ಹಿಜಾಬ್​ ವಿವಾದದಲ್ಲಿ ಹೈಕೋರ್ಟ್​ ಆದೇಶವನ್ನು ವಿರೋಧಿಸಿ ರಾಜ್ಯದ ಹಲವೆಡೆಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಸಂಬಂಧ ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಪ್ರತಿಭಟನಾಕಾರರ ವಿರುದ್ಧ ಸೂಕ್ತ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ನ್ಯಾಯಾಂಗದ ವಿರುದ್ಧವೇ ಪ್ರತಿಭಟನೆ ಮಾಡುವುದು ನಿಜಕ್ಕೂ ಅಪಾಯಕಾರಿ ವಿಚಾರವಾಗಿದೆ.
ಈ ಸಂಬಂಧ ಸರ್ಕಾರ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳುತ್ತದೆ ಎಂದರು.
ಈ ದೇಶದ ಕಾನೂನು ಅಂದರೆ ಆಗಲ್ಲ, ಸಂವಿಧಾನ ಅಂದರೆ ಆಗಲ್ಲ ಅಂದಮೇಲೆ ಅವರು ಈ ದೇಶದ ನಾಗರಿಕಗಾಗಿ ಏನು ಅರ್ಥ ಎಂಬುದನ್ನು ಅವರೇ ಹೇಳಬೇಕು. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಏನಾದರೂ ಹೆಚ್ಚು ಕಮ್ಮಿ ಆದರೆ ಕಾನೂನು ಕ್ರಮ ಕೈಗೊಳ್ತೇವೆ. ಈ ಹಿಜಾಬ್​ ಪ್ರಕರಣದ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂದು ಕೋರ್ಟ್ ಹೇಳಿದೆ. ಅಲ್ಲದೇ ಈ ಬಗ್ಗೆ ತನಿಖೆ ನಡೆಸುವಂತೆಯೂ ಹೇಳಿದೆ. ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ದೇಶದ ವಿರುದ್ಧ ಎತ್ತಿಕಟ್ಟುವ ಶಕ್ತಿಯನ್ನು ನಾವು ಸುಮ್ಮನೇ ಬಿಡೋದಿಲ್ಲ ಎಂದು ಹೇಳಿದರು.