ಚಿಕ್ಕಮಗಳೂರು:  ಜಿಲ್ಲೆಯಲ್ಲಿ ಇಂಡಿಯಾ ಮೈತ್ರಿ ಕೂಟದ ಪಕ್ಷಗಳು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರನ್ನು ಬೆಂಬಲಿಸಿದ್ದು ಅವರ ಗೆಲುವು ಖಚಿತ ಎಂದು ಕೆಪಿಸಿಸಿ ವಕ್ತಾರ ಹೆಚ್.ಹೆಚ್.ದೇವರಾಜ್ ವಿಶ್ವಾಸ ವ್ಯಕ್ತಪಡಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ವಿವಿಧ ಪಕ್ಷ ಸಂಘಟನೆಯ ಮುಖಂಡರೊಂದಿಗೆ ಕನ್ನಡಪರ ಸಂಘಟನೆಗಳು, ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳು, ರೈತ ಸಂಘದ ಮುಖಂಡರೊಂದಿಗೆ ಸಭೆ ನಡೆಸಿದ್ದೇವೆ. ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕು ಎಂಬ ಆಶಯ ಎಲ್ಲ ಮುಖಂಡರಿಂದ ವ್ಯಕ್ತವಾಗಿದೆ. ಎಲ್ಲರ ಬೆಂಬಲದಿಂದ ಹಿಟ್ಲರ್ ಮಾದರಿಯ, ದಲಿತ, ರೈತ, ಕಾರ್ಮಿಕರ ವಿರೋಧಿ ಕೇಂದ್ರ ಸರಕಾರವನ್ನು ಕಿತ್ತೊಗೆಯಲು ಈ ಚುನಾವಣೆಯಲ್ಲಿ ಇಂಡಿಯಾ ಪರ ಕೆಲಸಮಾಡಲಿದ್ದೇವೆ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಘೋಷಿಸಿದ್ದ ೫ ಗ್ಯಾರಂಟಿಗಳನ್ನು ಈಡೇರಿಸುವ ಮೂಲಕ ಕಾಂಗ್ರೆಸ್ ಸರಕಾರ ನುಡಿದಂತೆ ನಡೆದಿದೆ. ೧೦ ವರ್ಷದ ಮೋದಿ ಆಳ್ವಿಕೆಯಲ್ಲಿ ರೈತರನ್ನು ದಮನ ಮಾಡಲಾಯಿತು. ದುಡಿಯುವ ವರ್ಗದ ಮೇಲೆ ವ್ಯವಸ್ಥಿತವಾದ ದಬ್ಬಾಳಿಕೆ ನಡೆದಿದೆ. ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಕೆ, ಇವರ ೯ ವರ್ಷದ ಸಾಧನೆ ಎಂದು ಟೀಕಿಸಿದ ಅವರು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸರ್ವಾಧಿಕಾರಿ ಮಾದರಿಯ ಆಡಳಿತವಿದ್ದು ಜನಪರವಾಗಿ ಕೆಲಸ ಮಾಡಿ ಮಾದರಿಯಾಗಿರುವ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನು ಜೈಲಿಗೆ ಅಟ್ಟಿದೆ ಎಂದು ಆರೋಪಿಸಿದರು.

ಸರ್ಕಾರದ ಸೌಲಭ್ಯಗಳಿಂದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರದ್ದು ಧನಿಕ ಕುಟುಂಬ ಹಾಗಿದ್ದರೆ ಅವರ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆಯೇ ಎಂದು ಪ್ರಶ್ನಿಸಿದ ಅವರು ಕೂಡಲೇ ರಾಜ್ಯದ ಮಹಿಳೆಯರ ಬೇಷರತ್ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.

ಸಿಪಿಐ ಮುಖಂಡ ಎಚ್.ಎಂ. ರೇಣುಕಾರಾಧ್ಯ ಮಾತನಾಡಿ, ಪ್ರಜಾಪ್ರಭುತ್ವ ನಾಶಮಾಡಿ ಸರ್ವಾಧಿಕಾರಿ ಆಡಳಿತ ನಡೆಸುವ ಸಂಚು ಬಿಜೆಪಿ ಸರಕಾರದಿಂದ ನಡೆಯುತ್ತಿದೆ. ಪಾಕಿಸ್ತಾನದ ರಾಜಕಾರಣಿಗಳ ಮೈಂಡ್ ಸೆಟ್‌ನಂತೆ ಮೋದಿ ಮನಸ್ಥಿತಿಯೂ ಇದೆ. ಆಡಳಿತ ಪಕ್ಷದಲ್ಲಿ ಭ್ರಷ್ಟರಿಲ್ಲವೇ, ಪ್ರತಿಪಕ್ಷದಲ್ಲಿ ಮಾತ್ರ ಭ್ರಷ್ಟರಿದ್ದಾರೆಯೇ ಎಂದು ಪ್ರಶ್ನಿಸಿದ ಅವರು ಚುನಾವಣಾ ಬಾಂಡ್ ಇತಿಹಾಸದಲ್ಲೇ ದೊಡ್ಡ ಭ್ರಷ್ಟಾಚಾರ ಎಂದು ಆರೋಪಿಸಿದರು.

ಎಎಪಿ ಮುಖಂಡ ಡಾ.ಕೆ ಸುಂದರಗೌಡ ಮಾತನಾಡಿ, ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಬಿಜೆಪಿಯವರು ಪದೇಪದೇ ಹೇಳುತ್ತಿದ್ದಾರೆ ಅಂದರೆ ಅವರಿಗೆ ಪ್ರತಿಪಕ್ಷಗಳೇ ಬೇಡ. ಸರ್ವಾಧಿಕಾರಿ ನಡೆಗೆ ಇದು ಸ್ಪಷ್ಟ ನಿದರ್ಶನ ಎಂದರು.

ಕೆಪಿಸಿಸಿ ವಕ್ತಾರ ರವೀಶ್ ಬಸಪ್ಪ ಮಾತನಾಡಿ, ತುಕಡೆ ಗ್ಯಾಂಗ್‌ಗೆ ಚುನಾವಣೆಯಲ್ಲಿ ಶಿಕ್ಷೆ ಕೊಡಿ ಎಂದಿರುವುದು ಓರ್ವ ಪ್ರಧಾನಿಯ ಕೆಟ್ಟ ಮನಸ್ಥಿತಿ ಎಂದರು. ಸ್ವಾತಂತ್ರ್ಯಾಕ್ಕಾಗಿ ತ್ಯಾಗ ಬಲಿದಾನ ಮಾಡಿರುವ ಪಕ್ಷ ಕಾಂಗ್ರೆಸ್. ಸ್ವಾತಂತ್ರ್ಯಕ್ಕಾಗಿ ಬಿಜೆಪಿಗರ ತ್ಯಾಗವಾದರು ಏನು ಎಂದು ಪ್ರಶ್ನಿಸಿದರು.ಪತ್ರಿಕಾಗೋಷ್ಠಿಯಲ್ಲಿ ವಿಜಯ್‌ಕುಮಾರ್ ಇದ್ದರು.

Congress candidate Jayaprakash Hegde is sure to win