ಲಂಡನ್: ಮೂರು ದಿನಗಳ ಹಿಂದೆ ಖಲಿಸ್ತಾನ್ ಬೆಂಬಲಿಗರು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಮೇಲೆ ದಾಳಿ ನಡೆಸಿದ್ದರು. ಇದೀಗ ಇಂದು ಸಹ ಖಲಿಸ್ತಾನಿ ಬೆಂಬಲಿಗರು ಹೈಕಮಿಷನ್ ಹೊರಗೆ ಪ್ರತಿಭಟನೆ ನಡೆಸಿದ್ದರಿಂದ ಭದ್ರತೆ ಹೆಚ್ಚಿಸಲಾಗಿದೆ.

ಕಳೆದ ಬಾರಿಯಂತೆ ಪರಿಸ್ಥಿತಿ ವಿಕೋಪಕ್ಕೆ ತಿರುಗಬಾರದು ಎಂದು ಹೈಕಮಿಷನ್ ಮುಂದೆ ಭದ್ರತೆ ಹೆಚ್ಚಿಸಿ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಹೀಗಾಗಿ ಬ್ಯಾರಿಕೇಡ್‌ಗಳ ಮುಂದೆ ನಿಂತು ಖಲಿಸ್ತಾನದ ಧ್ವಜವನ್ನು ಕೈಯಲ್ಲಿ ಖಲಿಸ್ತಾನಿಗಳು ಹಿಡಿದುಕೊಂಡು ಪ್ರತಿಭಟನೆ ನಡೆಸಿದರು.

ಸೆಂಟ್ರಲ್ ಲಂಡನ್‌ನಲ್ಲಿರುವ ಇಂಡಿಯಾ ಪ್ಲೇಸ್ ಎಂದು ಕರೆಯಲ್ಪಡುವ ಕಟ್ಟಡದ ಹೊರಗೆ ಪೊಲೀಸ್ ಅಧಿಕಾರಿಗಳು ಮತ್ತು ಗಸ್ತು ಅಧಿಕಾರಿಗಳು ಕರ್ತವ್ಯದಲ್ಲಿದ್ದಾರೆ. ಕಳೆದ ಭಾನುವಾರ ಇದೇ ಸ್ಥಳದಲ್ಲಿ ಖಲಿಸ್ಥಾನಿಗಳು ಪ್ರತಿಭಟನೆ ನಡೆಸಿದ್ದು ಭಾರತದ ಧ್ವಜವನ್ನು ಹೀಳಿಸಿದ್ದರು. ಇದಕ್ಕೆ ಭಾರತದ ತೀವ್ರ ಖಂಡನೆ ವ್ಯಕ್ತಪಡಿಸಿತ್ತು.

ಈ ಮಧ್ಯೆ ದೆಹಲಿಯಲ್ಲಿರುವ ಬ್ರಿಟಿಷ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳನ್ನು ತೆಗೆದುಹಾಕಲಾಗಿದೆ. ಆದರೆ, ಭದ್ರತಾ ವ್ಯವಸ್ಥೆ ಮೊದಲಿನಂತೆಯೇ ಇದೆ. ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇಲ್ಲಿನ ಬ್ರಿಟಿಷ್ ಹೈಕಮಿಷನ್ ಹೊರಗೆ ಭದ್ರತಾ ವ್ಯವಸ್ಥೆಗಳು ಹಿಂದಿನಂತೆ. ಆದರೆ ಹೈಕಮಿಷನ್‌ಗೆ ಹೋಗುವ ರಸ್ತೆಯಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ತೆಗೆದುಹಾಕಲಾಗಿದೆ.

ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ನಲ್ಲಿ ಖಾಲಿಸ್ತಾನ್ ಪರ ಪ್ರತಿಭಟನೆಗಳ ಸಂದರ್ಭದಲ್ಲಿ ತ್ರಿವರ್ಣ ಧ್ವಜವನ್ನು ಉರುಳಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ಭಾರತ ಭಾನುವಾರ ರಾತ್ರಿ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಅವರನ್ನು ಕರೆಸಿ ತೀವ್ರ ಖಂಡನೆ ವ್ಯಕ್ತಪಡಿಸಿತ್ತು. ಈ ವೇಳೆ ಬ್ರಿಟನ್ ಸರ್ಕಾರವು ಭಾರತೀಯ ಹೈಕಮಿಷನ್‌ನ ಭದ್ರತೆಯನ್ನು ‘ಗಂಭೀರವಾಗಿ’ ತೆಗೆದುಕೊಳ್ಳುತ್ತದೆ ಎಂದು ಬ್ರಿಟಿಷ್ ಉನ್ನತ ಅಧಿಕಾರಿಗಳು ಹೇಳಿದ್ದಾರೆ.

Khalistan supporters protest