ಚಿಕ್ಕಮಗಳೂರು: ಲೋಕಸಭಾ ಚುನಾವಣೆ-೨೦೨೪ರ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಏಪ್ರಿಲ್ ೨೬ ರಂದು ಮತದಾನ ನಡೆಯಲಿದ್ದು, ಚಿಕ್ಕಮಗಳೂರು ವಿಭಾಗದ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಕಾಡಾನೆಗಳು ಹಾಗೂ ವನ್ಯಪ್ರಾಣಿಗಳಿಂದ ಯಾವುದೇ ಹಾನಿಗಳು ನಡೆಯದಂತೆ ಸೂಕ್ತ ಕ್ರಮವಹಿಸುವ ನಿಟ್ಟಿನಲ್ಲಿ ಹಾಗೂ ಏಪ್ರಿಲ್ ೨೫ ಮತ್ತು ೨೬ ರಂದು ಚುನಾವಣೆ ಪ್ರಯುಕ್ತ ಮತಗಟ್ಟೆಗಳಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳು ಸುಗಮವಾಗಿ ಕಾರ್ಯ ನಿರ್ವಹಿಸುವಂತೆ, ಈ ದಿನಗಳಂದು ಕಾಡಾನೆ ಹಾಗೂ ವನ್ಯಪ್ರಾಣಿಗಳಿಂದ ಯಾವುದೇ ಅವಘಡಗಳು ಸಂಭವಿಸದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಅರಣ್ಯ ಇಲಾಖೆ ಕೈಗೊಂಡಿದೆ.

ಚುನಾವಣೆ ಪೂರ್ವ ಅವಧಿ ಹಾಗೂ ಚುನಾವಣೆ ದಿನಗಳಂದು ವನ್ಯಪ್ರಾಣಿಗಳ ಹಾವಳಿ ಇರುವ ಮತಗಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಓಡಾಡುವ ಸಾಧ್ಯತೆ ಇರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಸ್ತ್ರ ಸಜ್ಜೀತ ಸಿಬ್ಬಂದಿ, ವಾಹನ ಮತ್ತು ಅವಶ್ಯವಿರುವ ಪರಿಕರಗಳ ಸಮೇತ ಗಸ್ತು ತಿರುಗಿ ಸಾರ್ವಜನಿಕರಿಗೆ ಕಾಡಾನೆಗಳು ಇರುವ ಬಗ್ಗೆ ಹಾಗೂ ಸಾರ್ವಜನಿಕರು ಎಚ್ಚರವಾಗಿರುವಂತೆ ಅಗತ್ಯ ಮಾಹಿತಿ ನೀಡಲಾಗುತ್ತಿದೆ.

ಸಾರ್ವಜನಿಕರು, ಚುನಾವಣಾ ಅಧಿಕಾರಿಗಳು ವನ್ಯಪ್ರಾಣಿಗಳು ಹಾಗೂ ಕಾಡಾನೆಗಳು ಕಂಡು ಬಂದಲ್ಲಿ ಸ್ಥಳೀಯ ಸಮೀಪದ ಅರಣ್ಯ ಕಛೇರಿಗಳಿಗೆ ತುರ್ತಾಗಿ ಮಾಹಿತಿ ಒದಗಿಸಲು ಕೋರಿದೆ ಹಾಗೂ ಆನೆ ಕಾರ್ಯಪಡೆ ತಂಡಗಳು, ೨೪/೭ ಕರ್ತವ್ಯ ನಿರ್ವಹಿಸುತ್ತಿದ್ದು, ಮೂಡಿಗೆರೆ. ಆಲ್ದೂರು. ಮುತ್ತೋಡಿ ಹಾಗೂ ಚಿಕ್ಕಮಗಳೂರು ವಲಯಗಳಲ್ಲಿ ಲೋಕಸಭಾ ಚುನಾವಣೆಗಳಿಗೆ ಯಾವುದೇ ಅಡಚಣೆ ಉಂಟಾಗದಂತೆ ಕ್ರಮವಹಿಸಲಾಗಿದೆ.

ಮತಗಟ್ಟೆಗಳಲ್ಲಿ ಕಾಡಾನೆಗಳು ಕಂಡು ಬಂದಲ್ಲಿ ಈ ದೂರವಾಣಿ ಸಂಖ್ಯೆಗಳಿಗೆ ಮಾಹಿತಿ ಒದಗಿಸುವಂತೆ ಚಿಕ್ಕಮಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್. ರಮೇಶ್ ಬಾಬು ತಿಳಿಸಿದ್ದಾರೆ.

ಚಿಕ್ಕಮಗಳೂರು ವಿಭಾಗ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ದೂ.ಸಂ. ೦೮೨೬೨-೨೩೮೮೦೦, ಮೊ.ಸಂ. ೯೪೮೧೯ ೯೦೮೦೨, ಚಿಕ್ಕಮಗಳೂರು ಜಿಲ್ಲಾ ಚುನಾವಣಾ ನಿಯಂತ್ರಣ ವಿಭಾಗ ದೂ.ಸಂ. ೧೯೫೦, ಚಿಕ್ಕಮಗಳೂರು ತಾಲ್ಲೂಕು ಚುನಾವಣಾ ನಿಯಂತ್ರಣ ವಿಭಾಗ ದೂ.ಸಂ. ೧೮೦೦೪೨೫೬೧೩೦, ಮೂಡಿಗೆರೆ ತಾಲ್ಲೂಕು ಚುನಾವಣಾ ನಿಯಂತ್ರಣ ವಿಭಾಗ ದೂ.ಸಂ. ೧೮೦೦೪೨೫೬೧೧೪, ಚಿಕ್ಕಮಗಳೂರು ವಲಯ ದೂ.ಸಂ. ೦೮೨೬೨-೨೩೮೮೦೮, ಮೊ.ಸಂ. ೯೧೮೧೯೯೦೮೦೭, ಮುತ್ತೋಡಿ ವಲಯ ದೂ.ಸಂ. ೦೮೨೬೨-೨೪೮೩೯೫, ಮೊ.ಸಂ. ೯೪೮೧೯೯೦೮೧೧, ಆಲ್ದೂರು ವಲಯ ದೂ.ಸಂ. ೦೮೨೬೨-೨೫೦೦೦೭, ಮೊ.ಸಂ. ೯೪೮೧೯೯೦೮೧೨, ಮೂಡಿಗೆರೆ ವಲಯ ದೂ.ಸಂ. ೦೮೨೬೩-೨೨೦೪೩೮, ಮೊ.ಸಂ. ೯೪೮೧೯೯೦೮೧೩, ೭೨೦೪೦೦೪೨೬೧.

The forest department is on alert in sensitive and highly sensitive polling stations