ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಪಟಾಕಿ ಕಾರ್ಖಾನೆಯೊಂದರಲ್ಲಿ ಇಂದು ಬೆಂಕಿ ಕಾಣಿಸಿಕೊಂಡಿದ್ದು, ಹಲವರು ಸುಟ್ಟಗಾಯಗಳೊಂದಿಗೆ ಸಾವನ್ನಪ್ಪಿದ್ದಾರೆ.

ಪಟಾಕಿ ಅವಘಡದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಇನ್ನು 16 ಮಂದಿ ಗಾಯಗೊಂಡಿದ್ದು ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡದ ಸಿಬ್ಬಂದಿ ಸ್ಥಳದಲ್ಲಿದ್ದಾರೆ. ಅಗ್ನಿ ಅವಘಡಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಪೊಲೀಸ್ ತಂಡ ಪ್ರಯತ್ನಿಸುತ್ತಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಸ್ಥಳಕ್ಕಾಗಮಿಸಿದ ಕಾಂಚೀಪುರಂ ಜಿಲ್ಲಾಧಿಕಾರಿ ಎಂ.ಆರತಿ, ಕಾಂಚೀಪುರಂ ಜಿಲ್ಲೆಯ ಕುರುವಿಮಲೈ ಗ್ರಾಮದ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಗೋಡೌನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಹೇಗೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

https://twitter.com/NovinstonLobo/status/1638458769767116800?ref_src=twsrc%5Etfw%7Ctwcamp%5Etweetembed%7Ctwterm%5E1638458769767116800%7Ctwgr%5Ef02100ac7273fa6be993ba43da113f0d2b424c82%7Ctwcon%5Es1_&ref_url=https%3A%2F%2Fwww.kannadaprabha.com%2Fnation%2F2023%2Fmar%2F22%2Feight-dead-several-injured-after-huge-explosion-at-cracker-unit-in-kancheepuram-490041.html

ಸಿಕ್ಕಿರುವ ಮಾಹಿತಿಯ ಪ್ರಕಾರ, ಕಾಂಚೀಪುರಂನ ಕುರುವಿ ಹಿಲ್ಸ್‌ನಲ್ಲಿರುವ ಪಟಾಕಿ ಕಾರ್ಖಾನೆಯ ಗೋಡೌನ್ ಬಳಿ ಒಣಗಿಸಲು ಇಟ್ಟಿದ್ದ ಪಟಾಕಿಗಳಿಗೆ ಮಧ್ಯಾಹ್ನ 12 ಗಂಟೆಗೆ ಹಠಾತ್ ಬೆಂಕಿ ಹೊತ್ತಿಕೊಂಡು ಈ ಘಟನೆ ನಡೆದಿದೆ. ಬೆಂಕಿಯಿಂದಾಗಿ ಪಟಾಕಿಗಳು ಸಿಡಿಯಲಾರಂಭಿಸಿದವು. ಅಷ್ಟರಲ್ಲೇ ಬೆಂಕಿ ಇಡೀ ಗೋಡೌನ್ ಗೆ ವ್ಯಾಪಿಸಿ ದೊಡ್ಡ ಅವಘಡ ಸಂಭವಿಸಿದೆ. ಸ್ಫೋಟದ ರಭಸಕ್ಕೆ ಗೋಡೌನ್ ಬಳಿ ಕೆಲಸ ಮಾಡುತ್ತಿದ್ದ ಜನರ ಬೆಂಕಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.

ಗೋದಾಮಿನಲ್ಲಿ ಸ್ಫೋಟ ಹಾಗೂ ಬೆಂಕಿ ಕಾಣಿಸಿಕೊಂಡಿರುವ ಮಾಹಿತಿಯಿಂದ ಸ್ಥಳದಲ್ಲಿ ಕೋಲಾಹಲ ಉಂಟಾಗಿತ್ತು. ತರಾತುರಿಯಲ್ಲಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಗಿತ್ತು. ಎರಡು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಒಂದು ಗಂಟೆ ಶ್ರಮವಹಿಸಿ ಬೆಂಕಿಯನ್ನು ಹತೋಟಿಗೆ ತಂದರು. ಪೊಲೀಸರು ಮೃತರ ದೇಹಗಳನ್ನು ವಶಕ್ಕೆ ಪಡೆದು ಹತ್ತಿರದ ಜಿಎಚ್‌ಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಇದರೊಂದಿಗೆ ಪೊಲೀಸರು ಪ್ರಕರಣವನ್ನೂ ದಾಖಲಿಸಿಕೊಂಡಿದ್ದಾರೆ. ಕಾರ್ಖಾನೆಯಲ್ಲಿ ಒಟ್ಟು 25 ಮಂದಿ ಕೆಲಸ ಮಾಡುತ್ತಿದ್ದರು.

Explosion in fireworks factory; 8 people died.