ಚಿಕ್ಕಮಗಳೂರು: : ಮಲೆನಾಡಿನ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಲೋಕಸಭೆಯಲ್ಲಿ ಮಂಡಿಸಬಹುದಾದ ಸಾಮರ್ಥ್ಯವಿರುವ ಅಭ್ಯರ್ಥಿ ಗೆಲ್ಲಿಸಬೇಕು ಎಂಬ ನಮ್ಮ ಅಭಿಪ್ರಾಯದಲ್ಲಿ ಕೆ.ಜಯಪ್ರಕಾಶ್ ಹೆಗ್ಡೆ ಸಮರ್ಥರಿದ್ದಾರೆ. ಹೀಗಾಗಿ ಈ ಚುನಾವಣೆಯಲ್ಲಿ ಅವರನ್ನು ಬೆಂಬಲಿಸಲಿದ್ದೇವೆ ಎಂದು ಮಲೆನಾಡು ಸಂರಕ್ಷಣಾ ವೇದಿಕೆ ಅಧ್ಯಕ್ಷ ಕಲ್ಕುಳಿ ವಿಠಲ ಹೆಗ್ಡೆ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೋಟಾ ಶ್ರೀನಿವಾಸ ಪೂಜಾರಿ ಅವರು ಈಗಾಗಲೆ ವಿರೋಧ ಪಕ್ಷದ ನಾಯಕನ ಹುದ್ದೆ ಹೊಂದಿದ್ದಾರೆ. ಅವರು ಈ ಜಿಲ್ಲೆಯ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಮಂಡಿಸಲಿ. ಜಯಪ್ರಕಾಶ್ ಹೆಗ್ಡೆ ಅವರು ಮಲೆನಾಡಿನ ಪ್ರಮುಖ ಸಮಸ್ಯೆಗಳ ಬಗ್ಗೆ ಲೋಕಸಭೆಯಲ್ಲಿ ದನಿ ಎತ್ತಲಿ ಎಂದರು.

ಎರಡು ಬಾರಿ ಈ ಕ್ಷೇತ್ರವನ್ನು ಪ್ರತಿನಿಸಿದ್ದ ಶೋಭಾ ಕರಂದ್ಲಾಜೆ ಅವರಿಗೆ ಜಿಲ್ಲೆಯ ಮಲೆನಾಡಿನ ಗಂಭೀರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಾಗಿತ್ತು ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಮಲೆನಾಡಿನ ಅಭಿವೃದ್ಧಿ ಹಾಗೂ ಭವಿಷ್ಯಕ್ಕೆ ಮಾರಕವಾದ ಗೋಧವರ್ಮನ್ ತಿರುಮಲಪಾಡ್ ವರ್ಸಸ್ ಕೇಂದ್ರ ಸರಕಾರದ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಅರಣ್ಯ ಎಂಬುದಕ್ಕೆ ಹೊಸ ವ್ಯಾಖ್ಯಾನ ಬರೆದ ಪರಿಣಾಮ ಮಲೆನಾಡಿನಲ್ಲಿ ಸಮಸ್ಯೆಗಳು ಉದ್ಭವಿಸಿವೆ.

ಸಾರ್ವಜನಿಕ ಶಾಲೆ, ಆಸ್ಪತ್ರೆ, ಕಟ್ಟಡ ನಿರ್ಮಿಸಲು ಜಾಗ ಇಲ್ಲದಂತಾಗಿದೆ. ೧ ಲಕ್ಷಕ್ಕೂ ಹೆಚ್ಚು ಮಂದಿ ಮನೆ, ನಿವೇಶನ ಇಲ್ಲದೆ ಕಾದಿದ್ದಾರೆ. ೯.೯೪ ಲಕ್ಷ ಹೆಕ್ಟೇರ್ ಡೀಮ್ಡ್ ಪ್ರಸ್ತಾವನೆ ಹಸಿರು ಪೀಠದಲ್ಲಿ ಬಾಕಿ ಇದೆ. ೫೦ ಮರಗಿಡಗಳಿದ್ದಲ್ಲಿ ಆದನ್ನು ಕಾಡು ಎಂದು ಘೋಷಿಸಿ ಮಲೆನಾಡಿನ ಜನರಿಗೆ ಕೊಡಲಿ ಪೆಟ್ಟು ನೀಡಿದ್ದಾರೆ ಎಂದು ಆರೋಪಿಸಿದರು.

ಮುಂದೊಂದು ದಿನ ಸುಪ್ರೀಂ ಕೋರ್ಟ್ ಕಠಿಣ ನಿರ್ಧಾರ ತಗೆದುಕೊಂಡರೆ ಸಾವಿರಾರು ಕುಟುಂಬಗಳು ಬೀದಿಪಾಲಾಗುತ್ತವೆ. ಕುದುರೆ ಮುಖ ಉದ್ಯಾನವನದ ಹೆಸರಲ್ಲಿ ರಾಷ್ಟ್ರೀಯ ಹೆದ್ದಾರಿ ೬೯ ಕಾಮಗಾರಿ ಮಾಡಲು ಅರಣ್ಯ ಇಲಾಖೆ ಬಿಡುತ್ತಿಲ್ಲ. ಮಲೆನಾಡಿನ ಕೃಷಿ ಮತ್ತು ಅಭಿವೃದ್ಧಿ ಯೋಜನೆಗೆ ಮಾರಕವಾದ ಕಸ್ತೂರಿ ರಂಗನ್ ವರದಿ ಜಾರಿ ಮಾಡಲು ಕೇಂದ್ರ ತುದಿಗಾಲಲ್ಲಿದೆ. ಅದನ್ನು ತಡೆಯಬೇಕು. ಹೆದ್ದಾರಿ ೬೯ ರ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಅಡಕೆ ರೋಗಗಳ ಸಂಶೋಧನೆಗೆ ಸಿಇಸಿಆರ್‌ಐ ನಂತಹ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರಿಗೆ ೯೯ ವರ್ಷಕ್ಕೆ ಲೀಸ್‌ಗೆ ನೀಡಿರುವ ಭೂಮಿಯನ್ನು ಸರಕಾರ ವಶಕ್ಕೆ ಪಡೆದು ಭೂ ರಹಿತರಿಗೆ ಹಂಚಬೇಕು ಎಂದು ಆಗ್ರಹಿಸಿದರು.

ಅರಣ್ಯ ಯೋಜನೆಗಳಿಂದ ಪರಿಸರ ಸ್ನೇಹಿಯಾಗಿ ಬದುಕುತ್ತಿದ್ದ ಮಲೆನಾಡಿನ ಉನ್ನತ ಸಂಸ್ಕೃತಿಗೆ ಧಕ್ಕೆ ತಂದು ಕಾಡಿನ ಮಕ್ಕಳನ್ನು ಕಳ್ಳರಂತೆ ಬಿಂಬಿಸಲಾಗಿದೆ. ಇಂತಹ ಅನೇಕ ಸಮಸ್ಯೆಗಳ ಬಗ್ಗೆ ಲೋಕಸಭೆಯಲ್ಲಿ ದನಿ ಎತ್ತುವ ಸಾಮರ್ಥ್ಯ ಜಯಪ್ರಕಾಶ್‌ಹೆಗ್ಡೆ ಅವರಲ್ಲಿದೆ. ಹೀಗಾಗಿ ಮಲೆನಾಡು ಸಂರಕ್ಷಣಾ ವೇದಿಕೆ ಅವರನ್ನು ಬೆಂಬಲಿಸಲಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಎದ್ದೇಳು ಕರ್ನಾಟಕದ ಸುರೇಶ್ ಹಾಗಲಗಂಚಿ ಮಾತನಾಡಿದರು. ವಾಲ್ಮೀಕಿ ಸಂಘದ ಜಗದೀಶ್, ಸಂದೀಪ್, ರಿಜ್ವಾನ್, ಗಣೇಶ್, ಮುನ್ನಾ, ಸಯದ್ ಮತ್ತಿತರರಿದ್ದರು.

The candidate who has the ability to solve the problem of the hill country should win