ಮೈಸೂರು :  ಉರಿಗೌಡ, ನಂಜೇಗೌಡ ಅವರು ಟಿಪ್ಪು ಸುಲ್ತಾನ್‌ ಅವರನ್ನು ಕೊಂದು ಹಾಕಿದ್ದಾರೆಂದು ಹೇಳಿ ರಾಜ್ಯದಲ್ಲಿ ಕಿಡಿ ಹತ್ತಿಸುವುದರ ಜೊತೆಗೆ ಮುಸಲ್ಮಾನರು ಮತ್ತು ಒಕ್ಕಲಿಗರ ಸಮುದಾಯದ ನಡುವೆ ಎತ್ತಿಕಟ್ಟುವ ಕೆಲಸ ನಡೆಯುತ್ತಿದೆ. ಹೀಗಿದ್ದರೂ ಒಕ್ಕಲಿಗರ ಸಂಘ, ಒಕ್ಕಲಿಗರ ಸ್ವಾಮೀಜಿ ಮೌನವಾಗಿರುವುದು ಸರಿಯಲ್ಲ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕಲಿಗ ಸಮುದಾಯವನ್ನು ತೇಜೋವಧೆ ಮಾಡುತ್ತಿದ್ದರೂ ಒಕ್ಕಲಿಗರ ಸಂಘವು ನಿದ್ರೆ ಮಾಡುತ್ತಿದಿಯಾ? ಒಕ್ಕಲಿಗ ಸಂಘದವರಿಗೆ ಸ್ವಾಭಿಮಾನ ಇದ್ದರೆ ಮೊದಲು ಮಾತನಾಡಬೇಕು. ಒಕ್ಕಲಿಗರ ಸಂಘದವರು ಸಿ.ಟಿ. ರವಿ, ಅಶ್ವತ್ಥನಾರಾಯಣ್‌, ಶೋಭಾ ಕರಂದ್ಲಾಜೆ ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದರು.

ಲಿಂಗಾಯತ ವೀರಶೈವರ ಮತಗಳು ಬಿಜೆಪಿಗೆ ಬೇಡ. ಬಿ.ವೈ. ವಿಜಯೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕಾಗುತ್ತದೆ ಎನ್ನುವ ಕಾರಣಕ್ಕಾಗಿ ಸಂಪುಟ ವಿಸ್ತರಿಸದೆ ಕಾಲಾಹರಣ ಮಾಡಲಾಗುತ್ತಿದೆ. ಈ ಸಮುದಾಯ ಬಿಜೆಪಿಗೆ ಪಾಠ ಕಲಿಸಬೇಕು ಎಂದರು.

ದಲಿತರ ಅಭಿವೃದ್ಧಿಗಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ನೀಡಿರುವ ಕೊಡುಗೆಗಳ ಕುರಿತು ಬಹಿರಂಗ ಚರ್ಚೆಗೆ ಬರುವಂತೆ ವಿಧಾನಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರಿಗೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಸವಾಲು ಹಾಕಿದರು.

ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಹೇಳಿಕೊಟ್ಟಂತೆ ಮಾತನಾಡುತ್ತಿರುವ ಛಲವಾದಿ ನಾರಾಯಣಸ್ವಾಮಿಗೆ ಛಲವಾದಿ ಎನ್ನುವ ಸ್ವಾಭಿಮಾನ ಇದ್ದರೆ ಮಾತನಾಡುತ್ತಿರಲಿಲ್ಲ. ಕಾಂಗ್ರೆಸ್‌ನಲ್ಲಿ ಹಲವಾರು ವರ್ಷಗಳ ಕಾಲ ತಿಂದು ಉಂಡು ಹೋಗಿರುವ ಛಲವಾದಿ ನಾರಾಯಣಸ್ವಾಮಿ ಮಾಜಿ ಸಂಸದ ಆರ್‌. ಧ್ರುವನಾರಾಯಣ್‌ ಅವರ ಸಾವಿಗೆ ಸಿದ್ದರಾಮಯ್ಯ, ಡಾ.ಎಚ್‌.ಸಿ. ಮಹದೇವಪ್ಪ ಕಾರಣವೆಂದು ಹೇಳಿರುವುದು ನಾಚಿಕೆಗೇಡು ಎಂದು ಅವರು ಕಿಡಿಕಾರಿದರು.

ಮೈಸೂರು ಹಾಗೂ ಬೆಂಗಳೂರು ದಶಪಥ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಅವೈಜ್ಞಾನಿಕ ಟೋಲ್‌ ಹಣ ಸಂಗ್ರಹಿಸಿ ಸವಾರರಿಗೆ ನಷ್ಟಕ್ಕೆ ಕಾರಣವಾಗಿದ್ದಾರೆ. ನಾಲ್ಕು ಕಡೆಗಳಲ್ಲಿ ನೀರು ಬ್ಲಾಕ್‌ ಆಗುತ್ತಿರುವ ಕಾರಣ ಹೊರ ಹೋಗುವುದಕ್ಕೆ ವ್ಯವಸ್ಥೆ ಮಾಡಿಲ್ಲ ಎಂದು ಅವರು ಕಿಡಿಕಾರಿದರು.

ಮಾಜಿ ಮೇಯರ್‌ ಅಯೂಬ್‌ ಖಾನ್‌, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಕಾಂಗ್ರೆಸ್‌ ನಗರಾಧ್ಯಕ್ಷ ಆರ್‌. ಮೂರ್ತಿ, ಮುಖಂಡರಾದ ಈಶ್ವರ್‌ ಚಕ್ಕಡಿ, ಗಿರೀಶ್‌, ಶ್ರೀಧರ್‌, ತಿವಾರಿ ಇದ್ದರು

Okkaligara Sangha silence is not right