ಕೊಲೊಂಬೊ: ಏಷ್ಯಾಕಪ್ 2023 ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಟೀಂ ಇಂಡಿಯಾದ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. 2ನೇ ಪಂದ್ಯ ಡಕ್‌ವರ್ತ್ ನಿಯಮದನ್ವಯ ಗೆಲುವು ದಾಖಲಿಸಿತ್ತು. ಇನ್ನು ಸೂಪರ್ 4 ಹಂತದಲ್ಲಿ ಪಾಕ್ ವಿರುದ್ಧ ಮತ್ತೆ ಮಳೆಯಿಂದಾಗಿ ಮೀಸಲು ದಿನಕ್ಕೆ ಕಾಲಿಟ್ಟಿತು.

ಮಳೆಯಿಂದ  ಅಡೆ  ತಡೆ ಎದುರಿಸಿದರೂ ಸಂಪೂರ್ಣ ಪಂದ್ಯ ಆಡುವ ಅವಕಾಶವನ್ನು ಟೀಂ ಇಂಡಿಯಾ ಸರಿಯಾಗಿ ಉಪಯೋಗಿಸಿಕೊಂಡಿತು. ಪಾಕಿಸ್ತಾನ ವಿರುದ್ಧದ ರೋಚಕ ಹಾಗೂ ಮಹತ್ವದ ಪಂದ್ಯದಲ್ಲಿ ರೋಹಿತ್ ಸೈನ್ಯ 228 ರನ್ ಭರ್ಜರಿ ಗೆಲುವು ದಾಖಲಿಸಿದೆ. ಭಾರತ ನೀಡಿದ 357 ರನ್ ಟಾರ್ಗೆಟ್ ಚೇಸ್ ಮಾಡಲು ಕಣಕ್ಕಿಳಿದ ಪಾಕಿಸ್ತಾನ 32 ಓವರ್‌ನಲ್ಲಿ 128ರನ್‌ಗೆ ಆಲೌಟ್ ಆಗಿದೆ. ಏಕದಿನ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ವಿರುದ್ದ ಭಾರತ ಅತೀ ದೊಡ್ಡ ಅಂತರದ ಗೆಲುವು ದಾಖಲಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಶತಕ, ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಹಾಫ್ ಸೆಂಚುರಿಯಿಂದ ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ 356 ರನ್ ಸಿಡಿಸಿತ್ತು. ಬೃಹತ್ ಗುರಿ ಪಾಕಿಸ್ತಾನ ತಂಡದ ಮೇಲೆ ಒತ್ತಡ ಹೆಚ್ಚಿಸಿತು. ಇತ್ತ ಟೀಂ ಇಂಡಿಯಾ ಮಾರಕ ದಾಳಿ ಆರಂಭಿಸಿತ್ತು. ಆರಂಭದಲ್ಲೇ ಜಸ್ಪ್ರೀತ್ ಬುಮ್ರಾ ದಾಳಿಗೆ ಪಾಕಿಸ್ತಾನ ಮೊದಲ ವಿಕೆಟ್ ಕೈಚೆಲ್ಲಿತು. ಇದರ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್, ಶಾರ್ದೂಲ್ ಠಾಕೂರ್ ಸಂಘಟಿತ ದಾಳಿ ಪಾಕಿಸ್ತಾನಕ್ಕೆ ಇನ್ನಿಲ್ಲದ ತಲೆನೋವು ತಂದಿಟ್ಟಿತ್ತು.

ಇಮಾಮ್ ಉಲ್ ಹಕ್ ಕೇವಲ 9 ರನ್‌ಗೆ ನಿರ್ಗಮಿಸಿದರೆ, ನಾಯಕ ಬಾಬರ್ ಅಜಮ್ 10 ರನ್ ಸಿಡಿಸಿ ವಿಕೆಟ್ ಕೈಚೆಲ್ಲಿದರು.  ಒಂದೆಡೆ ಕೆಲ ಕಾಲ ಮಳೆ ಅಡ್ಡಿಮಾಡಿತ್ತು. ಇನ್ನೇನು ಪಂದ್ಯ ಮತ್ತೆ ರದ್ದಾಗಲಿದೆ ಅನ್ನೋವಾಗಲೇ ಮಳೆ ನಿಂತಿತ್ತು. ಪಂದ್ಯ ಪುನರ್ ಆರಂಭಗೊಂಡ ಬೆನ್ನಲ್ಲೇ ಪಾಕಿಸ್ತಾನ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು.   ಮೊಹಮ್ಮದ್ ರಿಜ್ವಾನ್ 2 ರನ್ ಸಿಡಿಸಿ ಔಟಾದರು. 27 ರನ್ ಸಿಡಿಸಿ ಆಸರೆಯಾಗಿದ್ದ ಫಖರ್ ಜಮಾನ್ ಪೆವಿಲಿಯನ್ ಸೇರಿಕೊಂಡರು.

ಅಘಾ ಸಲ್ಮಾನ್ ಹಾಗೂ ಇಫ್ತಿಕರ್ ಅಹಮ್ಮದ್ ಜೊತೆಯಾಟ ಪಾಕಿಸ್ತಾನ ತಂಡಕ್ಕೆ ಬೂಸ್ಟರ್ ಡೋಸ್ ನೀಡಿತು. ಆದರೆ ಐಸಿಯು ಸೇರಿದ್ದ ಪಾಕಿಸ್ತಾನ ಚೇತರಿಸಿಕೊಳ್ಳಲಿಲ್ಲ. ಸಲ್ಮಾನ್ 23 ರನ್ ಸಿಡಿಸಿ ಔಟಾದರೆ, ಆಹಮ್ಮದ್ 23 ರನ್ ಕಾಣಿಕೆ ನೀಡಿ ವಿಕೆಟ್ ಒಪ್ಪಿಸಿದರು. ಶದಬ್ ಖಾನ್ 6 ರನ್ ಸಿಡಿಸಿ ಔಟಾದರು.

ನಸೀಮ್ ಶಾ ಹಾಗೂ  ಹ್ಯಾರಿಸ್ ರೌಫ್ ಗಾಯಗ ಕಾರಣ ಬ್ಯಾಟಿಂಗ್ ಮಾಡಲಿಲ್ಲ. ಹೀಗಾಗಿ ಪಾಕಿಸ್ತಾನ 32 ಓವರ್‌ಗಳಲ್ಲಿ 128 ರನ್‌ಗೆ ಆಲೌಟ್ ಆಯಿತು. ಭಾರತ 228ರನ್ ಭರ್ಜರಿ ಗೆಲುವು ದಾಖಲಿಸಿತು.  ಕುಲ್ದೀಪ್ ಯಾದವ್ 5 ವಿಕೆಟ್ ಕಬಳಿಸಿ ಮಿಂಚಿದರು. ಬುಮ್ರಾ, ಹಾರ್ದಿಕ್ ಹಾಗೂ ಶಾರ್ದೂಲ್ ಠಾಕೂರ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

A record 228 run victory for India against Pakistan