ಗುರುಮಠಕಲ್:  ಸತತ 8 ಬಾರಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು, ಈಗ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ತಲುಪುವಲ್ಲಿ ಸಾಗಿದ ತಮ್ಮ ರಾಜಕೀಯ ಇತಿಹಾಸಕ್ಕೆ ಗುರುಮಠಕಲ್‌ ಜನರ ಆಶೀರ್ವಾದವೇ ಕಾರಣ ಎಂದು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಮತಕ್ಷೇತ್ರದ ಸೈದಾಪುರ ಗ್ರಾಮದಲ್ಲಿ ಕಾಂಗ್ರೆಸ್‌ ವತಿಯಿಂದ, ಶನಿವಾರ ಆಯೋಜಿಸಿದ್ದ ನೂತನ ಕಾಂಗ್ರೆಸ್‌ ಕಚೇರಿ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ನನ್ನ ರಾಜಕೀಯ ಗುರು, ಮಾಜಿ ಮುಖ್ಯಮಂತ್ರಿ ದೇವರಾಜ ಅರಸರ ಮಾರ್ಗದರ್ಶನದಂತೆ ಗುರುಮಠಕಲ್‌ ಕ್ಷೇತ್ರದಲ್ಲಿ ಸ್ಪರ್ಧಿಸಿ ಸತತವಾಗಿ 8 ಬಾರಿ ಗೆದ್ದು, ಕಾಂಗ್ರೆಸ್‌ ಎಐಸಿಸಿ ಅಧ್ಯಕ್ಷನಂತಹ ಉನ್ನತ ಮಟ್ಟಕ್ಕೆ ತಲುಪಲು ನಿಮ್ಮ ಆಶೀರ್ವಾದವೆ ಕಾರಣ ಎಂದು ಹಳೆ ನೆನೆಪುಗಳನ್ನು ಖರ್ಗೆ ಮೆಲುಕು ಹಾಕಿದರು.

ಶಾಸಕನಾಗಿ, ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಹಲವು ಸಲ ರಾಜ್ಯದ ಮುಖ್ಯಮಂತ್ರಿ ಆಗುವ ಅವಕಾಶ ತಪ್ಪಿದ್ದರೂ ವಿಚಲಿತಗೊಳ್ಳದೆ, ಬೇಸರಗೊಳ್ಳದೆ ಪಕ್ಷದಲ್ಲಿ ಉಳಿದಿದ್ದೇನೆ. ಇದರ ಫಲವಾಗಿ ಇಂದು ಉನ್ನತ ಸ್ಥಾನ ದೊರಕಿದೆ. ಪಕ್ಷದ ಕಾರ್ಯಕರ್ತರೇ ಖರ್ಚು ಮಾಡಿ ನನ್ನನ್ನು ಗೆಲ್ಲಿಸಿದ್ದಾರೆ. ನಾನು ಎಂದೂ ಹಣ ಹಂಚಿಲ್ಲ, ಶಾಶ್ವತವಾದ ಕೆಲಸ ಮಾಡಿಕೊಟ್ಟಿದ್ದೇನೆ ಎಂದು ಹೇಳಿದರು.

371 (ಜೆ) ವಿಧಿ​ಯಿಂದ ಸಂವಿಧಾನ ಇರುವವರಿಗೆ ಕಲ್ಯಾಣ ಕರ್ನಾಟಕದಲ್ಲಿ ಹಲವು ಜನರಿಗೆ ಉದ್ಯೋಗ ಮತ್ತು ಉನ್ನತ ಶಿಕ್ಷಣಗಳಾದ ವೈದ್ಯಕೀಯ, ಎಂಜಿನಿಯರ್‌ ಮುಂತಾದವುಗಳಲ್ಲಿ ಮೀಸಲಾತಿ ಪಡೆಯಲಿದ್ದಾರೆ. ಕಲ್ಯಾಣ ಕರ್ನಾಟಕ ಹೊರಗಡೆ ಶೇ.8ರಷ್ಟುಮೀಸಲಾತಿ ಕಲ್ಪಿಸಲಾಗಿದೆ. ಇದು ಸೋನಿಯಾ ಗಾಂಧಿ​ ಅವರ ಆಶೀರ್ವಾದವಾಗಿದೆ ಎಂದು ಅವರು ತಿಳಿಸಿದರು.

ಎಐಸಿಸಿ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ತಮಗೆ ರಾಜಕೀಯ ನೆಲೆ ಅವಕಾಶ ಕೊಟ್ಟಸ್ವಂತ ಕ್ಷೇತ್ರಕ್ಕೆ ಡಾ. ಮಲ್ಲಿಕಾರ್ಜುನ ಖರ್ಗೆ ಆಗಮಿಸಿದಾಗ ಅಂದಾಜು 12 ಸಾವಿರದಿಂದ 15 ಸಾವಿರ ಜನಸಾಗರ ಅವರನ್ನು ಅದ್ಧೂರಿ ಸ್ವಾಗತ ಮಾಡಿಕೊಂಡರು. ದೆಹಲಿಯಿಂದ ಹೈದರಾಬಾದ್‌ ಮೂಲಕ ಸೈದಾಪುರ ಗ್ರಾಮಕ್ಕೆ ಹೆಲಿಪ್ಯಾಡ್‌ ಮೂಲಕ ಬಂದರು. ಸಾವಿರಾರು ಕಾಂಗ್ರೆಸ್‌ ಕಾರ್ಯಕರ್ತರು ಗ್ರಾಮದ ಹೊರವಲಯದವರಿಗೆ ಬೈಕ್‌ ರ್ಯಾಲಿ ಮೂಲಕ ಸ್ವಾಗತಿಸಿದರು. ರಾರ‍ಯಲಿಯಲ್ಲಿ ಬಾಬುರಾವ್‌ ಚಿಂಚನಸೂರ ಭಾವಚಿತ್ರಗಳು ಕೈಗಳಲ್ಲಿ ಹಿಡಿದುಕೊಂಡು ಕುಣಿದು ಕುಪ್ಪಳಿಸಿದ್ದು ವಿಶೇಷವಾಗಿತ್ತು.

ಗುರುಮಠಕಲ್‌ ಮತಕ್ಷೇತ್ರದಿಂದ ರಾಜಕೀಯ ಜೀವನ ಆರಂಭಿಸಿದ ಖರ್ಗೆ ಅವರು, ಈ ಮೊದಲು ಸೇಡಂ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದರಂತೆ. ಶನಿವಾರ ಸೈದಾಪುರದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಮೊದಲು ಸೇಡಂ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದೆ, ಅಲ್ಲಿ ನನಗೆ ಸಂಬಂಧಿಕರು ಇದ್ದರು. ಇನ್ನು, ಗುರುಮಠಕಲ್‌ ಕ್ಷೇತ್ರದಲ್ಲಿ ತೆಲುಗು ಮಾತನಾಡುವರಿದ್ದರು. ನನಗೆ ತೆಲುಗು ಭಾಷೆಯೂ ಬರುತ್ತಿದಿಲ್ಲ, ಇದರಿಂದ ಭಯ ಪಟ್ಟಿದ್ದೆ. ಆದರೆ, ದೇವರಾಜ್‌ ಅರಸರು ಧೈರ್ಯ ಮಾಡಿ ಈ ಕ್ಷೇತ್ರಕ್ಕೆ ಕಳುಹಿಸಿದರು, ಗೆದ್ದು ಬಾ ಮಂತ್ರಿ ಮಾಡುತ್ತೇನೆ ಎಂದು ಭರವಸೆ ನೀಡಿದರು. ಈ ಕ್ಷೇತ್ರದಲ್ಲಿ ಮತ್ತು ಯಾದಗಿರಿಯಲ್ಲಿ ಹಿಂದುಳಿದ ಪ್ರದೇಶ ವಾಗಿದೆ ಎಂದು ತಿಳಿದು ಅಭಿವೃದ್ಧಿ ಮಾಡಲು ಹೋರಾಟ ನಡೆಸಿದ್ದೇನೆ ಎಂದು ಹಳೆಯ ಘಟನೆಗಳನ್ನು ಮೆಲುಕು ಹಾಕಿದರು.

AICC President with the blessings of the people of Gurmatkal