ಚಿಕ್ಕಮಗಳೂರು: ವರ್ಷ ತುಂಬಿದ, ಮೊದಲ ಬಾರಿ ಮತದಾನ ಮಾಡುವವರಿಗೆ ನಗರಸಭೆ ಹಾಗೂ ತಾಲ್ಲೂಕು ಪಂಚಾಯ್ತಿ ವತಿಯಿಂದ ಗುಲಾಬಿ ಹೂ ನೀಡಿ ಮತದಾನಕ್ಕೆ ಪ್ರೇರೇಪಣೆ ನೀಡಲಾಯಿತು.

ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ನಗರದ ಬೇಲೂರು ರಸ್ತೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಕೇಕ್ ಕತ್ತರಿಸಿ, ಸಿಹಿ ತಿನ್ನಿಸಿ ಕಾರ್ಯಕ್ರಮ ನಡೆಸಲಾಯಿತು.

ತಾ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ಮಾತನಾಡಿ, ಈ ಬಾರಿ ಲೋಸಭೆ ಚುನವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಸಲುವಾಗಿ ನಮ್ಮ ನಡೆ ಮತಗಟ್ಟೆ ಕಡೆ ಎನ್ನುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಮ್ಮ ಮತದಾರರು ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿ ಮತ ಚಲಾಯಿಸಬೇಕು ಎದು ಮನವಿ ಮಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಮತದಾನ ಪ್ರಮಾಣ ಉತ್ತಮವಾಗಿದೆ. ಆದರೆ ನಗರ ಪ್ರದೇಶಗಳಲ್ಲಿ ಅಷ್ಟೊಂದು ಆಸಕ್ತಿಯಿಂದ ಭಾಗವಹಿಸುತ್ತಿಲ್ಲ. ಈ ಕಾರಣಕ್ಕೆ ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಪ್ರತಿಯೊಬ್ಬರೂ ಏಪ್ರಿಲ್ ೨೬ ರಂದು ಕಡ್ಡಾಯವಾಗಿ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಬೇಕು. ಈ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಯಶಸ್ವಿಗೊಳಿಸಬೇಕು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ನೀಡಿರುವ ಅತ್ಯುನ್ನತ ಹಕ್ಕು ಮತದಾನದ ಹಕ್ಕಾಗಿದೆ. ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ಯಾವುದೇ ರೀತಿಯ ಉದಾಸೀನತೆ ಬೇಡ. ದೇಶದ ಪ್ರಗತಿಗೆ ನೀಡುವ ಸಣ್ಣ ಕಾಣಿಕೆ ಎಂದರೆ ಅದು ಮತದಾನ ಎಂದರು.

ಏಪ್ರಿಲ್ ೨೬ ನ್ನು ದೇಶಕ್ಕಾಗಿ ಮುಡುಪಾಗಿಡಬೇಕು. ಯಾವುದೇ ಕೆಲಸದ ಒತ್ತಡವಿದ್ದರೂ ಅದನ್ನು ಬದಿಗಿಟ್ಟು ಕಡ್ಡಾಯವಾಗಿ ಮತದಾನದಲ್ಲಿ ಭಾಗವಹಿಸಬೇಕು. ನಗರಸಭೆಯ ಅಧಿಕಾರಿ, ಸಿಬ್ಬಂದಿಗಳು ವ್ಯಾಪ್ತಿಯ ಮತಗಟ್ಟೆಗಳಲ್ಲಿ ಮತದಾರರನ್ನು ಮತಗಟ್ಟೆಗೆ ಬರುವಂತೆ ಪ್ರೇರೇಪಣೆ ಮೂಡಿಸಬೇಕು ಎಂದರು.

ಪೌರಾಯುಕ್ತ ಕೃಷ್ಣಮೂರ್ತಿ ಮಾತನಾಡಿ, ಮತದಾರರಲ್ಲಿ ಅರಿವು ಮೂಡಿಸುವುದು ಮಹತ್ವದ ಕೆಲಸವಾಗಿದೆ. ಮತದಾರರು ಕಡ್ಡಾಯವಾಗಿ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಬೇಕು. ಯಾವುದೇ ಆಸೆ, ಆಮಿಷಗಳಿಗೆ ಒಳಗಾಗಬಾರದು ಎಂದರು.

ನಗರ ಪ್ರದೇಶದಲ್ಲಿ ಕಡಿಮೆ ಪ್ರಮಾಣದ ಮತದಾನ ಆಗುತ್ತಿದ್ದು, ಈ ಬಾರಿ ಶೇ.೧೦೦ ರಷ್ಟು ಮತದಾನ ಆಗುವಂತೆ ಕ್ರಮ ಕೈಗೊಳ್ಳಲು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ಮನೆಗಳಲ್ಲಿ ಪ್ರತಿಯೊಬ್ಬರು ಇತರೆ ಸದಸ್ಯರಿಗೂ ಮತದಾನ ಮಾಡಲು ಪ್ರೇರೇಪಿಸಬೇಕು ಎಂದು ಕರೆ ನೀಡಿದರು.

ನಗರಸಭೆ ಕಂದಾಯಾಧಿಕಾರಿ ರಮೇಶ್ ನಾಯ್ಡು, ಆರೋಗ್ಯ ನಿರೀಕ್ಷಕರಾದ ಶಶಿರಾಜ್ ಅರಸ್, ರಂಗಪ್ಪ, ಪರಿಸರ ಅಭಿಯಂತರರಾದ ತೇಜಸ್ವಿನಿ ಇತರರು ಇದ್ದರು.

Encouragement to vote by giving rose flower on behalf of Municipal Council and Taluk Panchayat