ಕೇಂದ್ರ ಸರ್ಕಾರ ಶ್ರೀಮಂತ ಕಾರ್ಪೋರೇಟ್ ಪರ ಎಂಬುದನ್ನು ಸಾಭೀತುಪಡಿಸಿದೆ ಇದನ್ನು ಅರ್ಥ ಮಾಡಿಕೊಂಡಿರುವ ಜನರು ಈ ಭಾರಿ ಕೋಮುವಾದಿ ಹಾಗೂ ಸಂವಿಧಾನ ವಿರೋಧಿ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದ್ದು ಇದಕ್ಕೆ ಹೆದರಿ ಬಿಜೆಪಿ-ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆಯಾದರೂ ಕೇವಲ ನಾಯಕರ ಮಟ್ಟದಲ್ಲಿ ಮಾತ್ರ ಮೈತ್ರಿ ಆಗಿದೆ ಸಾಮಾನ್ಯ ಜನರು ಕಾಂಗ್ರೆಸ್ ಪರವಾಗಿದ್ದಾರೆಂದರು.

ಮಹಿಳೆಯರಿಗೆ ನೀಡಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಮಹಿಳೆಯರ ಬಗ್ಗೆ ಅಗೌರವವಾಗಿ ಮಾತನಾಡಿರುವುದನ್ನು ಖಂಡಿಸಿದರಲ್ಲದೆ ದೇಶದಲ್ಲಿ ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕೆಂದುಕೊಂಡಿರುವ ಬಿಜೆಪಿ ೭ ಹಂತಗಳಲ್ಲಿ ೩ ತಿಂಗಳುಗಳ ಕಾಲ ಚುನಾವಣೆ ನಡೆಸುತ್ತಿರುವುದನ್ನು ಗಮನಿಸಿದರೆ ಅನ್ಯ ಮಾರ್ಗದಲ್ಲಿ ಅಧಿಕಾರ ಹಿಡಿಯುವ ಅಜೆಂಡ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ ಎಂದು ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಾದ್ಯಂತ ಪ್ರವಾಸ ನಡೆಸಿದ್ದು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷ ನೀಡಿರುವ ಗ್ಯಾರಂಟಿಗಳು ಹಾಗೂ ಉತ್ತಮ ಅಭ್ಯರ್ಥಿ ಮತ್ತು ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ಸರ್ವಜನಾಂಗದ ಶಾಂತಿಯ ತೋಟದ ಕಲ್ಪನೆಯಂತೆ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರ ಆಡಳಿತಕ್ಕೆ ಜನ ಬೆಂಬಲ ವ್ಯಕ್ತಪಡಿಸಿದ್ದು ಅತ್ಯಧಿಕ ಸಂಖ್ಯೆಯಲ್ಲಿ ಜಯಪ್ರಕಾಶ್ ಹೆಗ್ಡೆ ಜಯಗಳಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ತನೊಜ್ ನಾಯ್ಡು, ಗಂಗಾಧರ್ ನಾಸೀರ್ ಹುಸೇನ್ ಇದ್ದರು.

Lok Sabha election is not Modi magic