ಭಾರತವು ಕೃಷಿಯಾಧಾರಿತ ದೇಶ. ಇಲ್ಲಿ ಎರಡು ರೀತಿಯ ಕೃಷಿ ಮಾಡುತ್ತಾರೆ. ಒಂದು ಆಹಾರ ಬೆಳೆಯಾದರೆ ಮತ್ತೊಂದು ವಾಣಿಜ್ಯ ಕೃಷಿ. ಈ ವಾಣಿಜ್ಯ ಕೃಷಿಯಲ್ಲಿ ಅಡಿಕೆ(Areca Nut)ಗೆ ಪ್ರಮುಖ ಸ್ಥಾನ. ಅಡಿಕೆ ಕೃಷಿಯನ್ನು ಮಾಡಬೇಕಾದರೆ ಹೆಚ್ಚು ಇಳುವರಿಕೊಡುವ ಉತ್ತಮ ಸಸಿಗಳನ್ನೇ ಆಯ್ದುಕೊಳ್ಳಬೇಕಲ್ಲವೇ? ಹಾಗಾದರೆ, ಉತ್ಕೃಷ್ಟ ಸಸಿಗಳನ್ನು ಆಯ್ದುಕೊಳ್ಳುಲು ಏನಾದರೂ ಸೂತ್ರವಿದೆಯೇ? ಹೌದು ಎನ್ನುತ್ತಾರೆ, ಬೆಂಗಳೂರಿನ ತೋಟಗಾರಿಕೆ ಮಾಹಾವಿದ್ಯಾಲಯದ ಸಹಾಯ ಪ್ರಾಧ್ಯಾಪಕರಾದ ‘ಹರೀಶ್‌ ಬಿ. ಎಸ್‌’. ಅವರು ಒಂದು ಕವಿತೆಯ ಮೂಲಕ ಉತ್ಕೃಷ್ಟ ಸಸಿಗಳನ್ನು ಆಯ್ಕೆ ಮಾಡುವುದು ಹೇಗೆ ಎಂದು ಸುಲಭವಾಗಿ ತಿಳಿಸಿದ್ದಾರೆ. ಅದರ ಸಾರಾಂಶ ಹೀಗಿದೆ. . .

Areca Nut Song
ಉತ್ತಮ ಅಡಿಕೆ ಸಸಿ ಆಯ್ಕೆ ಹೇಗೆ?

ಮೊಟ್ಟಮೊದಲಿಗೆ ತಾಯಿಮರದಾಯ್ಕೆ
ನಂತರದಿ ಬೀಜದ ಗೋಟಿನಾಯ್ಕೆ
ಆಮೇಲೆ ಸಸಿಮಡಿ. ವರುಷವಾದಮೇಲೆ
ಉತ್ತಮ ಸಸಿಗಳನಾಯ್ದುಕೊಳುವ ಜಾಣ್ಮೆ.

ಉತ್ತಮ ಸಸಿಯನ್ನು ಆಯ್ದುಕೊಳ್ಳುವುದು ಒಂದ ಜಾಣತನ. ಹಾಗಾದರೆ ಇದಕ್ಕೆ ಒಂದು ಸೂತ್ರವಿರಬೇಕಲ್ಲವೇ? ಅದೇನೆಂದರೆ, ಉತ್ತಮ ಅಡಿಕೆ ಸಸಿ ಆಯ್ದುಕೊಳ್ಳುವ ಮೊದಲು ತಾಯಿ ಮರವನ್ನು ಆಯ್ದುಕೊಳ್ಳಬೇಕು. ನಂತರ ಬೀಜಕ್ಕಾಗಿ ಉತ್ತಮ ಗೋಟಿನ ಅಡಿಕೆ ಆಯ್ದುಕೊಳ್ಳಬೇಕು. ತದನಂತರ, ಸಸಿಮಡಿ ಮಾಡಬೇಕು, ಅದು ವರುಷವಾದ ಮೇಲೆ ಅದರಲ್ಲಿ ಉತ್ತಮ ಸಸಿಗಳನ್ನು ಆಯ್ದುಕೊಳ್ಳಬೇಕು.

ತಾಯಿಮರವು ಹೇಗಿರಬೇಕು?

ಬೇಗ ಫಲಕೊಡಲು ಆರಂಭಿಸಿರಬೇಕು
ನಿಯಮಿತದಿ ಫಸಲುಕೊಡುತಿರಬೇಕು
ನೆತ್ತಿಯಲಿ ಹೆಚ್ಚು ಎಲೆಗಳಿರಬೇಕು
ಗೆಣ್ಣುಗಳ ನಡುವಿನಂತರ ಕಡಿಮೆಯಿರಬೇಕು
ಸತತ ಹೆಚ್ಚು ಇಳುವರಿ ಕೊಡುತಿರಬೇಕು

ಯಾವುದೇ ಕೃಷಿ ಮಾಡಬೇಕೆಂದರೂ ಮೊದಲ ಆಯ್ಕೆ ಉತ್ಕೃಷ್ಟ ತಾಯಿಮರದ್ದಾಗಿರುತ್ತದೆ. ಅಂದರೆ ತಾಯಿ ಮರವೇ ಉತ್ತಮವಾಗಿರಬೇಕು. ತಾಯಿಮರವು ಹೇಗಿರಬೇಕೆಂದರೆ,
* ಬೇಗ ಫಲ ಕೊಡಲು ಆರಂಭಿಸಬೇಕು.
* ನಿಯಮಿತವಾಗಿ ಫಸಲನ್ನು ಕೊಡುತ್ತಿರಬೇಕು.
* ಗಿಡದ ನೆತ್ತಿಯಲ್ಲಿ ಹೆಚ್ಚಿನ ಎಲೆಗಳಿರಬೇಕು
* ಮರದ ಗೆಣ್ಣುಗಳ ನಡುವಿನ ಅಂತರವು ಕಡಿಮೆ ಇರಬೇಕು.
* ಸತತವಾಗಿ ಇಳುವರಿಯನ್ನು ವರ್ಷದಿಂದ ವರ್ಷಕ್ಕೆ ಹೆಚ್ಚು ಕೊಡುತ್ತಿರಬೇಕು.

ಬೀಜದ ಗೋಟನ್ನು ಆಯ್ಕೆ ಮಾಡುವುದು ಹೇಗೆ?

ಪರಿಪೂರ್ಣವಾಗಿ ಹಣ್ಣಾಗಿರಲಿ ಗೋಟು
ನಡು ಗೊನೆಗಳ ನಡುವಿನವಾಗಿರಲಿ
ತೂಕ ಮೂವತ್ತೈದು ಗ್ರಾಮಿನ ಮೇಲಿರಲಿ
ತೊಟ್ಟು ಮೇಲ್ಮುಖವಾಗಿದ್ದು ನೀರಿನಲಿ
ಉದ್ದುದ ತೇಲುವ ಗೋಟುಗಳಾಗಿರಲಿ

ತಾಯಿಮರದ ಆಯ್ಕೆಯಾದ ನಂತರ ಅದರಲ್ಲಿರುವ ಅಡಿಕೆಯಲ್ಲಿ ಉತ್ತಮ ಬೀಜಕ್ಕಾಗಿ ಗೋಟನ್ನು ಆಯ್ದುಕೊಳ್ಳಬೇಕು. ಉತ್ತಮ ಬೀಜದ ಗೋಟನ್ನು ಆಯ್ದುಕೊಳ್ಳುವುದು ಹೇಗೆಂದರೆ,

* ಮೊದಲು ಗೋಟು ಅಡಿಕೆಯು ಪರಿಪೂರ್ಣವಾಗಿ ಹಣ್ಣಾಗಿರಬೇಕು. ಅಂದರೆ, ಅಡಿಕೆಯು ಸಂಪೂರ್ಣವಾಗಿ ಕೇಸರಿ ಅಥವಾ ಕೆಂಪು ಬಣ್ಣದ್ದಾಗಿರಬೇಕು.
* ಅಡಿಕೆ ಗೊನೆಗಳ ರಾಶಿಯಲ್ಲಿ ನಡುವಿನ ಗೊನೆಗಳ ಮಧ್ಯದಲ್ಲಿರುವ ಗೋಟುಗಳನ್ನೇ ಆಯ್ದುಕೊಳ್ಳಬೇಕು.
* ಒಂದು ಗೋಟು ಅಡಿಕೆಯ ತೂಕವು ಮೂವತ್ತೈದು ಗ್ರಾಮಿನ ಮೇಲೆ ಇರಬೇಕು.
* ಅದರ ತೊಟ್ಟು ಮೇಲ್ಮುಖವಾಗಿಯೇ ಇರಬೇಕು.
* ನೀರಿನಲ್ಲಿ ಹಾಕಿದಾಗ ಆ ಗೋಟು ಉದ್ದುದ್ದವಾಗಿಯೇ ತೇಲುತ್ತಿರಬೇಕು.

ಇವಿಷ್ಷು ಉತ್ತಮ ತಳಿಯ ಗೋಟನ್ನು ಆಯ್ದುಕೊಳ್ಳುವ ಸೂತ್ರ.

ಉತ್ಕೃಷ್ಟ ಸಸಿಗಳ ಆಯ್ಕೆ ಹೇಗೆ?

ಆಯು ವರುಷವಾದರೂ ಆಗಿರಲಿ
ಕನಿಷ್ಠ ನಾಲ್ಕೈದು ಎಲೆಗಳಿರಲಿ
ಎತ್ತರ ಆದಷ್ಟೂ ಕಡಿಮೆಯಿರಲಿ
ಬುಡದಿ ಕುತ್ತಿಗೆಯ ಸುತ್ತಳತೆ ಹೆಚ್ಚಿರಲಿ
ಎಲೆಗಳ ಸಂಖ್ಯೆ ನಲವತ್ತರ ಗುಣಲಬ್ಧವನು
ಗಿಡದೆತ್ತರದಿ ವ್ಯವಕಲಿಸಿದಾಗ ಸೂಚಕ
ನೂರೈವತ್ತರ ಮೇಲೆ ಬಂದಲ್ಲಿ
ಉತ್ತಮ–ಉತ್ಕೃಷ್ಟ ಸಸಿ ಅದುವೆ ನೋಡಿ.

ತಾಯಿಮರ, ಬೀಜದ ಗೋಟು ಅಡಿಕೆಗಳನ್ನು ಆಯ್ದುಕೊಂಡ ಮೇಲೆ ನಂತರದ ಆಯ್ಕೆಯು ಸಸಿಗಳದ್ದಾಗಿರುತ್ತದೆ. ಉತ್ತಮ ಸಸಿಗಳ ಆಯ್ಕೆಯ ಸೂತ್ರವು ಹೀಗಿದೆ.

* ಬೀಜ ಹಾಕಿ ಮೊಳಕೆಯೊಡದ ಸಸಿಯು ಕನಿಷ್ಠ ಒಂದು ವರ್ಷದ್ದಾಗಿರಬೇಕು.
* ಅದರಲ್ಲಿ ಕನಿಷ್ಠ ನಾಲ್ಕೈದು ಎಲೆಗಳು ಬಿಟ್ಟಿರಬೇಕು.
* ಎತ್ತರವೂ ಕಡಿಮೆ ಇದ್ದಷ್ಟೂ ಒಳ್ಳೆಯದು.
* ಸಸಿಯ ಬುಡದ ಕುತ್ತಿಗೆಯ ಸುತ್ತಳತೆಯು ಹೆಚ್ಚಿರಬೇಕು. ಅಂದರೆ ಕಾಂಡವು ದಪ್ಪವಾಗಿಬೇಕು.
* ಇಷ್ಟಿದ್ದರೆ ಸಾಕೆ? ಸಸಿಗಳಿಗೆ ಒಂದು ಸೂಚ್ಯಂಕವಿದೆ. ಅದೇನೆಂದರೆ, ಗಿಡದ ಎಲೆಗಳ ಸಂಖ್ಯೆಯನ್ನು ನಲವತ್ತರಿಂದ ಗುಣಿಸಿ, ಆಗ ಬರುವ ಗುಣಲಬ್ಧವನ್ನು ಗಿಡದ ಎತ್ತರದ ಸಂಖ್ಯೆಯಿಂದ ಕಳೆಯಿರಿ. ಆಗ ಬರುವ ಉತ್ತರವು 150ರ ಮೇಲಿದ್ದರೆ ಅದು ಉತ್ಕೃಷ್ಟ ಸಸಿ ಎಂದಾಗುತ್ತದೆ.

ಉದಾಹರಣೆಗೆ ಈ ಲೆಕ್ಕ ಮಾಡುವುದು ಹೇಗೆಂದರೆ:
ಸಸಿಯಲ್ಲಿರುವ ಎಲೆಗಳ ಸಂಖ್ಯೆ 6 ಎಂದುಕೊಳ್ಳಿ
ಎಲೆ=6
6×40=240
ಗಿಡದ ಎತ್ತರ=55 ಸೆಂ.ಮೀ ಎಂದಾದರೆ,
240–55= 185
ಈಗ ಬಂದ ಉತ್ತರದ ಸೂಚ್ಯಂಕವು 150ಕ್ಕಿಂತ ಹೆಚ್ಚಿರುವುದರಿಂದ, ಇದು ಸರಿಯಾದ ಸೂಚ್ಯಂಕ ಮತ್ತು ಅದೇ ಸಸಿಯನ್ನು ಆಯ್ದುಕೊಳ್ಳಬಹದು ಎಂದರ್ಥ.

ಹೀಗೆ ಹರೀಶ್‌ ಬಿ.ಎಸ್‌. ಅವರು ತಾಯಿಮರ, ಗೋಟು, ಸಸಿಗಳ ಆಯ್ಕೆ ಬಗ್ಗೆ ಸರಳವಾಗಿ ಕೃಷಿಕರಿಗೆ ಅನುಕೂಲವಾಗುವಂತೆ ಹೇಳಿದ್ದಾರೆ. ಈ ಸೂತ್ರಗಳನ್ನು ಉಪಯೋಗಿಸಿಕೊಂಡು ಉತ್ತಮ ಇಳುವರಿಯ ಅಡಿಕೆ ಕೃಷಿ ಮಾಡಬಹುದು.
__________________

ಪೂರಕ ಮಾಹಿತಿ:

ಹರೀಶ್‌ ಬಿ. ಎಸ್‌.
ಸಹಾಯಕ ಪ್ರಾಧ್ಯಾಪಕರು
ತೋಟಗಾರಿಕೆ ಮಾಹಾವಿದ್ಯಾಲಯ
ಬೆಂಗಳೂರು.
ಫೋನ್‌ ನಂ. 9480557634.

ಇದನ್ನೂ ಓದಿ: ರಾಜಸ್ಥಾನದ ಶಾಸಕರಿಗೆ ಐಫೋನ್-13 ಉಡುಗೊರೆ!

ಇದನ್ನೂ ಓದಿ: ಉಕ್ರೇನ್‌ ಮೇಲಿನ ಸಮರ: ಭಾರತದಲ್ಲಿ ಬೆಲೆ ಏರಿಕೆಯ ಆಘಾತ?

(Areca Nut Forming How to Select Best Plant for Farming)