ಮೂಡಿಗೆರೆ: ಸರ್ಫೇಸಿ ಕಾಯ್ದೆಯಂತೆ ಕೆನರಾ ಬ್ಯಾಂಕ್ ಅಧಿಕಾರಿಗಳು ಬಲವಂತದಿಂದ ಕಾಫಿ ಬೆಳಗಾರರ ಸಾಲ ವಸೂಲಿಗೆ ಮುಂದಾಗಿದ್ದು ಕಾಫಿ ತೋಟ ಹರಾಜು ನಡೆಸಲು ಎಲ್ಲಾ ತಯಾರಿ ನಡೆಸಿದ್ದಾರೆ. ಬ್ಯಾಂಕಿನಿಂದ ಬೆಳೆಗಾರರ ಜಮೀನು ಹರಾಜು ನಡೆಸಿದಂತೆ ಒತ್ತಾಯಿಸಿ ಸೋಮವಾರ ಬೆಳಗಾರರ ಸಂಘದಿಂದ ಪಟ್ಟಣದ ಕೆನರಾ ಬ್ಯಾಂಕ್ ಎದುರು ಪ್ರತಿಭಟನೆ ನಡೆಯಿತು.
ಬೆಳಗಾರರು ಪಡೆದ ಸಾಲ ವಸೂಲಿ ಮಾಡಲಾಗುವುದು. ವಸೂಲಿಯಾಗದಿದ್ದರೆ ಸರ್ಫೇಸಿ ಕಾಯ್ದೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಬ್ಯಾಂಕ್ ಎದುರು ಕಟ್ಟಿದ್ದ ಬ್ಯಾನರ್ ತೆರವುಗೊಳಿಸಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದಾಗ ಬ್ಯಾಂಕ್ ವ್ಯವಸ್ಥಾಪಕ ಕೆ.ಸಿ.ನವೀನ್ ಅವರು ಬ್ಯಾನರ್ ತೆರವುಗೊಳಿಸಿದರು.
ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ಮಾತನಾಡಿ, ಕೆನರಾ ಬ್ಯಾಂಕಿನ ಉಪ ಪ್ರಧಾನ ವ್ಯವಸ್ಥಾಪಕ ಜಯಕುಮಾರ್, ವಸೂಲಾತಿ ಅಧಿಕಾರಿ ದಿನಕರನ್ ಈ ಇಬ್ಬರು ಅಧಿಕಾರಿಗಳು ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಸರ್ಫೇಸಿ ಕಾಯ್ದೆ ನೆಪದಲ್ಲಿ ಆನ್ ಲೈನ್ ಮೂಲಕ ರೈತರ ಜಮೀನು ಹರಾಜು ಪ್ರಕ್ರಿಯೆಗೆ ಮುಂದಾಗಿದ್ದಾರೆ. 30 ಲಕ್ಷ ರೂ. ಬೆಲೆಬಾಳುವ ಒಂದು ಎಕರೆ ಕಾಫಿ ತೋಟಕ್ಕೆ 8 ರಿಂದ 9 ಲಕ್ಷ ರೂ. ಬೆಲೆ ನಿಗದಿಪಡಿಸಿ ಹರಾಜಿಗೆ ಯತ್ನಿಸುತ್ತಿದ್ದಾರೆ. ಕಾಫಿ ಕೊಯ್ಲು ಮುಂದಿನ ತಿಂಗಳಿನಿಂದ ಆರಂಭಿಸಬೇಕಾಗಿದೆ. ಈಗ ಬೆಳೆಗಾರರ ಕೈಯಲ್ಲಿ ನಯಾ ಪೈಸೆಯೂ ಇಲ್ಲದೆ ಕಂಗಾಲಾಗಿದ್ದಾರೆ. ಕಳೆದ 4 ವರ್ಷದಿಂದ ಅತಿವೃಷ್ಟಿ, ಈ ಬಾರಿ ಬರಗಾಲ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬೆಳಗಾರರು ಆತ್ಮಹತ್ಯೆಯೊಂದೆ ಬೆಳೆಗಾರರ ಮುಂದಿರುವ ದಾರಿ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದರು.
ಕೃಷಿ ಭೂಮಿಗೆ ಸರ್ಫೇಸಿ ಕಾಯಿದೆ ಅನ್ವಯಿಸದಿದ್ದರೂ ಕೆನರಾ ಬ್ಯಾಂಕ್ ಅಧಿಕಾರಿಗಳು ಅನಧಿಕೃತವಾಗಿ ಬೆಳೆಗಾರರ ಮೇಲೆ ಸವಾರಿ ಮಾಡುತ್ತಿದ್ದಾರೆ. ಬೆಳಗಾರರು ಪಡೆದ ಸಾಲಕ್ಕೆ ಶೇ. 22 ರಂತೆ ಬಡ್ಡಿ ಪಾವತಿಸುತ್ತಿದ್ದಾರೆ. ಈ ಹಣದಲ್ಲಿ ಬ್ಯಾಂಕ್ ಅಧಿಕಾರಿಗಳಿಗೆ ಸಂಬಳ ಬರುತ್ತಿದೆ. ಎಂಬುದನ್ನು ಅಧಿಕಾರಿಗಳು ಅರ್ಥಮಾಡಿಕೊಳ್ಳಬೇಕು. ರೈತರಿಂದಲೇ ತಮ್ಮ ಜೀವನ ನಡೆಯುತ್ತಿದ್ದರೂ ಬ್ಯಾಂಕ್ ಅಧಿಕಾರಿಗಳು ರೈತರ ಪರ ನಿಲ್ಲುತ್ತಿಲ್ಲ. ಬೆಳೆಗಾರರ ಮೇಲೆ ಬ್ಯಾಂಕ್ ಓಟಿಎಸ್ ವಿಧಿಸಿದರೆ ಮತ್ತೆ ಆ ಬೆಳಗಾರ ಮುಂದಿನ 7 ವರ್ಷ ಯಾವುದೆ ಬ್ಯಾಂಕಿನಿಂದ ಸಾಲ ಪಡೆಯುವಂತಿಲ್ಲ. ಇಂತಹ ಕಠಿಣ ಕಾನೂನು ವಿಧಿಸುವ ಬ್ಯಾಂಕ್ ವಿರುದ್ಧ ಬೆಳೆಗಾರರು ಬೆಳೆಗಾರರ ತಿರುಗಿ ಬಿದ್ದರೆ ಬ್ಯಾಂಕ್ ಮುಚ್ಚಬೇಕಾಗುತ್ತದೆ. ಕೆನರಾ ಬ್ಯಾಂಕಿನ ಖಾತೆಯನ್ನು ಮುಕ್ತಾಯಗೊಳಿಸಿ ವ್ಯವಹಾರ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
 ಕೆಜಿಎಫ್ ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಂ ಮಾತನಾಡಿ, ಚಿಕ್ಕಮಗಳೂರು, ಹಾಸನ, ಕೊಡಗು, ಈ ಮೂರು ಜಿಲ್ಲೆಗಳಲ್ಲಿ 3.50 ಲಕ್ಷ ಮಂದಿ ಬೆಳೆಗಾರರಿದ್ದಾರೆ. ಕಾಫಿಯಿಂದ ಭಾರತಕ್ಕೆ ವಿದೇಶಿ ವಿನಿಮಯ 11ಸಾವಿರ ಕೋಟಿ ರೂ. ಹರಿದು ಬರುತ್ತಿದೆ. ಬೆಳಗಾರರಿಗೆ ಸಂಕಷ್ಟವಿಲ್ಲದೆ ಉತ್ತಮ ಬದುಕು ಇರುವಂತಿದ್ದರೆ ಬ್ಯಾಂಕುಗಳಿಂದ ಪಡೆದ ಸಾಲ ಮರುಪಾವತಿಗೆ ಬೆಳಗಾರರು ಮೀನಾಮೇಷ ಎಣಿಸುತ್ತಿರಲಿಲ್ಲ. ಈಗಿನ ಸಂಕಷ್ಟಕಾಲದಲ್ಲಿ ಬೆಳೆಗಾರರ ಪರ ಬ್ಯಾಂಕ್ ನಿಲ್ಲುತ್ತಿಲ್ಲ. ಕೆನರಾ ಬ್ಯಾಂಕ್ ಅಧಿಕಾರಿಗಳ ದಬ್ಬಾಳಿಕೆ ಮಿತಿಮೀರಿದ್ದರಿಂದ ಕಾಫಿ ತೋಟವನ್ನು ಪಾಳು ಬಿಟ್ಟು ಬೆಳೆಗಾರರು ಆತ್ಮಹತ್ಯೆಗೆ ಯತ್ನಿಸುತ್ತಿದ್ದಾರೆ. ಬೆಳಗಾರರ ಜೀವಕ್ಕೆ ಅಪಾಯ ಎದುರಾದಲ್ಲಿ ಕೆನರಾ ಬ್ಯಾಂಕ್ ಅಧಿಕಾರಿಗಳು ನೇರ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಮಾತನಾಡಿ, ಕೃಷಿಗೆ ಭವಿಷ್ಯವಿಲ್ಲವೆಂದು ಕಾಫಿ ಬೆಳೆಗಾರರ ಮಕ್ಕಳು ಕೃಷಿ ಕ್ಷೇತ್ರದಿಂದ ದೂರವುಳಿಯುತ್ತಿದ್ದಾರೆ. ಸಾಲ ಪಡೆಯಲು ಬೆಳೆಗಾರರು 5 ಎಕರೆ ಕಾಫಿ ತೋಟವನ್ನು ಬ್ಯಾಂಕಿಗೆ ಒತ್ತೆಯಿಟ್ಟಿವರಿಗೆ 50 ಎಕರೆ ಕಾಫಿ ತೋಟವಿದ್ದರೂ ಬ್ಯಾಂಕ್ ಅಧಿಕಾರಿಗಳು ಸರ್ಫೇಸಿ ಕಾಯ್ದೆಯಂತೆ ಎಲ್ಲಾ ತೋಟವನ್ನು ಹರಾಜು ನಡೆಸಲು ಯತ್ನಿಸುತ್ತಿದ್ದಾರೆ. ಇದು ಬೆಳೆಗಾರರ ಮೇಲಿನ ದಬ್ಬಾಳಿಕೆಯಾಗಿದೆ. ಬ್ಯಾಂಕುಗಳು ರೈತರೊಂದಿಗೆ ವ್ಯಾಪಾರಕ್ಕಿಳಿಯಬಾರದು. ರೈತರಿಂದಲೆ ಬ್ಯಾಂಕಿಗೆ ಹೆಚ್ಚಿನ ಆದಾಯ ಹರಿದು ಬರುತ್ತಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಸದ್ಯದಲ್ಲೆ ರಾಜ್ಯಮಟ್ಟದಲ್ಲಿ ಎಲ್ಲಾ ಬ್ಯಾಂಕಿನ ಸಿಇಓಗಳ ಸಭೆ ಕರೆದು ಸರ್ಫೇಸಿ ಕಾಯಿದೆ ನೆಪದಲ್ಲಿ ರೈತರ ಜಮೀನು ಹರಾಜು ನಡೆಸಿದಂತೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಬೆಳಗಾರರಾದ ಬಿ.ಕೆ.ಲಕ್ಷ್ಮಣ್ ಕುಮಾರ್, ಹುಲಿಕೆರೆ ಉತ್ತಮಗೌಡ, ಸುರೇಂದ್ರಗೌಡ, ಬಿ.ಸಿ.ದಯಾಕರ, ಎಚ್‌.ಜಿ.ಸುರೇಂದ್ರ, ರೇವಣ್ಣಗೌಡ, ಕೆ.ಡಿ.ಮನೋಹರ, ಹಳೆಕೋಟೆ ರಮೇಶ್, ಎಚ್‌.ಬಿ.ಬಾಲರಾಜ್, ಸಂತೋಷ್, ದೀಪಕ್ ದೊಡ್ಡಯ್ಯ, ಎ.ಸಿ.ಆಯೂಬ್ ಹಾಜಿ, ಜಿ.ಹೆಚ್.ಹಾಲಪ್ಪಗೌಡ, ಅದುರಿಕುಮಾರ್, ಬಿ.ಬಿ.ಬಸವರಾಜು, ಅರೆಕೂಡಿಗೆ ಶಿವಣ್ಣ, ಶ್ರೇಯಸ್ ಇತರರಿದ್ದರು,
Protest in front of Canara Bank from Coffee Belgar