ಬೆಂಗಳೂರು: ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಶಾಲೆಗಳ ಐದು ಮತ್ತು ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಮಾ.27ರಿಂದ ಮಂಡಳಿ ಪರೀಕ್ಷೆಗಳನ್ನು ಮಂದೂಡುವಂತೆ ಸರ್ಕಾರಕ್ಕೆ ನಿರ್ದೇಶಿಸಲು ಹೈಕೋರ್ಟ್‌ ಮಂಗಳವಾರ ನಿರಾಕರಿಸಿತು. ಮಂಗಳವಾರ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಕಲಾಪ ಆರಂಭಿಸುತ್ತಿದ್ದಂತೆ ಅನುದಾನರಹಿತ ಖಾಸಗಿ ಶಾಲೆಗಳ ಪರ ವಕೀಲ ಎ. ವೇಲನ್‌ ಹಾಜರಾಗಿ, ಮಾ.27ರಿಂದ ಆರಂಭವಾಗುವ ಪರೀಕ್ಷೆ ಮುಂದೂಡುವಂತೆ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿದರು.

ಆ ಮನವಿಯನ್ನು ನ್ಯಾಯಪೀಠ ಸಾರಾಸಟಾಗಿ ತಳ್ಳಿ ಹಾಕಿತು. ‘ಪ್ರಕರಣ ಸುಪ್ರೀಂ ಕೋರ್ಟ್‌ ಮುಂದೆ ಬಾಕಿ ಇರುವಾಗ ನೀವು ಇಲ್ಲಿ (ಹೈಕೋರ್ಟ್‌) ಹೇಗೆ ಪ್ರಕರಣವನ್ನು ಪ್ರಸ್ತಾಪಿಸುತ್ತೀರಿ. ಇದು ಉತ್ತಮ ಬೆಳವಣಿಗೆಯಲ್ಲ. ಸುಪ್ರಿಂ ಕೋರ್ಟ್‌ ಮುಂದೆ ಪ್ರಕರಣ ಇರುವಾಗ ಅಲ್ಲಿಯೇ ನಿಮ್ಮ ವಾದ ಮಂಡಿಸಿ. ಹೈಕೋರ್ಟ್‌ ಯಾವುದೇ ರೀತಿಯಲ್ಲಿಯೂ ವಿಚಾರಣೆ ನಡೆಸಲು ಸಾಧ್ಯವಿಲ್ಲ’ ಎಂದು ನ್ಯಾ. ವರಾಳೆ ಅವರು ಕಟುವಾಗಿ ನುಡಿದರು.

ಕ್ಲಸ್ಟರ್‌ ಹಂತದಲ್ಲಿ 5, 8ನೇ ತರಗತಿ ಪರೀಕ್ಷೆ ಮೌಲ್ಯಮಾಪನ: ರಾಜ್ಯಪಠ್ಯಕ್ರಮ ಶಾಲೆಗಳಲ್ಲಿನ 5 ಮತ್ತು 8ನೇ ತರಗತಿ ಮಕ್ಕಳಿಗೆ ನಡೆಯುವ ಮೌಲ್ಯಾಂಕನ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಬ್ಲಾಕ್‌ ಅಥವಾ ತಾಲ್ಲೂಕು ಹಂತದ ಬದಲು ಅಂತರ್‌ ಕ್ಲಸ್ಟರ್‌ ವಾರು ನಿರ್ವಹಿಸುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಎಲ್ಲ ಜಿಲ್ಲಾ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಗೆ ಸೂಚಿಸಿದೆ. ಮಾ.31ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿರುವುದರಿಂದ ಒಂದು ಬ್ಲಾಕ್‌ನಿಂದ ಮತ್ತೊಂದು ಬ್ಲಾಕ್‌ಗೆ ಪ್ರಶ್ನೆಪತ್ರಿಕೆಗಳನ್ನು ಸಾಗಾಣಿಕೆ ಮಾಡಿ ಮೌಲ್ಯಮಾಪನ ನಡೆಸಿ ಫಲಿತಾಂಶ ಪ್ರಕಟಿಸಲು ಕಾಲಾವಕಾಶದ ಕೊರತೆಯಾಗಲಿದೆ.

ಆದ್ದರಿಂದ ತಾಲ್ಲೂಕು ಕೇಂದ್ರದಲ್ಲಿಯೇ ಅಂತರ್‌ ಕ್ಲಸ್ಟರ್‌ವಾರು ಮೌಲ್ಯಮಾಪನ ಮಾಡಿಸುವಂತೆ ಸೂಚಿಸಲಾಗಿದೆ. 5ನೇ ತರಗತಿ ಮೌಲ್ಯಮಾಪನವನ್ನು ಏ.1ರಿಂದ 5ರ ವರೆಗೆ ಮತ್ತು 8ನೇ ತರಗತಿ ಮೌಲ್ಯಮಾಪನವನ್ನು ಏ.2ರಿಂದ 7ರ ವರೆಗೆ ನಡೆಸಬೇಕು. ಮೌಲ್ಯಮಾಪನ ಪೂರ್ಣಗೊಂಡ ಮರುದಿನವೇ ಉತ್ತರ ಪತ್ರಿಕೆಗಳನ್ನು ಸಂಬಂಧಿಸಿದ ಶಾಲೆಗಳಿಗೆ ತಲುಪಿಸಬೇಕು. ಶಾಲಾ ಮುಖ್ಯ ಶಿಕ್ಷಕರು/ಪ್ರಾಂಶುಪಾಲರು ವಿದ್ಯಾರ್ಥಿಗಳು ಗಳಿಸಿರುವ ಅಂಕಗಳನ್ನು ಕ್ರೋಢೀಕರಿಸಿ ಗ್ರೇಡ್‌ಗಳಿಗೆ ಪರಿವರ್ತಿಸಿ ಫಲಿತಾಂಶ ನೀಡಲು ತಿಳಿಸಲಾಗಿದೆ.

The High Court refused to postpone the examination