ಚಿಕ್ಕಮಗಳೂರು: ಸಣ್ಣ, ಸಣ್ಣ ಸಮುದಾಯ, ಶೋಷಿತ ವರ್ಗದ ಅಭಿವೃದ್ಧಿಗೆ ನಮ್ಮ ಕೈಲಾದ ಪ್ರಯತ್ನವನ್ನು ಪ್ರಮಾಣಿಕವಾಗಿ ಮಾಡುತ್ತೇನೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.

ಅವರು ಭಾನುವಾರ ನಗರದ ಉಪ್ಪಳ್ಳಿಯ ಬಸವರಾಜ್ ಲೇಔಟ್‌ನಲ್ಲಿ ಜಿಲ್ಲಾ ಶ್ರೀ ನಾರಾಯಣಗುರು ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ವನಮನ ಸಲ್ಲಿಸಿ ಸಮುದಾಯ ಜಾಗದಲ್ಲಿ ಸಸಿಗಳನ್ನು ನೆಟ್ಟಿ ಮಾತನಾಡಿದರು.

ಶೋಷಿತರು ಎಂದರೆ, ಯಾವುದೋ ಒಂದು ಜನಾಂಗವಲ್ಲ. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು, ಬ್ರಹ್ಮಶ್ರೀನಾರಾಯಣ ಗುರುಗಳು, ಬಿ.ಆರ್.ಅಂಬೇಡ್ಕರ್, ಕನಕದಾಸರಂತಹವರು ಶೋಷಿತ ವರ್ಗದ ಪರವಾಗಿ ಧ್ವನಿಯಾಗಿ ನಿಂತ ಪರಿಣಾಮ ಮಹಾ ಪುರುಷರಾಗಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೋಷಿತ ವರ್ಗದಿಂದ ಬಂದ ಸಮಾಜ ಯಾವುದೇ ಇದ್ದರೂ ಅವುಗಳ ಪರವಾಗಿ ಖುಷಿಯಿಂದಲೇ ಪುರಸ್ಕಾರ ಮಾಡುತ್ತಾರೆ. ಆದರೆ ಈಗ ನಮ್ಮ ಸರ್ಕಾರ ಐದು ಗ್ಯಾರಂಟಿಗಳನ್ನು ಕೊಟ್ಟ ಸಂದರ್ಭದಲ್ಲಿ ೫೦ ಸಾವಿರ ಕೋಟಿಗೂ ಹೆಚ್ಚು ಅನುದಾನವನ್ನು ನಮ್ಮ ಸರ್ಕಾರ ಹೊಂದಿಸುವ ಸಂದರ್ಭದಲ್ಲಿ ಮೊದಲ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಯಾವುದೇ ಕ್ಷೇತ್ರ, ಸಮುದಾಯಕ್ಕೆ ಕೊಟ್ಟಿಲ್ಲ. ಇನ್ನು ಕೇವಲ ೮ ತಿಂಗಳ ನಂತರ ಮಂಡಿಸುವ ಬಜೆಟ್‌ನಲ್ಲಿ ಬಹುತೇಕ ಶೋಷಿತ ವರ್ಗದ ಸಮಾಜ ಸೇರಿ ಎಲ್ಲಾ ಸಮಾಜಕ್ಕೆ ವಿಶೇಷ ಅನುದಾನ ಕೊಡುತ್ತಾರೆ. ಅದನ್ನು ಕೊಡಿಸುವ ಕೆಲಸವನ್ನು ನಾವು ಮಾಡುತ್ತೇವೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ನಾರಾಯಣಗುರು ಸಮುದಾಯ ಭವನದ ಜಾಗವನ್ನು ಮಂಜೂರು ಮಾಡಿಸುವಲ್ಲಿ ನಾವೂ ಸಹ ಸಹಕರಿಸಿದ್ದೇವೆ. ಭವನ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ತರಲು ನಾವೂ ಶ್ರಮಿಸುತ್ತೇವೆ. ರಾಜ್ಯಸಭಾ ಸದಸ್ಯ ಜೈರಾಂ ರಮೇಶ್ ಮತ್ತು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್‌ರಿಂದಲೂ ಅನುದಾನ ತರಲು ಸಹಕರಿಸುತ್ತೇವೆ ಎಂದರು.

ಕಾಂಗ್ರೆಸ್ ಮುಖಂಡ ಎಂ.ಎಲ್.ಮೂರ್ತಿ ಮಾತನಾಡಿ, ಪ್ರತಿ ವರ್ಷಕ್ಕೆ ೧ ಕೋಟಿ ರೂ.ನಂತೆ ಸರ್ಕಾರದಿಂದ ನಾರಾಯಣಗುರು ಭವನ ನಿರ್ಮಾಣಕ್ಕೆ ಅನುದಾನ ಕೊಡಿಸುವ ಕೆಲಸ ಶಾಸಕರಿಂದ ಆಗಬೇಕು. ಇದಕ್ಕೆ ಈ ಪ್ರಯತ್ನಕ್ಕೆ ನಾವೂ ಸಹ ಸಹಕರಿಸುತ್ತೇವೆ ಎಂದು ಭರವಸೆ ನೀಡಿದರು.

ಜಿಲ್ಲಾ ಶ್ರೀ ನಾರಾಯಣಗುರು ಸಮಿತಿ ಅದ್ಯಕ್ಷರಾದ ದಾಸರಹಳ್ಳಿ ಕೃಷ್ಣಪ್ಪ ಮಾತನಾಡಿ ನಮ್ಮ ಸಮಾಜದ ಸಮುದಾಯ ಭವನಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನ ನೀಡಬೇಕು, ಉತ್ತಮ ಸಮುದಾಯ ನಿರ್ಮಾಣ ಮಾಡುವುದರ ಜೊತೆಗೆ ಜನಾಂಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಸತಿ ನಿಲಯಗಳನ್ನು ಮುಂದಿನ ದಿನಗಳಲ್ಲಿ ಪ್ರಾರಂಭ ಮಾಡಲಾಗುವುದು ಎಂದರು.

ಸಮಾಜದ ಮುಖಂಡ ಕೆ.ಸಿ.ಶಾಂತಕುಮಾರ್, ಗುಣಶೇಖರ್ ಮಾದವನ್, ಕುಮಾರ್, ಶರತ್, ಚಂದ್ರು, ಶ್ರೀಧರ್, ಜಗಧೀಶ್, ಅಯ್ಯಪ್ಪ, ವಾಸು, ಜಯಪ್ರಕಾಶ್, ಕೃಷ್ಣಮೂರ್ತಿ, ಚಂದ್ರು ಕೋಟೆ, ಚಂದ್ರು ಉಪ್ಪಳ್ಳಿ, ಗಿರಿಜಾ, ಶಶಿಕಲಾ, ತಾರಾ, ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ತರೀಕೆರೆ ತಾಲ್ಲೂಕು ನಾರಾಯಣಗುರು ಸಮಿತಿ ಅದ್ಯಕ್ಷ ಮನೋಜ್‌ಕುಮಾರ್, ಮೂಡಿಗೆರೆ ಅದ್ಯಕ್ಷ ಉನ್ನಿಕೃಷ್ಣ ಇತರರು ಭಾಗವಹಿಸಿದ್ದರು.

Zilla Sri Narayanaguru Committee