ಬಹುಭಾಷಾ ನಟಿ  ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ  ಖುಷ್ಬೂ ಸುಂದರ್ (Khusbhu Sundar) ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ವಿಪರೀತ ಜ್ವರ ಮತ್ತು ಸುಸ್ತು ಎನ್ನಲಾಗಿದೆ. ಈ ಬಗ್ಗೆ ಖುದ್ದು ನಟಿಯೇ ಸಾಮಾಜಿಕ ಜಾಲತಾಣದಲ್ಲಿ ಶೇರ್​ (Social Media) ಮಾಡಿಕೊಂಡಿದ್ದಾರೆ. ವಿಪರೀತ ಜ್ವರ, ತುಂಬಾ ನೋವು ಮತ್ತು ದೌರ್ಬಲ್ಯ ನನ್ನನ್ನು ಕೊಲ್ಲುತ್ತಿದೆ. ಆದ್ರೆ ನಾನು ಹೈದರಾಬಾದ್​ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ದಯವಿಟ್ಟು ಆರೋಗ್ಯ ನಿರ್ಲಕ್ಷಿಸಬೇಡಿ ಎಂದು ಖುಷ್ಬೂ ಬರೆದುಕೊಂಡಿದ್ದಾರೆ. ಈ ಸಂದೇಶ ನೋಡಿ ಅಭಿಮಾನಿಗಳಲ್ಲಿ ಆತಂಕ ಶುರುವಾಗಿದೆ. ಸುದ್ದಿ ತಿಳಿದ ಅಭಿಮಾನಿಗಳು ಶೀಘ್ರ ಗುಣಮುಖರಾಗಿ ಬನ್ನಿ ಎಂದು ಟ್ವೀಟ್ ಮೂಲಕ ಹಾರೈಸಿದ್ದಾರೆ.

ಅಭಿಮಾನಿಗಳು ತಮ್ಮ ಆರೋಗ್ಯವನ್ನು ಗಂಭೀರವಾಗಿ ಪರಿಗಣಿಸುವಂತೆ ಮತ್ತು ಎಚ್ಚರಿಕೆಯ ಚಿಹ್ನೆಗಳನ್ನು ನಿರ್ಲಕ್ಷಿಸದಂತೆ ನಟಿ ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ. ನನ್ನ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ನಾನು ಹುಷಾರಾಗಿದ್ದೇನೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ ನಟಿ.   ಆದರೆ ಫ್ಯಾನ್ಸ್​ (Fans) ಮಾತ್ರ ತುಂಬಾ ಆತಂಕದಲ್ಲಿದ್ದು, ಹಲವಾರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇತ್ತೀಚಿಗೆ ಖುಷ್ಬೂ ಅವರು 20 ಕೆಜಿ ತೂಕ ಇಳಿಸಿದ ನಂತರ ಸುದ್ದಿಯಲ್ಲಿದ್ದರು. ತೂಕ ಇಳಿಸಿಕೊಳ್ಳಲು ಮತ್ತು ಆರೋಗ್ಯವಾಗಿರಲು ಎರಡು ಪ್ರಮುಖ ಮಂತ್ರಗಳು ಉತ್ತಮ ಆಹಾರ ಮತ್ತು ಕಠಿಣ ವ್ಯಾಯಾಮ ಎಂದು  ನಟಿ ಹೇಳಿದ್ದರು. ಆದರೆ ತೂಕ ಕಡಿಮೆ ಮಾಡಿಕೊಳ್ಳುವ ಪ್ರಯತ್ನದಲ್ಲಿ ಆರೋಗ್ಯದ ಮೇಲೆ ಏನಾದರೂ ಎಡವಟ್ಟು ಮಾಡಿಕೊಂಡಿರುವಿರಾ ಎಂದು ಫ್ಯಾನ್ಸ್​ ಪ್ರಶ್ನೆ ಕೇಳುತ್ತಿದ್ದಾರೆ.

ಅಂದಹಾಗೆ ನಟಿ ಖುಷ್ಬೂ ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ, ನಿರ್ಮಾಪಕಿ ಮತ್ತು ಕಿರುತೆರೆ ನಿರೂಪಕಿ. ಖುಷ್ಬೂ 1970 ಸೆಪ್ಟೆಂಬರ್ 29ರಲ್ಲಿ ಮುಂಬೈನಲ್ಲಿ ಜನಿಸಿದ್ದು ಅವರಿಗೆ ಈಗ 53 ವರ್ಷ ವಯಸ್ಸು.  ಇವರು ಕನ್ನಡ ಸೇರಿದಂತೆ  ತಮಿಳು, ತೆಲಗು ಚಿತ್ರಗಳಲ್ಲಿ ನಟಿಸಿ  ತಮ್ಮದೇ ಛಾಪು ಮೂಡಿಸಿದ್ದಾರೆ. 1980ರಲ್ಲಿ ಹಿಂದಿ ಚಿತ್ರ `ದಿ ಬರ್ನಿಂಗ್ ಟ್ರೇನ್’ ಚಿತ್ರದ ಮೂಲಕ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ನಟಿ ಹಲವಾರು ಹಿಟ್​ ಚಿತ್ರಗಳನ್ನು ನೀಡಿದ್ದಾರೆ. 1985ರಲ್ಲಿ ಜಾಕಿಶ್ರಾಫ್‌ರ `ಜಾನು’ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. 1986 ರಿಂದ ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸಿತೊಡಗಿದರು. ಇವರು ತಮಿಳು ನಟ, ನಿರ್ದೇಶಕ ಮತ್ತು ನಿರ್ಮಾಪಕ ಸಿ.ಸುಂದರ್‌ (C. Sundar) ರವರನ್ನು ಮದುವೆಯಾಗಿದ್ದಾರೆ. ಇವರಿಗೆ `ಆವಂತಿಕಾ ಮತ್ತು `ಆನಂದಿತಾ’ ಎಂಬ ಇಬ್ಬರು ಪುತ್ರಿಯರಿದ್ದಾರೆ. 1995ರಲ್ಲಿ ಮುರೈ ಮಾವನ್ ಸಿನಿಮಾದಲ್ಲಿ ಖುಷ್ಬು ನಟಿಸಿದ್ದಾರೆ, ಈ ಚಿತ್ರಕ್ಕೆ ಸಿ ಸುಂದರ್ ಆಕ್ಷನ್ ಕಟ್ ಹೇಳಿದ್ದರು. ಈ ಸಮಯದಲ್ಲಿ ಇಬ್ಬರಿಗೂ ಲವ್ ಆಗಿದೆ. ಆದರೆ ಅಂದಿನಿಂದ ಇಬ್ಬರೂ ಐ ಲವ್ ಯೂ (I love You) ಎಂದು ಹೇಳಿಲ್ಲವಂತೆ. ಈ ಕುರಿತು ಸಂದರ್ಶನವೊಂದರಲ್ಲಿ ಖುಷ್ಬೂ ಹೇಳಿಕೊಂಡಿದ್ದರು.   ಪತಿ ಹೆಸರನ್ನು ಸ್ವೀಟ್ ಹಾರ್ಟ್‌ (Sweetheart) ಎಂದು ಫೋನ್​ನಲ್ಲಿ ಸೇವ್ ಮಾಡಿರುವುದಾಗಿ ತಿಳಿಸಿದ್ದಾರೆ.

ರವಿಚಂದ್ರನ್‌ರವರ ರಣಧೀರ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಖುಷ್ಬೂ ಸುಂದರ್ ಸರಿ ಸುಮಾರು 20ಕ್ಕೂ ಅಧಿಕ ಕನ್ನಡ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದರು. ಅಂದಹಾಗೆ ನಟಿ, ಕಾಂಗ್ರೆಸ್​ ವಕ್ತಾರೆಯಾಗಿದ್ದವರು. ನಂತರ 2020ರಲ್ಲಿ ಬಿಜೆಪಿ ಸಿದ್ಧಾಂತಕ್ಕೆ ಮನಸೋತು  ಬಿಜೆಪಿಯನ್ನು ಸೇರಿದ್ದರು. ನೀವು ಇಷ್ಟ ಮತ್ತು ಪ್ರೀತಿಯ ಜೊತೆಗಿನ ವ್ಯತ್ಯಾಸ ಹಾಗೂ ತಪ್ಪು ಮತ್ತು ಸರಿಗಳ ಮಧ್ಯೆಯ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳಿ. ಜೀವನದಲ್ಲಿ ಬದಲಾವಣೆ ಅನಿವಾರ್ಯ ಎಂದು ಬರೆದುಕೊಂಡಿದ್ದ ಅವರು,  ಕಾಂಗ್ರೆಸ್‌ ವಿರೋಧ ನಿಲುವು ಅನುಸರಿಸಿದ್ದ ಕೇಂದ್ರದ ನೂತನ ಶಿಕ್ಷಣ ನೀತಿಯನ್ನು ಖುಷ್ಬು ಸುಂದರ್‌ ಬಹಿರಂಗವಾಗಿಯೇ ಸಮರ್ಥಿಸಿದ್ದರು.

Actress Khushboo Sundar is seriously ill