ಚಿಕ್ಕಮಗಳೂರು: ಹಸೆಮಣೆ ಏರುವ ಮುನ್ನ ಮದುಮಗಳಾಗಿ ಅಲಂಕಾರಗೊಂಡು ಯುವತಿ ತನ್ನ ಬೂತ್ ನಲ್ಲಿ ಮೊದಲ ಮತದಾನ ಮಾಡಿ ಮದುವೆಗೆ ತೆರಳಿರುವ ಘಟನೆ ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದಲ್ಲಿ ನಡೆದಿದೆ.

ಕುಂದೂರು ಸಮೀಪದ ತಳವಾರ ಗ್ರಾಮದ ಸೌಮ್ಯ ಎಂಬ ಯುವತಿಯ ಮದುವೆ ಕೊಪ್ಪ ಮೂಲದ ಸಂಜಯ್ ಎಂಬುವರೊಂದಿಗೆ ನಿಶ್ಚಯವಾಗಿತ್ತು. ಇಂದೇ ಮದುವೆ ನಿಗದಿಯಾಗಿದ್ದ ಕಾರಣ ಮದುವೆ ಮಂಟಪಕ್ಕೆ ತೆರಳವ ಮುನ್ನ ಮದುಮಗಳಾಗಿ ಅಲಂಕಾರಗೊಂಡ ಯುವತಿ ಮೊದಲ ಮತದಾನ ಮಾಡಿ ಮದುವೆ ಮಂಟಪಕ್ಕೆ ತೆರಳಿದ್ದಾರೆ.

ಮೂಡಿಗೆರೆ ಪಟ್ಟಣದ ಪ್ರೀತಂ ಹಾಲ್‌ನಲ್ಲಿ ಮದುವೆ ನಡೆಯಲಿದೆ. ಮತದಾನದ ಬಳಿಕ ತಳವಾರ ಗ್ರಾಮದಿಂದ ಸುಮಾರು ೨೦ ಕಿ.ಮೀ. ದೂರದ ಮೂಡಿಗೆರೆಗೆ ತೆರಳಿದ್ದಾರೆ. ಕುಂದೂರು ಗ್ರಾಮದ ಬೂತ್ ನಂಬರ್ ೮೬ರಲ್ಲಿ ಮತದಾನ ಮಾಡಿದ್ದಾರೆ.

ಇದೇ ವೇಳೆ ದೇಶದ ಭದ್ರತೆಯ ರಕ್ಷಣೆಗಾಗಿ ಸುಭದ್ರತೆಯ ಸರ್ಕಾರ ನಿರ್ಮಾಣ ಮಾಡಲು ಮತದಾನ ಅತ್ಯಂತ ಮುಖ್ಯ ಎಂದು ಮದುಮಗಳ ಜೊತೆ ಆಕೆಯ ೧೧ ಕುಟುಂಬಸ್ಥರು ಏಕಕಾಲದಲ್ಲಿ ಮತದಾನ ಮಾಡಿದ್ದಾರೆ. ಮದುಮಗಳಾಗಿ ಮತದಾನಕ್ಕೆ ಬಂದ ಯುವತಿ ಸೌಮ್ಯಾಗೆ ಇತರೆ ಮತದಾರರು ಹಾಗೂ ಚುನಾವಣಾ ಸಿಬ್ಬಂದಿಗಳು ಕೂಡ ಶುಭ ಕೋರಿದ್ದಾರೆ.

Voting by newlyweds in Kundur village