ಚಿಕ್ಕಮಗಳೂರು : ಜಿಲ್ಲಾದ್ಯಂತ ಬಾಲ ಮತ್ತು ಕಿಶೋರ ಕಾರ್ಮಿಕರ ಸಮೀಕ್ಷಾ ಕಾರ್ಯ ಕೈಗೊಳ್ಳಲು ಉದ್ದೇಶಿಸಲಾಗಿದ್ದು, ಪರಿಣಾಮಕಾರಿಯಾಗಿ ಇದನ್ನು ನಡೆಸುವಂತೆ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಸೂಚಿಸಿದ್ದಾರೆ.

ಗುರುವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಬಾಲ್ಯಾವಸ್ಥೆ ಹಾಗೂ ಕಿಶೋರಾವ್ಯಸ್ಥೆಯ ಕಾರ್ಮಿಕರ ಗುರುತಿಸುವಿಕೆ ಮತ್ತು ಸಮೀಕ್ಷೆಯನ್ನು ಮಾಡುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರಯ ೧೪ ವರ್ಷದೊಳಗಿನ ಮಕ್ಕಳು ಬಾಲ ಕಾರ್ಮಿಕ ಹಾಗೂ ೧೪ರಿಂದ ೧೮ ವರ್ಷದೊಳಗಿನ ಮಕ್ಕಳು ಕಿಶೋರಾವಸ್ಥೆ ಕಾರ್ಮಿಕರ ವ್ಯಾಪ್ತಿಯಲ್ಲಿ ಬರುತ್ತಾರೆ. ಪ್ರಸ್ತುತ ೧೪ ವರ್ಷದೊಳಗಿನ ಮಕ್ಕಳನ್ನು ಯಾವುದೇ ರೀತಿಯಲ್ಲಿ ದುಡಿಸಿಕೊಳ್ಳುವುದಕ್ಕೆ ನಿಷೇಧವಿದೆ.  ೧೪ರಿಂದ ೧೮ ವರ್ಷದೊಳಗಿನ ಮಕ್ಕಳು, ಅಪಾಯಕಾರಿ ಕೆಲಸಗಳನ್ನು ಹೊರತುಪಡಿಸಿ, ಶಾಲೆಯ ಅವಧಿ ಮುಗಿದ ನಂತರ ಅಥವಾ ರಜಾದಿನಗಳಲ್ಲಿ ತಂದೆ, ತಾಯಿಯೊಂದಿಗೆ ತಮ್ಮ ಕುಟುಂಬದ ಉದ್ದಿಮೆಗಳಲ್ಲಿ ಸಹಾಯ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಬಾಲ ಮತ್ತು ಕಿಶೋರ ಕಾರ್ಮಿಕರ ಸಮೀಕ್ಷಾ ಕಾರ್ಯ ನಡೆಸಲು ಆದ್ಯತಾ ಕ್ಷೇತ್ರಗಳನ್ನು ಮೊದಲು ಗುರುತಿಸಿಕೊಳ್ಳಬೇಕು. ಇದಕ್ಕಾಗಿ ವಿವಿಧ ಇಲಾಖೆಗಳಿಂದ ಮಾಹಿತಿ ಪಡೆಯಬೇಕು. ವಿಶೇಷವಾಗಿ, ಕಾಫಿ ತೋಟಗಳು, ಪ್ಲಾಂಟೇಶನ್, ಕಾಫಿ ಕ್ಯೂರಿಂಗ್ ಸೆಂಟರ್, ರೆಸಾರ್ಟ್, ಹೋಂಸ್ಟೇಗಳು, ಹೋಟೆಲ್ ಮತ್ತು ಡಾಭಾಗಳು, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು, ಇಟ್ಟಿಗೆ ಭಟ್ಟಿ, ಹಾಲೋಬ್ರಿಕ್ಸ್ ತಯಾರಿಕಾ ಘಟಕಗಳಲ್ಲಿ ಸಮೀಕ್ಷೆ ನಡೆಸಬೇಕು ಎಂದು ಅವರು ತಿಳಿಸಿದರು.

ಸಮೀಕ್ಷಾ ಕಾರ್ಯ ಕೈಗೊಳ್ಳಲು ಇಂತಹ ವಿಷಯದಲ್ಲಿ ಅನುಭವ ಇರುವ ಸಿಬ್ಬಂಧಿ, ಏಜನ್ಸಿಗಳನ್ನು ನೇಮಿಸಿಕೊಳ್ಳಬೇಕು. ಪ್ರಮುಖವಾಗಿ ಸಮಾಜ ಕಾರ್ಯ ಬೋಧಿಸುವ ಶಿಕ್ಷಣ ಸಂಸ್ಥೆಗಳು ಹಾಗೂ ಅಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳನ್ನು ಇದರಲ್ಲಿ ಬಳಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಸಹಾಯಕ ಕಾರ್ಮಿಕ ಆಯುಕ್ತ ಕೆ.ಬಿ. ನಾಗರಾಜ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳ ನಿರ್ದೇಶನ ಮತ್ತು ಮಾರ್ಗಸೂಚಿಗಳನ್ವಯ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ. ಈ ಸಮೀಕ್ಷಾ ಕಾರ್ಯ ಕೈಗೊಳ್ಳಲು ಜಿಲ್ಲೆಗೆ ರೂ. ೩ ಲಕ್ಷ ಅನುದಾನ ಬಿಡುಗಡೆಯಾಗಿದೆ. ಸಮಗ್ರ ಸಮೀಕ್ಷಾ ಕಾರ್ಯ ನಡೆಸಿ, ಬಾಲ ಕಾರ್ಮಿಕರ ಪದ್ಧತಿ  ನಿರ್ಮೂಲನೆಗೆ ಕ್ರಮ ಕೈಗೊಳ್ಳಲಾಗುವುದು. ಕೋವಿಡ್ ಸಂದರ್ಭದಲ್ಲಿ ಶಾಲೆಗಳು ಮುಚ್ಚಿದ್ದರಿಂದ ಪರಿಸ್ಥಿತಿ ಒತ್ತಡಕ್ಕೆ ಸಿಲುಕಿ ಮಕ್ಕಳು ಅನಿವಾರ್ಯವಾಗಿ ದುಡಿಮೆಗೆ ಹೋಗಿರುವ ಸಾಧ್ಯತೆಯೂ ಇದೆ. ಸಮೀಕ್ಷೆ ಸಂದರ್ಭದಲ್ಲಿ ಬಾಲಕಾರ್ಮಿಕರು ಪತ್ತೆಯಾದರೆ, ತಕ್ಷಣವೇ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು. ಬಾಲಕಾರ್ಮಿಕರ ಪತ್ತೆಗೆ ಕಾರ್ಮಿಕ ಇಲಾಖೆಯಲ್ಲದೇ, ಇತರೆ ೧೧ ಇಲಾಖೆಗಳ ಅಧಿಕಾರಿಗಳನ್ನು ಕಾಯಿದೆಯಡಿ ನೇಮಕ ಮಾಡಲಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಭಿಕ್ಷಾಟನೆ ಹೆಚ್ಚಳವಾಗಿರುವ ಬಗ್ಗೆ ಮಾಹಿತಿಗಳಿದ್ದು, ಇದನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ ಅವರು ಪುಟ್ಟ ಮಕ್ಕಳನ್ನು ಬಳಸಿಕೊಂಡು ಭಿಕ್ಷಾಟನೆ ನಡೆಸುತ್ತಿರುವ ಬಗ್ಗೆ ಮಾಹಿತಿ ಇದೆ. ಜಿಲ್ಲೆಯಲ್ಲಿ ನಿರಾಶ್ರಿತರ ಕೇಂದ್ರ ಇಲ್ಲದಿರುವುದರಿಂದ, ಶಿವಮೊಗ್ಗ ಕೇಂದ್ರಕ್ಕೆ ಇಂತಹವರನ್ನು ಹಿಡಿದು ಕೊಂಡೊಯ್ಯಬೇಕಾಗಿದೆ. ಭಿಕ್ಷಾಟನೆಗೆ ಪ್ರೋತ್ಸಾಹಿಸದಂತೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವಂತೆ ತಿಳಿಸಿದರು.  ಸಭೆಯಲ್ಲಿ ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಮನೋಹರ್,  ಕಾರ್ಮಿಕ ಅಧಿಕಾರಿ ಪ್ರವೀಣ್ ಕುಮಾರ್ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Child protection Act: ಪ್ರತಿಯೊಬ್ಬ ನಾಗರೀಕರಿಗೂ ಕಾನೂನಿನ ತಿಳುವಳಿಕೆ ಅತ್ಯಗತ್ಯ : ಕೆ.ಎನ್.ರಮೇಶ್