ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಆಡಳಿತ ಪಕ್ಷದ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ದಲಿತ ಶಾಸಕ ಎಂಬ ಕಾರಣಕ್ಕಾಗಿ ನನ್ನ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ನಾವು ಇರುವುದೇ ಹೊಡೆಸಿಕೊಳ್ಳುವುದಕ್ಕೆ ಎಂಬ ಧೋರಣೆ ಅನುಸರಿಸಿದ್ದಾರೆ ಎಂದು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದರು. 

ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನೆ ದಾಳಿಗೆ ಸಿಲುಕಿ ಮೃತಪಟ್ಟ ಮಹಿಳೆಯ ಕುಟುಂಬದವರಿಗೆ ಸಾಂತ್ವಾನ ಹೇಳಲು ತೆರಳಿದ್ದಾಗ ಜನರು ನನಗೆ ದೊಣ್ಣೆ, ಕಲ್ಲಿನಿಂದ ಹೊಡೆಯಲು ಬಂದಿದ್ದರು. ಹುಚ್ಚು ನಾಯಿ ಅಟ್ಟಿಸಿಕೊಂಡು ಬರುವ ರೀತಿಯಲ್ಲಿ ಅಟ್ಟಿಸಿಕೊಂಡು ಬಂದರು.

ಪ್ರಾಣ ಉಳಿಸಿಕೊಂಡಿದ್ದೇ ಹೆಚ್ಚು. ಸಣ್ಣಪುಟ್ಟವಿಚಾರವೂ ಗೃಹ ಸಚಿವರಿಗೆ ತಿಳಿಯುತ್ತದೆ. ಆದರೆ ನನ್ನ ಮೇಲೆ ನಡೆದ ಹಲ್ಲೆ ಬಗ್ಗೆ ತಿಳಿದಿಲ್ಲವೇ. ಏನಾಯಿತು, ಏಕೆ ಆಯಿತು ಎಂದು ಸೌಜನ್ಯಕ್ಕೂ ಮಾತನಾಡಿಸಿಲ್ಲ ಎಂದರು.

ಭ್ರಷ್ಟಾಚಾರ ನಡೆಸಿ ನಾನು ಶಾಸಕನಾಗಿಲ್ಲ. ಗೃಹ ಸಚಿವರು ನನ್ನನ್ನು ಗೌರವಯುತವಾಗಿ ನಡೆಸಿಕೊಂಡಿಲ್ಲ. ನಾವಿರುವುದೇ ಹೊಡೆಸಿಕೊಳ್ಳಲು, ಬೈಸಿಕೊಳ್ಳಲು ಎಂಬ ಧೋರಣೆ ಅವರದು. ಜನಪ್ರತಿನಿಧಿಯ ಗತಿಯೇ ಹೀಗಾದರೆ ಸಾಮಾನ್ಯ ಜನರ ಪಾಡೇನು ಎಂದು ವಾಗ್ದಾಳಿ ನಡೆಸಿದರು.

ನಾನು ಕೇಳಿದ ಪೊಲೀಸರನ್ನು ಕ್ಷೇತ್ರದಲ್ಲಿ ನಿಯೋಜಿಸಿಲ್ಲ. ಗೃಹ ಸಚಿವರೇ ಕೆಲವು ಪೊಲೀಸರನ್ನು ಪೋಸ್ಟಿಂಗ್‌ ಮಾಡಿದ್ದಾರೆ. ಇಂತಹವರು ನಮಗೆ ಸಹಾಯ ಮಾಡುತ್ತಾರಾ? ಕ್ಷೇತ್ರದಲ್ಲಿ ಆನೆ ದಾಳಿ ನಡೆದಾಗ ಸಾಂತ್ವಾನ ಹೇಳಲು ಹೋಗುವುದೂ ತಪ್ಪಾ? ಕ್ಷೇತ್ರದ ಜನರಿಗೆ ನಾನು ಮೋಸ ಮಾಡುವುದಿಲ್ಲ ಎಂದು ಕಣ್ಣೀರು ಹಾಕಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಸಮಾಧಾನದ ಮಾತುಗಳನ್ನು ಆಡಿ ತಾಳ್ಮೆಯಿಂದ ಇರುವಂತೆ ಹೇಳಿದ್ದಾರೆ. ಆದರೆ ಗೃಹ ಸಚಿವರು ಮಾತ್ರ ಈ ಪ್ರಕರಣ ಕುರಿತು ಗಂಭೀರವಾಗಿ ಸ್ಪಂದಿಸಲೇ ಇಲ್ಲ ಎಂದರು.