ಚಿಕ್ಕಮಗಳೂರು: ಭಾರತ ಹವಾಮಾನ ಇಲಾಖೆ ೨೦೨೪ರ ಹವಾಮಾನ ಮುನ್ಸೂಚನೆಯಲ್ಲಿ ಈ ಬಾರಿ ಉತ್ತಮ ಮುಂಗಾರಿನ ಸಂಭವನೀಯತೆಯನ್ನು ತಿಳಿಸಿರುತ್ತದೆ. ಈ ಹಿನ್ನೆಲೆಯಲ್ಲಿ ಕೃಷಿ ಉತ್ಪಾದನೆ ಹಾಗೂ ರೈತರ ಆದಾಯ ಹೆಚ್ಚಳಕ್ಕೆ ಸಿದ್ಧತೆಗಳನ್ನು ಕೈಗೊಳ್ಳಬೇಕಿದೆ.
ಮಾಗಿ ಉಳುಮೆಗಿಂತ ಮೊದಲು ಪೋಷಕಾಂಶಗಳ ಪರೀಕ್ಷೆಗಾಗಿ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ನಿಯಮಿತವಾಗಿ ಮಣ್ಣು ಪರೀಕ್ಷೆಗಳನ್ನು ಮಾಡಿಸುವುದು.
ಏಪ್ರಿಲ್ ಕೊನೆ ಹಾಗೂ ಮೇ ತಿಂಗಳಲ್ಲಿ ಮಳೆ ಮುನ್ಸೂಚನೆಯಿರುವುದರಿಂದ ಮಾಗಿ ಉಳುಮೆ ಕೈಗೊಂಡು ಮಣ್ಣು ಮತ್ತು ನೀರು ಸಂರಕ್ಷಣೆಗೆ ಒತ್ತು ನೀಡಬೇಕು ಹಾಗೂ ಜಮೀನಿನಲ್ಲಿರುವ ಎಲ್ಲಾ ಕಳೆಗಳನ್ನು ತೆಗೆದು ಸ್ವಚ್ಛಗೊಳಿಸಬೇಕು.
ಕಳೆದ ಸಾಲಿನಲ್ಲಿ ಮಳೆಯ ಕೊರತೆ ಹಾಗೂ ಕುಸಿದಿರುವ ಅಂತರ್ಜಲ ಮಟ್ಟದಿಂದ, ಈ ಬಾರಿ ಮಣ್ಣಿನಲ್ಲಿ ತೇವಾಂಶದ ಕೊರತೆಯಿದೆ. ಕೆರೆಕಟ್ಟೆ ಹಾಗೂ ಅಣೆಕಟ್ಟುಗಳಿಗೆ ನೀರಿನ ಆಗಮನ ವಿಳಂಬವಾಗುವ ಸಾಧ್ಯತೆಯಿದೆ. ಆದ್ದರಿಂದ ಮಧ್ಯಮಾವಧಿ ಹಾಗೂ ಅಲ್ಪಾವಧಿ ತಳಿಗಳ ಬಿತ್ತನೆಗೆ ಸಿದ್ಧತೆ ನಡೆಸಬೇಕು.
ಮಳೆನೀರಿನ ಸಂರಕ್ಷಣೆಗೆ ಬದು ಹಾಗೂ ಕೃಷಿ ಹೊಂಡಗಳನ್ನು ಸುಸ್ಥಿತಿಯಲ್ಲಿ ಕಾಪಾಡಿಕೊಳ್ಳಬೇಕು. ಬೆಳೆಗಳ ಕೊಯ್ಲು ಮುಗಿದ ಕೂಡಲೇ ರೈತರು ಒಡ್ಡು/ ಬದುಗಳನ್ನು ಸುವ್ಯವಸ್ಥಿತಗೊಳಿಸುವುದು, ಕೃಷಿಯೊಂಡದ ಒಳಹರಿವು ಮತ್ತು ಹೊರ ಹರಿವು ಮಾರ್ಗಗಳ ದುರಸ್ತಿ, ಕೃಷಿಹೊಂಡದಲ್ಲಿ ಅಥವಾ ಬದುಗಳ ಮೇಲೆ ಬೆಳೆದ ಎಲ್ಲಾ ಪೊದೆಗಳು, ಕಳೆಗಳನ್ನು ತೆಗೆದುಹಾಕುವುದು. ರೈತರು ಕೃಷಿ ಹೊಂಡಗಳಲ್ಲಿ ಹೂಳು ತೆಗೆಯುವ ಮೂಲಕ ಮತ್ತು ಹೂಳು ತೆಗೆದ ಮಣ್ಣನ್ನು ಮತ್ತೆ ಜಮೀನಿಗೆ ಹಾಕುವ ಮೂಲಕ ಅವುಗಳನ್ನು ಆಳಗೊಳಿಸಬಹುದು.
ಬೇಸಿಗೆ ಅಥವಾ ಮುಂಗಾರು ಪೂರ್ವ ಮಳೆಗಳ ಸಂಪೂರ್ಣ ಲಾಭ ಪಡೆಯಲು ರೈತರು ಕೃಷಿ ಭೂಮಿಯ ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದು.
ಎರಡನೆ ಅಥವಾ ಮೂರನೆ ಮಳೆ ನಂತರ, ಭೂಮಿ ಹದಗೊಳಿಸಿ ಹಸಿರೆಲೆ ಗೊಬ್ಬರಗಳಾದ ಡಯಾಂಚ, ಸೆಣಬು, ಹುರುಳಿಯನ್ನು ೪೫-೬೦ ದಿನಗಳಲ್ಲಿ ಹಸಿರೆಲೆ ಗೊಬ್ಬರವಾಗಿ ಅಥವಾ ದ್ವಿದಳ ಬೆಳೆಗಳಾದ ಅವರೆ, ಅಲಸಂದೆಯನ್ನು ಬಿತ್ತಿ ಹಸಿಕಾಯಿ ಕಿತ್ತ ನಂತರ ಸೊಪ್ಪನ್ನು ಭೂಮಿಗೆ ಸೇರಿಸುವುದು. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚುವುದಲ್ಲದೆ, ಮಣ್ಣಿನಲ್ಲಿ ತೇವಾಂಶವನ್ನು ಹೆಚ್ಚಿನ ಕಾಲ ಸಂಗ್ರಹಿಸಲು ಸಾಧ್ಯವಾಗುತ್ತದೆ.
ಸಾವಯವ ಗೊಬ್ಬರಗಳು ಮಣ್ಣಿನ ಆರೋಗ್ಯ ಕಾಪಾಡುವಲ್ಲಿ ಹೆಚ್ಚಿನ ಪಾತ್ರ ನಿರ್ವಹಿಸುತ್ತವೆ. ಈ ನಿಟ್ಟಿನಲ್ಲಿ ಶಿಫಾರಿತ ಕೊಟ್ಟಿಗೆ ಗೊಬ್ಬರ / ಕಾಂಪೋಸ್ಟ್ ಗೊಬ್ಬರವನ್ನು ಬಿತ್ತನೆಗೆ ಕನಿಷ್ಠ ೧೫ ದಿನಗಳ ಮುಂಚಿತವಾಗಿ ಮಣ್ಣಿಗೆ ಸೇರಿಸಲು ಕ್ರಮಕೈಗೊಳ್ಳಬೇಕು. ಕೊಟ್ಟಿಗೆ ಗೊಬ್ಬರದ ಲಭ್ಯತೆ ಕಡಿಮೆಯಿದ್ದಲ್ಲಿ ಅಥವಾ ಹೆಚ್ಚಿನ ಸಾವಯವ ಅಂಶ ಸೇರಿಸುವ ನಿಟ್ಟಿನಲ್ಲಿ ವಿವಿಧ ‘ಮರಗಳ ಹಸಿರು ಸೊಪ್ಪನ್ನು ಅಥವಾ ರಸ್ತೆ ಬದಿಯಲ್ಲಿನ ಕಳೆಗಳನ್ನು ಹೂವಾಡುವ ಹಂತಕ್ಕಿಂತ ಮುಂಚಿತವಾಗಿ ಮಣ್ಣಿಗೆ ಸೇರಿಸಬಹುದು. ಏಕ ಬೆಳೆ ಪದ್ಧತಿ ಬೆಳೆಯುವ ಬದಲು ಅಂತರ ಬೆಳೆಯನ್ನು ಬೆಳೆಯಬೇಕು.
ಜಿಲ್ಲೆಗೆ ಪೂರ್ವ ಮುಂಗಾರಿಗೆ ೯೦೦೦ ಹೆಕ್ಟೇರ್ ಗುರಿ ಹೊಂದಲಾಗಿದ್ದು, ಪೂರ್ವ ಮುಂಗಾರು ಬೆಳೆಗಳಿಗೆ ಅಗತ್ಯವಾದ ರಸಗೊಬ್ಬರ ದಾಸ್ತಾನು ಇರುತ್ತದೆ. ವಿವಿಧ ಬೆಳೆಗಳಾದ ಹೆಸರು, ಉದ್ದು, ಅಲಸಂದೆ, ನೆಲಗಡಲೆ ಅಗತ್ಯವಾದ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ರೈತ ಸಂಪರ್ಕ ಕೇಂದ್ರಗಳ ಮೂಲಕ ಸಕಾಲದಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ಪೂರೈಸಲು ಇಲಾಖೆಯು ಸಜ್ಜುಗೊಂಡಿದೆ.
ರೈತರು ಅಧಿಕೃತ ಬಿತ್ತನೆ ಬೀಜ ಮಾರಾಟಗಾರರಿಂದಲೇ ಬಿತ್ತನೆ ಬೀಜವನ್ನು ಖರೀದಿಸುವುದು. ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿಸಿದಾಗ ತಪ್ಪದೇ ಅಧಿಕೃತ ರಶೀದಿ ಪಡೆಯಬೇಕು. ಬಿತ್ತನೆ ಬೀಜ ರಶೀದಿಯಲ್ಲಿ ಲಾಟ್‌ನಂಬರ್ ನಮೂದಿಸಿರಬೇಕು. ಬಿತ್ತನೆ ಬೀಜದ ಚೀಲ, ಸ್ವಲ್ಪ ಪ್ರಮಾಣದ ಬಿತ್ತನೆ ಬೀಜ, ದೃಢೀಕರಣದ ಬಗ್ಗೆ ಲಗತ್ತಿಸಿರುವ ಟ್ಯಾಗುಗಳನ್ನು ಬೆಳೆ ಕಟಾವು ಆಗುವವರೆಗೆ ಸುರಕ್ಷಿತವಾಗಿ ಕಾಯ್ದಿಟ್ಟುಕೊಳ್ಳಬೇಕು.
ಬಿತ್ತನೆ ಬೀಜವನ್ನು ಪೀಡೆನಾಶಕಗಳಿಂದ ಉಪಚರಿಸಲಾಗಿದೆಯೆ? ಎಂಬುದನ್ನು ಗಮನಿಸುವುದು ಹಾಗೂ ಒಂದು ವೇಳೆ ಬಿತ್ತನೆ ಬೀಜಗಳು ಬೀಜೋಪಚಾರವಾಗಿರದಿದ್ದಲ್ಲಿ ಬೀಜದಿಂದ ಹಾಗೂ ಮಣ್ಣಿನಿಂದ ಹರಡುವ ರೋಗ ಮತ್ತು ಕೀಟಗಳಿಂದ ಬೆಳೆಗಳನ್ನು ರಕ್ಷಿಸಲು ಬೀಜವನ್ನು ಬಿತ್ತನೆಗೆ ಉಪಯೋಗಿಸುವ ಮೊದಲು ಪೀಡೆನಾಶಕಗಳಿಂದ ಉಪಚರಿಸಿ ಬಿತ್ತುವುದರಿಂದ ಪೀಡೆಗಳ ನಿರ್ವಹಣೆಗಳೊಂದಿಗೆ ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Tips for farmers on pre-monsoon preparedness