ಬೆಂಗಳೂರು: ಷೇರು ಮಾರುಕಟ್ಟೆಯ ಹೂಡಿಕೆದಾರರ ಪಾಲಿಗೆ ಮಂಗಳವಾರ ಮತ್ತೊಮ್ಮೆ ಶುಭವಾಗಿ ಪರಿಣಮಿಸಿದೆ. ಜಾಗತಿಕವಾಗಿ ಬ್ಯಾಂಕಿಂಗ್‌ ಸೆಕ್ಟರ್‌ನಲ್ಲಿ ಕುಸಿತ ಉಂಟಾಗಿದ್ದರೂ, ಭಾರತದ ಷೇರು ಮಾರುಕಟ್ಟೆಯ ಮೇಲೆ ಮಾತ್ರ ಇದಾವುದರ ಪರಿಣಾಮ ಬೀರಿಲ್ಲ. ಅಮೆರಿಕ ಹಾಗೂ ಯುರೋಪ್‌ ದೇಶಗಳಲ್ಲಿ ಬ್ಯಾಂಕಿಂಗ್‌ ಕ್ಷೇತ್ರದ ಕುಸಿತ ಪರಿಣಾಮ ಬೀರಿದೆ. ಆದರೆ, ಭಾರತದ ಮಾರುಕಟ್ಟೆಯಲ್ಲಿ ಇಲ್ಲಿಯವರೆಗೂ ಅಮೆರಿಕದ ಪ್ರಮುಖ ಬ್ಯಾಂಕ್‌ನ ಕುಸಿತದಿಂದ ಯಾವುದೇ ಪರಿಣಾಮ ಬೀರಿಲ್ಲ.  ಮಾರ್ಚ್ 21 ರಂದು, ಷೇರು ಮಾರುಕಟ್ಟೆಯು ಹಸಿರು ಬಣ್ಣದೊಂದಿಗೆ ಮುಕ್ತಾಯ ಕಂಡಿದೆ. ಭಾರತೀಯ ಷೇರು ಮಾರುಕಟ್ಟೆಯಲ್ಲಿ ಬ್ಯಾಂಕಿಂಗ್ ಷೇರುಗಳ ಖರೀದಿಯಿಂದಾಗಿ, ಸೆನ್ಸೆಕ್ಸ್‌ನಲ್ಲಿ ವ್ಯವಹಾರ ಬಹಳ ಚುರುಕಾಗಿ ಮುಕ್ತಾಯವಾಯಿತು. ಮಂಗಳವಾರದ ವಹಿವಾಟಿನ ಅಂತ್ಯಕ್ಕೆ ಬಿಎಸ್‌ಇ ಸೆನ್ಸೆಕ್ಸ್ 445 ಪಾಯಿಂಟ್‌ಗಳ ಜಿಗಿದು 58,074 ಅಂಕಗಳಿಗೆ ತಲುಪಿದರೆ, ನಿಫ್ಟಿ 119 ಅಂಕಗಳ ಏರಿಕೆಯೊಂದಿಗೆ 17,107 ಅಂಕಗಳಿಗೆ ತಲುಪಿದೆ.

ಅಬ್ಬರಿಸಿದ ಅದಾನಿ ಷೇರುಗಳು: ಮಂಗಳವಾರ ಅದಾನಿ ಷೇರುಗಳು ಭರ್ಜರಿ ಪುನರಾಗಮನ ಮಾಡಿದೆ. ಕಂಪನಿಯ 10 ಷೇರುಗಳ ಪೈಕಿ 7 ಷೇರುಗಳು ಹಸಿರು ಬಣ್ಣದಲ್ಲಿ ವ್ಯವಹಾರ ಮುಗಿಸಿದವು. ಅದಾನಿಯ ಪ್ರಮುಖ ಕಂಪನಿಯಾದ ಅದಾನಿ ಎಂಟರ್‌ಪ್ರೈಸಸ್‌ನ ಷೇರುಗಳು ಶೇ.1.06 ಏರಿಕಯಾಗಿ 1824.25 ರೂಪಾಯಿಯಲ್ಲಿ ಅಂತ್ಯ ಕಂಡಿದ್ದರೆ, ಅದಾನಿ ಪವರ್‌ನ ಷೇರುಗಳು 4.99 ರಷ್ಟು ಏರಿಕೆಯಾಗಿ 199.80 ರೂ. ಅದಾನಿ ಗ್ರೀನ್ ಎನರ್ಜಿ ಶೇರುಗಳು ಶೇ.5ರಷ್ಟು ಏರಿಕೆ ಕಂಡು 891.15 ರೂ. ಇದಲ್ಲದೇ ಅದಾನಿ ಟೋಟಲ್ ಗ್ಯಾಸ್ ಷೇರುಗಳು ಶೇ.4.55ರಷ್ಟು ಏರಿಕೆಯಾಗಿ 891.95 ರೂ. ಅದಾನಿ ವಿಲ್ಮಾರ್ ಷೇರುಗಳು ಶೇ.1.20ರಷ್ಟು ಏರಿಕೆ ಕಂಡಿವೆ.  ಅದಾನಿ ಸಮೂಹದ ಸಿಮೆಂಟ್ ಕಂಪನಿ ಎಸಿಸಿ ಸಿಮೆಂಟ್ ಷೇರುಗಳು ಶೇ.1.64ರಷ್ಟು ಏರಿಕೆಯಾಗಿ 1724.85 ರೂ. ಅಂಬುಜಾ ಸಿಮೆಂಟ್ ಷೇರುಗಳು ಶೇಕಡಾ 1.48 ರಷ್ಟು ಏರಿಕೆಯಾಗಿ 370. 90 ರೂಪಾಯಿಗೆ ತಲುಪಿದವು.

ಅದಾನಿ ಗ್ರೀನ್‌ ಭರ್ಜರಿ ರಿಟರ್ನ್‌: ಹಿಂಡೆನ್‌ಬರ್ಗ್‌ ಆರೋಪದ ಬಳಿಕ ಅದಾನಿ ಗ್ರೂಪ್‌ನ ಷೇರುಗಳು ಮರಳಿ ಏರಿಕೆಯ ಹಾದಿ ಹಿಡಿಯುತ್ತಿದೆ. ಆದರೆ, ಅದಾನಿ ಗ್ರೀನ್‌ ಎನರ್ಜಿ ಮಾತ್ರ ಎಲ್ಲಕ್ಕಿಂತ ವೇಗವಾಗಿ ನುಗ್ಗುತ್ತಿದೆ.  ಅದಾನಿ ಗ್ರೀನ್ ಶೇರ್ 52 ವಾರಗಳ ಕಡಿಮೆ ಮಟ್ಟದಿಂದ 102% ಆದಾಯವನ್ನು ನೀಡಿದೆ. ಅದಾನಿ ಗ್ರೀನ್ ಷೇರುಗಳು ಶೇ.5ರಷ್ಟು ಏರಿಕೆಯೊಂದಿಗೆ ಮಂಗಳವಾರ ಅಪ್ಪರ್‌ ಸರ್ಕ್ಯೂಟ್‌ ಮುಟ್ಟಿದೆ. ಅದಾನಿ ಗ್ರೀನ್ ಷೇರುಗಳು 891.15 ರೂಪಾಯಿ ಆಗಿದೆ. ಈ ಷೇರು 52 ವಾರಗಳ ಕನಿಷ್ಠ ಮಟ್ಟ ಫೆಬ್ರವರಿ 28 ರಂದು ದಾಖಲಾಗಿತ್ತು. ಅಂದು ಅದಾನಿ ಗ್ರೀನ್‌ ಷೇರು 439.35 ರೂಪಾಯಿ ಇತ್ತು. ಇನ್ನು ಈ ಷೇರಿನ 52 ವಾರಗಳ ಗರಿಷ್ಠ ಮಟ್ಟ 3048 ರೂಪಾಯಿ ಆಗಿದೆ.

ಅದಾನಿ ಸ್ಪಷ್ಟನೆಯಿಂದ ಏರಿದ ಬೆಲೆ: ಮುಂದ್ರಾ ಪೋರ್ಟ್‌ನಲ್ಲಿ ಅದಾನಿ ಗ್ರೂಪ್‌ ತನ್ನ 35 ಸಾವಿರ ಕೋಟಿ ರೂಪಾಯಿಯ ಪೆಟ್ರೋ ಕೆಮಿಕಲ್‌ ಯೋಜನೆಯನ್ನು ರದ್ದು ಮಾಡಿದೆ ಎಂದು ಸುದ್ದಿಯಾಗಿತ್ತು. ಅದರ ಬೆನ್ನಲ್ಲೇ ಕಂಪನಿಯ ಷೇರುಗಳು ಕುಸಿಯಲಾರಂಭಿಸಿದವು. ಇದಕ್ಕೆ ಸ್ಪಷ್ಟನೆ ನೀಡಿದ ಅದಾನಿ ಗ್ರೂಪ್‌, ಯೋಜನೆ ರದ್ದು ಮಾಡಿಲ್ಲ. ಮುಂದಿನ 6 ತಿಂಗಳು ಈ ಯೋಜನೆಗಾಗಿ ಹಣವನ್ನು ಸಂಗ್ರಹಿಸಲಾಗುವುದು ಎಂದು ಹೇಳಿದೆ. ಅದರೊಂದಿಗೆ ನಿಗದಿತ ಸಮಯದಲ್ಲಿಯೇ ಈ ಯೋಜನೆ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿತು. ಅದರ ಬೆನ್ನಲ್ಲಿಯೇ ಕಂಪನಿಯ ಷೇರುಗಳು ಹಸಿರು ಬಣ್ಣದತ್ತ ಮುಖ ಮಾಡಿದವು.

ಹೂಡಿಕೆದಾರರು ಇಂದು ಷೇರು ಮಾರುಕಟ್ಟೆಯಲ್ಲಿ ವೇಗವಾಗಿ ಲಾಭ ಮಾಡಿಕೊಂಡಿದ್ದಾರೆ. ಮಾರುಕಟ್ಟೆಯಲ್ಲಿ ಷೇರು ಖರೀದಿಗೆ ಉತ್ಸಾಹ ಇದ್ದ ಕಾರಣದಿಂದ ಹೂಡಿಕೆದಾರರ ಸಂಪತ್ತು ಕೂಡ ವೃದ್ಧಿಯಾಗಿದೆ. ಬಿಎಸ್‌ಇಯಲ್ಲಿ ಪಟ್ಟಿ ಮಾಡಲಾದ ಕಂಪನಿಗಳ ಮಾರುಕಟ್ಟೆ ಮೌಲ್ಯವು ವೇಗವಾಗಿ 256.89 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಸೋಮವಾರ ಇವುಗಳ ಮಾರುಕಟ್ಟೆ ಮೌಲ್ಯ 255.64 ಲಕ್ಷ ಕೋಟಿ ರೂಪಾಯಿ ಆಗಿತ್ತು. ಹೂಡಿಕೆದಾರರು ಮಂಗಳವಾರ ಒಂದೇ ದಿನ 1.25 ಲಕ್ಷ ಕೋಟಿ ಲಾಭ ಗಳಿಸಿದ್ದಾರೆ ಎನ್ನಲಾಗಿದೆ.

Adani Shares: