ಬೆಂಗಳೂರು: ನಟ, ಉತ್ತಮ ಪ್ರಜಾಕೀಯ ಪಕ್ಷ ಸಂಸ್ಥಾಪಕ ಉಪೇಂದ್ರ ಅವರ ಹೇಳಿಕೆ ಇದೀಗ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದು ಈ ಹೇಳಿಕೆ ಖಂಡಿಸಿ ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು ಉಪೇಂದ್ರ ವಿರುದ್ಧ ಅಟ್ರಾಸಿಟಿ ದೂರು ದಾಖಲಿಸಿದ್ದಾರೆ.

UPP ಸ್ಥಾಪನೆಯಾಗಿ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ‘ಪ್ರಜಾಕೀಯ ದಿನ’ ಆಚರಣೆ ಪ್ರಯುಕ್ತ ಫೇಸ್ ಬುಕ್ ನಲ್ಲಿ ಲೈವ್ ಬಂದಿದ್ದ ಉಪೇಂದ್ರ ಮಾತಿನ ನಡುವೆ ಬಳಸಿದ ಗಾದೆ ಮಾತಿಗೆ ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಕಳೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳು ಇತರೆ ಕೆಲವು ರಾಜಕೀಯ ಪಕ್ಷಗಳಿಗಿಂತಲೂ ಹೆಚ್ಚು ಮತಗಳನ್ನು ಯಾವುದೇ ಪ್ರಚಾರವಿಲ್ಲದೆ ಪಡೆದಿದ್ದಾರೆ ಎಂದು ಹೆಮ್ಮೆಯಿಂದ ಹೇಳಲು ಬಯಸುತ್ತೇನೆ ಎಂದರು. ನಂತರ ಮಾತು ಮುಂದುವರೆಸಿ ಯಾವುದೋ ಮಾತಿಗೆ ‘ಊರೆಂದರೆ ಹೊಲೆಗೇರಿ ಇದ್ದೇ ಇರುತ್ತದೆ’ ಎಂದು ಹೇಳಿದ್ದು ಈ ಮಾತಿಗೆ ಇದೀಗ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಹೇಳಿಕೆಯನ್ನು ಖಂಡಿಸಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಧುಸೂದನ್ ಎಂಬುವರು ಸಿಕೆ ಅಚ್ಚುಕಟ್ಟು ಪ್ರದೇಶ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ.

ಉಪೇಂದ್ರರ ಈ ಹೇಳಿಕೆಯನ್ನು ವಿರೋಧಿಸಿ ರಾಮನಗರದಲ್ಲಿ ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಸಮತಾ ಸೈನಿಕ ದಳ ಮತ್ತು ದಲಿತ ಪರ ಒಕ್ಕೂಟದ ಸದಸ್ಯರು ರಾಮನಗರದ ಹಾರೋಹಳ್ಳಿಯ ವೃತ್ತದಲ್ಲಿ‌ ಪ್ರತಿಭಟನೆ ನಡೆಸಿದ್ದು ಇದೇ ವೇಳೆ ಉಪೇಂದ್ರ ಅವರ ಪ್ರತಿಕೃತಿ ದಹಿಸಿ ಧಿಕ್ಕಾರ ಕೂಗಿದರು. ಇನ್ನು ಉಪೇಂದ್ರರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿಯೂ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ತಮ್ಮ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಉಪೇಂದ್ರ ವಿಡಿಯೋವನ್ನು ನನ್ನ ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಿದ್ದೇನು. ನನ್ನ ಹೇಳಿಕೆಗೆ ಕ್ಷಮೆಯಿರಲಿ ಎಂದು ಕ್ಷಮಾಪಣೆ ಕೇಳಿದ್ದಾರೆ.

Atrocity case registered against actor Upendra