ಅಥಣಿ:  ಈಗಾಗಲೇ ನಾನು ಕುಮಟಳ್ಳಿ ಅವರಿಗೆ ಟಿಕೆಟ್‌ ನೀಡದಿದ್ದರೇ ಗೋಕಾಕ ಮತಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೇನೆ. ಪಕ್ಷದ ವರಿಷ್ಠರು ಟಿಕೆಟ್‌ ನೀಡುವ ವಿಚಾರದಲ್ಲಿ ಗೊಂದಲವಿಲ್ಲ ಎಂದಿದ್ದಾರೆ. ಟಿಕೆಟ್‌ ನೀಡುತ್ತಾರೆಂಬ ಆತ್ಮವಿಶ್ವಾಸವಿದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಆರ್‌ಎಸ್‌ಎಸ್‌ ಉತ್ತರ ಪ್ರಾಂತ ಮುಖಂಡ ಅರವಿಂದ ದೇಶಪಾಂಡೆ ಮನೆಯಲ್ಲಿ ಸೋಮವಾರ ಗೌಪ್ಯ ಸಭೆಯ ನಂತರ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಥಣಿ ಮತಕ್ಷೇತ್ರದ ಟಿಕೆಟ್‌ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಶಾಸಕ ಮಹೇಶ ಕುಮಟಳ್ಳಿ ಅವರಿಗೆ ಹೈಕಮಾಂಡ್‌ ಟಿಕೆಟ್‌ ನೀಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಥಣಿ ಮತಕ್ಷೇತ್ರದಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿವಿಧ ಸಮುದಾಯಗಳ ಮುಖಂಡರ ಸಭೆ ನಡೆಸಿ ಬೆಂಬಲ ಕೋರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬುದ್ಧಿವಂತ ಹಾಗೂ ಪ್ರಜ್ಞಾವಂತ ರಾಜಕಾರಣಿ. ಏಕೆ ಈ ರೀತಿ ಮಾಡುತ್ತಿದ್ದಾರೆ ಎಂಬುವುದು ಗೊತ್ತಿಲ್ಲ. ಇನ್ನೂ 5 ವರ್ಷ ಅವರದ್ದು ವಿಧಾನ ಪರಿಷತ್‌ ಅಧಿಕಾರವಿದೆ. ಸವದಿ ಅವರ ಸ್ವಾಭಿಮಾನಕ್ಕೆ ಧಕ್ಕೆ ಬಂದಿದ್ದರೇ ಅವರು ಯೋಚನೆ ಮಾಡಬೇಕು. ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಆದರೂ ನಾವು ಮುಂದುವರಿಯುತ್ತಿದ್ದೇವೆ. ಮಾಧ್ಯಮದವರು ಇದನ್ನು ಟ್ವಿಸ್ಟ್‌ ಮಾಡಬೇಡಿ ಎಂದು ಕೋರಿದರು.

ಅಥಣಿಗೆ ಇಂದಿನ ಭೇಟಿಯ ಮೂಲ ಉದ್ದೇಶ ಮಾ.28 ರಂದು ಕೊಟ್ಟಲಗಿ, ಕಕಮರಿ ಅಮ್ಮಾಜೇಶ್ವರಿ ಏತ ನೀರಾವರಿಯ ಕಾಮಗಾರಿಗೆ ಶಂಕುಸ್ಥಾಪನೆ ಸೇರಿದಂತೆ ವಿವಿಧ ಕಾಮಗಾರಿಗಳ ಉದ್ಘಾಟನೆ ನೆರವೇರಿಸಲು ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದಾರೆ. ಈ ಬಗ್ಗೆ ವಿವಿಧ ಮುಖಂಡರ ಜೊತೆ ಮತ್ತು ಕಾರ್ಯಕರ್ತರ ಜೊತೆ ಚರ್ಚಿಸಲು ಆಗಮಿಸಿದ್ದೇನೆ. ಆರ್‌ಎಸ್‌ಎಸ್‌ ಮುಖಂಡ ಅರವಿಂದ ದೇಶಪಾಂಡೆ ಅವರೊಂದಿಗೆ ನಮ್ಮ ಹಳೆಯ ಸಂಬಂಧವಿದೆ. ಇದಕ್ಕೆಲ್ಲ ಬೇರೆ ಅರ್ಥ ಕಲ್ಪಿಸಬಾರದು ಎಂದು ಮನವಿ ಮಾಡಿದರು.

ನಂತರ ಕಾರ್ಯಕರ್ತರೊಂದಿಗೆ ಮಾತನಾಡಿದ ಅವರು, ಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಶಾಸಕ ಮಹೇಶ ಕುಮಟಳ್ಳಿಗೆ ಸಿಗುತ್ತದೆ. ಈ ಬಗ್ಗೆ ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಬೇಡ. ಬರುವ ಮಾ.28ರಂದು ಮುಖ್ಯಮಂತ್ರಿಗಳು ವಿವಿಧ ಕಾರ್ಯಕ್ರಮಗಳ ಉದ್ಘಾಟನೆಗೆ ಆಗಮಿಸುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ತಾವೆಲ್ಲರೂ ಆಗಮಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ನಿಂಗಪ್ಪ ನಂದೇಶ್ವರ, ಅನಿಲ ಸೌದಾಗರ, ಅಮೂಲ ನಾಯಿಕ, ಸಿದ್ದಪ್ಪ ಮುದುಕಣ್ಣವರ, ಮುರುಗೇಶ ಕುಮಟಳ್ಳಿ, ಅನಿಲ ಭಜಂತ್ರಿ, ಸಿದ್ದು ಹಂಡಗಿ, ಡಾ.ರವಿ ಸಂಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಇತ್ತೀಚೆಗೆ ಮುಸ್ಲಿಂ ಮುಖಂಡರ ಸಭೆ ನಡೆಸಿದ್ದಲ್ಲದೇ ಮತಕ್ಷೇತ್ರದಲ್ಲಿ ವಿವಿಧ ಸಮುದಾಯದ ಮುಖಂಡರ ಜೊತೆಗೆ ಸಭೆ ನಡೆಸುತ್ತಿರುವ ಬೆನ್ನಲ್ಲೆ ಅಥಣಿಗೆ ಭೇಟಿ ನೀಡಿದ ರಮೇಶ ಜಾರಕಿಹೋಳಿ ರಾಜಕೀಯ ನಡೆ ತೀವ್ರ ಕುತೂಹಲ ಮೂಡಿಸಿದೆ.

Confident that Mahesh will give ticket to Kumatalli