ಶೃಂಗೇರಿ: ತಮ್ಮದೇ ಪಕ್ಷ ಅಧಿಕಾರದಲ್ಲಿದ್ದರೂ, ಅಭಿವೃದ್ಧಿಯಲ್ಲಿ ಶೂನ್ಯವಾಗಿದ್ದು, ಕ್ಷೇತ್ರದ ಜನತೆ ಅಸಮರ್ಥ ಶಾಸಕರನ್ನು ಹೊಂದಿದೆ ಎಂದು ಮಾಜಿ ಶಾಸಕ ಡಿ.ಎನ್.ಜೀವರಾಜ್ ಟೀಕಿಸಿದರು.

ಮೆಣಸೆಯಲ್ಲಿ ಭಾರತೀಯ ಜನತಾ ಪಕ್ಷ ಲೋಕಸಭೆ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಈ ಹಿಂದೆ ಶಾಸಕರಾಗಿದ್ದಾಗ ಬಿಜೆಪಿ ಅಧಿಕಾರದಲ್ಲಿದ್ದು, ಅಭಿವೃದ್ಧಿಗೆ ತೊಡಕಾಗಿದೆ ಎಂದು ಹೇಳುತ್ತಿದ್ದ ಶಾಸಕರು ಈಗ ಪೂರ್ಣ ಬಹುಮತದ ಕಾಂಗ್ರೆಸ್ ಸರಕಾರವಿದ್ದರೂ, ಯಾವುದೇ ಅಭಿವೃದ್ಧಿ ಕಾರ್ಯವಾಗುತ್ತಿಲ್ಲ.

ನಾನು ಶಾಸಕನಾದ ಸಂದರ್ಭದಲ್ಲಿ ಶೃಂಗೇರಿಗೆ ಕೆಎಸ್‌ಆರ್‌ಟಿಸಿ ಡಿಪೋ ಮಂಜೂರಾತಿಯಾಗಿದ್ದು, ಇದಕ್ಕೆ ಸ್ಥಳ ಒದಗಿಸಲಾಗದ ಸ್ಥಿತಿ ಶಾಸಕರದ್ದಾಗಿದೆ. ೧೦೦ ಬೆಡ್ ಆಸ್ಪತ್ರೆ ಮಂಜೂರಾಗಿದ್ದರೂ, ಇನ್ನೂ ಸ್ಥಳದ ಗೊಂದಲ ಮುಂದುವರೆದಿದ್ದು, ಆಸ್ಪತ್ರೆಯನ್ನು ಗ್ರಾಮೀಣ ಭಾಗದಲ್ಲಿ ಸ್ಥಾಪಿಸಿದರೆ ರೋಗಿಗಳಿಗೆ ಅನುಕೂಲವಾಗದು.

ಅದನ್ನು ಪಟ್ಟಣದಲ್ಲಿಯೇ ಆರಂಬಿಸಬೇಕು. ದೇಶದ ಉಳಿವಿಗಾಗಿ ಬಿಜೆಪಿಯನ್ನು ಬೆಂಬಲಿಸಬೇಕಾಗಿದೆ.ತಳ ಹಂತದಿಂದ ರಾಜಕೀಯ ಅನುಭವ ಪಡೆದಿರುವ ಕೋಟ ಶ್ರೀನಿವಾಸ ಪೂಜಾರಿ ಹಿಂದೂ ದೇವಸ್ಥಾನದ ಆದಾಯ ಹಿಂದೂ ದೇಗುಲಗಳಿಗೆ ಮಾತ್ರ ಉಪಯೋಗವಾಗುವಂತೆ ಮಾಡಿದವರು.ಕಾಂಗ್ರೆಸ್ ಸರಕಾರ ಜನರಿಗೆ ಗ್ಯಾರಂಟಿ ಯೋಜನೆಯಿಂದ ಕೊಟ್ಟಿದ್ದಕ್ಕಿಂತ ಕಿತ್ತುಕೊಂಡಿರುವುದೇ ಹೆಚ್ಚಾಗಿದೆ ಎಂದರು.

ಜಾತ್ಯತೀತ ಜನತಾ ದಳದ ಅಧ್ಯಕ್ಷ ಭರತ್‌ಗೌಡ ಮಾತನಾಡಿ, ದೇವೇಗೌಡರ ದೂರದೃಷ್ಠಿತ್ವ ಮತ್ತು ದೇಶದ ಅಳಿವು ಉಳಿವಿನ ಪ್ರಶ್ನೆಯಿಂದ ಜೆಡಿಎಸ್ ಬಿಜೆಪಿಗೆ ಬೆಂಬಲಿಸಿದೆ. ಪಕ್ಷದ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ವಕ್ತಾರ ಬಿ.ಶಿವಶಂಕರ್, ಉಮೇಶ್, ರಾಮಕೃಷ್ಣರಾವ್, ಕೆ.ಎಸ್.ರಮೇಶ್,ದಿನೇಶ್ ಹೆಗ್ಡೆ, ಅಜಿತ್ ಶೆಟ್ಟಿ, ಮೆ.ನಾ.ರಮೇಶ್, ವೇಣುಗೋಪಾಲ್, ನೂತನಕುಮಾರ್, ಆನಂದಸ್ವಾಮಿ ಮತ್ತಿತರರರು ಇದ್ದರು.
೨೦ಶ್ರೀ೧-ಶೃಂಗೇರಿ ತಾಲೂಕಿನ ಮೆಣಸೆಯಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾಜಿ ಶಾಸಕ ಡಿ.ಎನ್.ಜೀವರಾಜ್ ಮಾತನಾಡಿದರು.

The people of Sringeri constituency have incompetent MLAs