ಮೂಡಿಗೆರೆ: ಅಗತ್ಯ ವಸ್ತುಗಳ ಬೆಲೆ ಏರಿಕೆ, ರೈತರ ಸಮಸ್ಯೆ, ಮೂಲಸೌಲಭ್ಯಗಳ ಕೊರತೆಗಳಿಂದ ನೆಮ್ಮದಿ ಕಳೆದುಕೊಂಡಿರುವ ಜನರು ಈ ಬಾರಿಯ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಸಿದ್ಧರಾಗಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.

ಪಟ್ಟಣದ ಲಯನ್ಸ್ ವೃತ್ತದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಭ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತಿದ್ದೇವೆ ಎಂದು ಜನರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ. ಚುನಾವಣೆ ಬಾಂಡ್ ಹಗರಣದಿಂದ ಇವರ ಭ್ರಷ್ಟಾಚಾರವನ್ನು ಸುಪ್ರಿಂ ಕೋರ್ಟ್ ಬಯಲಿಗೆಳೆದಿದೆ. ಇದರಿಂದ ಬಿಜೆಪಿಯ ಮುಖವಾಡ ಕಳಚಿದೆ’ ಎಂದು ಟೀಕಿಸಿದರು.

‘ಸಂಸದನಾಗಿದ್ದಾಗ ಕಡೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಅನುಮೋದನೆಯಾಗಿತ್ತು. ಆದರೆ, 10 ವರ್ಷ ಕಳೆದರೂ ರಸ್ತೆ ಕಾಮಗಾರಿ ಮಾಡಲು ಬಿಜೆಪಿಯವರಿಗೆ ಸಾಧ್ಯವಾಗಿಲ್ಲ. ಹಿಂದಿನ ಸಂಸದೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಮಂತ್ರಿ ಕೂಡ ಆಗಿದ್ದರು. ಆದರೆ ಇಲ್ಲಿನ ಕಾಫಿ ಬೆಳಗಾರರ ಸಮಸ್ಯೆ, ಅಡಿಕೆ ರೋಗ ನಿವಾರಣೆ ಸೇರಿದಂತೆ ರೈತರ ಹಾಗೂ ಜನರ ಸಮಸ್ಯೆ ನಿವಾರಿಸಲಿಲ್ಲ. ಪೆಟ್ರೋಲ್ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರ ನೆಮ್ಮದಿಯಿಂದ ಬದುಕದಂತೆ ಮಾಡಿದ್ದಾರೆ’ ಎಂದು ದೂರಿದರು.

ಶಾಸಕಿ ನಯನಾ ಮೋಟಮ್ಮ ಮಾತನಾಡಿ, ‘ರಾಜ್ಯ ಸರ್ಕಾರ ನೀಡಿರುವ 5 ಗ್ಯಾರಂಟಿಗಳಿಂದ ಜನರಿಗೆ ಅನುಕೂಲವಾಗಿದೆ. ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ಹಿಂದೆ 20 ತಿಂಗಳು ಸಂಸದರಾಗಿದ್ದಾಗ ಅನೇಕ ಜನಪರ ಕೆಲಸ ಮಾಡಿದ್ದಾರೆ. ಇದರಿಂದ ಜನರ ಬಳಿ ತೆರಳಿ ಮತ ಕೇಳುವ ಧೈರ್ಯ ನಮಗಿದೆ. ಆದರೆ, ಕಳೆದ 10 ವರ್ಷಗಳಲ್ಲಿ ಕೇಂದ್ರದ ಬಿಜೆಪಿ ಸರ್ಕಾರದ ದುರಾಡಳಿತ ಹಾಗೂ ಅಭಿವೃದ್ಧಿ ಕಾರ್ಯ ಶೂನ್ಯವೆಂದು ಅವರ ಪಕ್ಷದವರೇ ಗೋ ಬ್ಯಾಕ್ ಶೋಭಾ ಎಂದು ಇಲ್ಲಿಂದ ಓಡಿಸಿದ್ದಾರೆ. ಇದರಿಂದ ಬಿಜೆಪಿಯವರಿಗೆ ಜನರ ಬಳಿ ಹೋಗಿ ಮತ ಕೇಳಲು ಅಂಜಿಕೆ ಉಂಟಾಗಿದೆ. ಜನರು ಬದಲಾವಣೆ ಬಯಸಿದ್ದಾರೆ. ತಾಲ್ಲೂಕಿನಲ್ಲಿ ಅನೇಕ ಅಭಿವೃದ್ಧಿ ಕೆಲಸ ಆಗಬೇಕಿದೆ. ಅದಕ್ಕಾಗಿ ನಮ್ಮ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರಿಗೆ ಮತ ಹಾಕಿ ಗೆಲ್ಲಿಸುವ ಮೂಲಕ ಸಂಸತ್‍ಗೆ ಕಳುಹಿಸಿಕೊಡಬೇಕು’ ಎಂದು ಮನವಿ ಮಾಡಿದರು.

ಮಾಜಿ ಸಚಿವ ಬಿ.ಬಿ ನಿಂಗಯ್ಯ, ಮಾಜಿ ಶಾಸಕ ಎಂ.ಪಿ ಕುಮಾರಸ್ವಾಮಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಎಚ್.ಜಿ ಸುರೇಂದ್ರ, ಪಟ್ಟಣ ಪಂಚಾಯಿತಿ ಸದಸ್ಯ ಕೆ. ವೆಂಕಟೇಶ್, ಸಿ.ಬಿ ಶಂಕರ್, ಸಿ.ಕೆ ಇಬ್ರಾಹಿಂ ಇದ್ದರು.

Congress campaign meeting held at Lions circle in Mudigere town