ಬೀಜಿಂಗ್‌: ಚೀನಾ ದೇಶ ಮತ್ತೆ ಭಾರತದ ವಿರುದ್ಧ ಕಾಲುಕೆರೆದಿದ್ದು, ಅರುಣಾಚಲ ಪ್ರದೇಶದಲ್ಲಿ ಹಕ್ಕು ಸಾಧಿಸುವ ಸಲುವಾಗಿ ಮತ್ತೆ ಇಲ್ಲಿನ 11 ಸ್ಥಳಗಳ ಹೆಸರುಗಳನ್ನು ಬದಲಿಸಿದೆ.

ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಮೂರನೇ ಹಂತದಲ್ಲಿ ಹೆಸರುಗಳನ್ನು ಬದಲಿಸಿದೆ ಎಂದು ‘ಗ್ಲೋಬಲ್ ಟೈಮ್ಸ್‌’ ಸೋಮವಾರ ವರದಿ ಮಾಡಿದ್ದು, ಅರುಣಾಚಲ ಪ್ರದೇಶದ ಆರು ಸ್ಥಳಗಳಿಗೆ 2017ರಲ್ಲಿ ಹಾಗೂ 15 ಸ್ಥಳಗಳಿಗೆ 2021ರಲ್ಲಿ ಚೀನಾ ಮರುನಾಮಕರಣ ಮಾಡಿತ್ತು. ಚೀನಾದ ಈ ನಡೆಯನ್ನು ಭಾರತವು ಈ ಹಿಂದೆಯೇ ತಳ್ಳಿಹಾಕಿತ್ತು.

ಭಾರತವು ಇತ್ತೀಚೆಗೆ ಗಡಿ ರಾಜ್ಯವಾದ ಅರುಣಾಚಲ ಪ್ರದೇಶದಲ್ಲಿ G20 ಸರಣಿ ಕಾರ್ಯಕ್ರಮಗಳ ಭಾಗವಾಗಿ ಮಹತ್ವದ ಸಭೆಯನ್ನು ನಡೆಸಿತ್ತು. ಈ ಸಭೆಯಲ್ಲಿ ಚೀನಾ ಭಾಗವಹಿಸಿರಲಿಲ್ಲ. ವಿವಾದಿತ ಅರುಣಾಚಲ ಪ್ರದೇಶದಲ್ಲಿ ಜಿ20 ಸಭೆ ಆಯೋಜನೆ ಕುರಿತು ಪರೋಕ್ಷ ಅಸಮಾಧಾನ ಹೊಂದಿದ್ದ ಚೀನಾ ಇದೀಗ ಚೀನಾದ ಪ್ರಮಾಣೀಕೃತ ಹೆಸರುಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಅರುಣಾಚಲ ಪ್ರದೇಶದ 11 ಸ್ಥಳಗಳ ಹೆಸರನ್ನು ಉಲ್ಲೇಖಿಸಲಾಗಿದೆ. ಈ 11 ಪ್ರದೇಶಗಳಿಗೆ ಚೈನೀಸ್, ಟಿಬೆಟಿಯನ್ ಮತ್ತು ಪಿನ್ಯಿನ್ ಅಕ್ಷರಗಳಲ್ಲಿ ಈ ಹೆಸರುಗಳನ್ನು ನೀಡಲಾಗಿದೆ.

ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಅರುಣಾಚಲ ಪ್ರದೇಶದ 11 ಸ್ಥಳಗಳ ಪ್ರಮಾಣಿತ ಹೆಸರುಗಳನ್ನು ಭಾನುವಾರ ಬಿಡುಗಡೆ ಮಾಡಿದ್ದು, ಅರುಣಾಚಲ ಪ್ರದೇಶವನ್ನು ದಕ್ಷಿಣ ಚೀನಾದ ಭಾಗವೆಂದು ವಿವರಿಸಿದ್ದಾರೆ. ಅಲ್ಲದೆ ಅದನ್ನು ಜಾಂಗ್ನಾನ್ ಎಂದು ಕರೆದಿದ್ದಾರೆ. ಎರಡು ಭೂ ಪ್ರದೇಶಗಳು, ಎರಡು ವಸತಿ ಪ್ರದೇಶಗಳು, ಐದು ಪರ್ವತ ಶಿಖರಗಳು ಮತ್ತು ಎರಡು ನದಿಗಳು ಸೇರಿದಂತೆ 11 ಸ್ಥಳಗಳ “ಅಧಿಕೃತ” ಹೆಸರುಗಳನ್ನು ಸಚಿವಾಲಯ ಭಾನುವಾರ ಬಿಡುಗಡೆ ಮಾಡಿದೆ ಎಂದು ಚೀನಾ ಸರ್ಕಾರಿ ನಿಯಂತ್ರಿತ ಪತ್ರಿಕೆ ಗ್ಲೋಬಲ್ ಟೈಮ್ಸ್ ಸೋಮವಾರ ವರದಿ ಮಾಡಿದೆ.

ಇದು ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಅರುಣಾಚಲ ಪ್ರದೇಶಕ್ಕೆ ಪ್ರಮಾಣೀಕೃತ ಭೌಗೋಳಿಕ ಹೆಸರುಗಳ ಮೂರನೇ ಬ್ಯಾಚ್ ಆಗಿದ್ದು, ಅರುಣಾಚಲದಲ್ಲಿ ಆರು ಸ್ಥಳಗಳ ಪ್ರಮಾಣಿತ ಹೆಸರುಗಳ ಮೊದಲ ಬ್ಯಾಚ್ 2017 ರಲ್ಲಿ ಮತ್ತು ಎರಡನೇ ಬ್ಯಾಚ್ 15 ಸ್ಥಳಗಳನ್ನು 2021 ರಲ್ಲಿ ಬಿಡುಗಡೆ ಮಾಡಲಾಗಿತ್ತು. ಅರುಣಾಚಲ ಪ್ರದೇಶದ ಕೆಲವು ಸ್ಥಳಗಳ ಹೆಸರನ್ನು ಬದಲಾಯಿಸುವ ಚೀನಾದ ಕ್ರಮವನ್ನು ಭಾರತ ಈ ಹಿಂದೆ ತಿರಸ್ಕರಿಸಿತ್ತು. ಗಡಿ ರಾಜ್ಯ ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದೆ. ಹೆಸರುಗಳನ್ನು ಆವಿಷ್ಕರಿಸುವುದರಿಂದ ನೆಲದ ಮೇಲಿನ ಸತ್ಯಗಳನ್ನು ಬದಲಾಯಿಸುವುದಿಲ್ಲ ಎಂದು ಭಾರತ ಕಿಡಿಕಾರಿದೆ.

Chinese government has changed the names of 11 places