ಮೊರೆನಾ: ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಿಂದ ರಾಜಸ್ಥಾನದ ದೇವಸ್ಥಾನಕ್ಕೆ ತೆರಳಲು ಚಂಬಲ್ ನದಿ ದಾಟುತ್ತಿದ್ದಾಗ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಐವರು ನಾಪತ್ತೆಯಾಗಿದ್ದಾರೆ.

17 ಜನರ ತಂಡ ದೇವಿಯ ದರ್ಶನ ಪಡೆಯಲು ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಓರ್ವ ವ್ಯಕ್ತಿ ಮತ್ತು ಮಹಿಳೆ ಮೃತದೇಹಗಳನ್ನು ಮಧ್ಯಪ್ರದೇಶ ಮತ್ತು ರಾಜಸ್ಥಾನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಾಪತ್ತೆಯಾಗಿರುವ ಐವರನ್ನು ರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ನದಿಯು ಮಧ್ಯಪ್ರದೇಶದ ಗ್ವಾಲಿಯರ್-ಚಂಬಲ್ ಪ್ರದೇಶವನ್ನು ರಾಜಸ್ಥಾನದ ಬ್ರಜ್ ಪ್ರದೇಶದೊಂದಿಗೆ ವಿಭಜಿಸುತ್ತದೆ.

ಎಲ್ಲಾ 17 ಮಂದಿ ಗ್ವಾಲಿಯರ್-ಚಂಬಲ್ ಪ್ರದೇಶದ ಶಿವಪುರಿ ಜಿಲ್ಲೆಯ ಹಳ್ಳಿಯೊಂದರಿಂದ ಆಗಮಿಸಿದ್ದರು. ಪತ್ತೆಯಾದ ಮೃತದೇಹಗಳು 55 ವರ್ಷದ ದಿಯೋಕಿನಂದನ್ ಕುಶ್ವಾಹ್ ಮತ್ತು 40 ವರ್ಷದ ಕಲ್ಲೋ ಕುಶ್ವಾಹ್ ಎಂದು ತಿಳಿದುಬಂದಿದೆ. ಶಿವಪುರಿ ಜಿಲ್ಲೆಯ ತನ್ನ ಸ್ಥಳೀಯ ಗ್ರಾಮದಿಂದ ರಾಜಸ್ಥಾನದ ಕರೌಲಿ ಜಿಲ್ಲೆಯ ಕೈಲಾ ದೇವಿ ದೇವಸ್ಥಾನದವರೆಗೆ ಧಾರ್ಮಿಕ ಪಾದಯಾತ್ರೆ ಕೈಗೊಂಡಿದ್ದಾಗ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ.

ದಿಯೋಕಿನಂದನ್ ಕುಶ್ವಾಹ್ ಅವರ ಪತ್ನಿ ಅಲೋಪಾ ಕುಶ್ವಾಹ್, ರುಕ್ಮಿಣಿ ಕುಶ್ವಾಹ್, ಲವ್ಕುಶ್ ಕುಶ್ವಾಹ್ ಬ್ರಿಜ್ಮೋಹನ್ ಕುಶ್ವಾಹ್ ಮತ್ತು ರಶ್ಮಿ ಕುಶ್ವಾಹ್, ಎಲ್ಲಾ ಕುಟುಂಬ ಸದಸ್ಯರು ಅಥವಾ ಹತ್ತಿರದ ಸಂಬಂಧಿಗಳಾದ ಐವರು ನದಿಯಲ್ಲಿ ನಾಪತ್ತೆಯಾಗಿದ್ದಾರೆ.

ಇವರೆಲ್ಲರೂ ಶಿವಪುರಿ ಜಿಲ್ಲಾ ಕೇಂದ್ರದಿಂದ 22 ಕಿಮೀ ದೂರದಲ್ಲಿರುವ ಚಿಲ್ವಾಡ ಗ್ರಾಮದ ನಿವಾಸಿಗಳಾಗಿದ್ದು, ರಾಜಸ್ಥಾನದ ಕರೌಲಿ ಜಿಲ್ಲೆಯ ಕೈಲಾ ದೇವಿ ದೇವಸ್ಥಾನಕ್ಕೆ ತೆರಳುತ್ತಿದ್ದರು. ರಾಜಸ್ಥಾನದ ಪೊಲೀಸರು ಮತ್ತು ರಕ್ಷಣಾ ಕಾರ್ಯಕರ್ತರು ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Two people drowned while crossing Chambal river