ಚಿಕ್ಕಮಗಳೂರು: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಇದರ ರಾಜೀನಾಮೆಯಿಂದ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆದು ಡಿ.ಸಿ ಶಂಕರಪ್ಪ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪ ವಿಭಾಗಾಧಿಕಾರಿ ಹೆಚ್.ಡಿ ರಾಜೇಶ್ ಘೋಷಿಸಿದರು.
ಇಂದು ಬೆಳಗ್ಗೆ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ೯ ರಿಂದ ೧೧ ಗಂಟೆಯವರೆಗೆ ನಾಮ ಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು ಎಂದು ಚುನಾವಣಾಧಿಕಾರಿ ರಾಜೇಶ್ ತಿಳಿಸಿದರು.

ನಿಯಮಾನುಸಾರ ೩೦ ನಿಮಿಷ ಕಾಲಾವಕಾಶ ನೀಡಿ ನಾಮಪತ್ರ ಪರಿಶೀಲಿಸಿದಾಗ ಕ್ರಮಬದ್ದವಾಗಿ ಡಿ.ಸಿ ಶಂಕರಪ್ಪ ಅವರ ನಾಮಪತ್ರ ಸರಿಯಾಗಿ ಇದ್ದಿದ್ದರಿಂದ ಮತ್ತು ಯಾವುದೇ ನಾಮಪತ್ರ ಸಲ್ಲಿಕೆಯಾಗದ ಕಾರಣ ಸಹಕಾರ ಸಂಘಗಳ ನಿಯಮದಂತೆ ಡಿ.ಸಿ ಶಂಕರಪ್ಪ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.

ಇದೇ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷ ಡಿ.ಎಸ್ ಸುರೇಶ್ ಅಭಿನಂದಿಸಿ ಮಾತನಾಡಿ ಬ್ಯಾಂಕಿನ ನಿರ್ದೇಶಕರು ಮತ್ತು ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರ ಸಹಕಾರದೊಂದಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಡಿ.ಸಿ ಶಂಕರಪ್ಪ ಅವರನ್ನು ಅಭಿನಂದಿಸಿ ಶುಭಾಷಯ ಕೋರಿದರು.

ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಶಂಕರಪ್ಪ ಅವರಿಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅವಕಾಶಗಳು ಒದಗಿ ಬರಲಿ ಎಂದು ಹಾರೈಸಿದರು.

ಡಿಸಿಸಿ ಬ್ಯಾಂಕ್ ಜಿಲ್ಲೆಯಾದ್ಯಂತ ೨೮ ಶಾಖೆಗಳು ಹಾಗೂ ೧೨೭ ಪ್ರಾಥಮಿಕ ಸಹಕಾರ ಸಂಘಗಳು ಮತ್ತು ೨೫೧ ಇತರೆ ಸಂಘಗಳ ಮೂಲಕ ಕೃಷಿ ಮತ್ತು ಕೃಷಿ ಏತರ ಸಾಲ ನೀಡುವುದರೊಂದಿಗೆ ತಾರತಮ್ಯವಿಲ್ಲದೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸೌಲಭ್ಯ ಸಿಗುವ ಹಾಗೆ ವಿವಿಧ ಸೇವೆಗಳನ್ನು ನೀಡುತ್ತಿದೆ ಎಂದರು.

ಪ್ರಸಕ್ತ ಸಾಲಿನಲ್ಲಿ ಶೇ ೯೮ ಕ್ಕೂ ಹೆಚ್ಚು ಸಾಲ ವಸೂಲಾತಿಯ ಮೂಲಕ ಬ್ಯಾಂಕ್ ಈಗಾಗಲೇ ೧೮ ಕೋಟಿ ರೂ ಲಾಭ ಗಳಿಸಿದೆ. ಇನ್ನೂ ೪ ಹೊಸ ಶಾಖೆಗಳನ್ನು ಮುಂದಿನ ದಿನಗಳಲ್ಲಿ ಆರಂಭಿಸಲು ಉದ್ದೇಶ ಹೊಂದಲಾಗಿದ್ದು ಈ ಸಂಬಂಧ ರಿಸರ್ವ್ ಬ್ಯಾಂಕಿಗೆ ಅನುಮತಿ ಕೋರಿ ಪತ್ರ ಬರೆಯಲಾಗಿದೆ ಎಂದು ವಿವರಿಸಿದರು.
೨೦೨೨-೨೩ ನೇ ಸಾಲಿನ ಅಂತ್ಯಕ್ಕೆ ರೂ ೬೩.೫೧ ಕೋಟಿ ಷೇರು ಬಂಡವಾಳ ಹೊಂದಿದ್ದು, ೨೦೯೫೨೮ ಠೇವಣಿದಾರರ ಮೂಲಕ ೧೨೭೬.೮೬ ಕೋಟಿ ವಿವಿಧ ರೀತಿಯ ಠೇವಣಿಗಳನ್ನು ಸಂಗ್ರಹಿಸಲಾಗಿದೆ ಎಂದು ಹೇಳಿದರು.

ಬ್ಯಾಂಕ್ ಶೂನ್ಯ ಬಡ್ಡಿದರದಲ್ಲಿ ೫೬೮೧೫ ರೈತರಿಗೆ ೯೮೦ ಕೋಟಿ ರೂ ಕೆಸಿಸಿ ಬೆಳೆ ಸಾಲ ವಿತರಿಸಲು ಗುರಿ ಹೊಂದಿದ್ದು, ಮಾರ್ಚ್ ೨೩ ರ ಅಂತ್ಯಕ್ಕೆ ೫೭೫೫೧ ರೈತರಿಗೆ ೮೯೮.೫೩ ಕೋಟಿ ಬೆಳೆಸಾಲ ವಿತರಣೆ ಮಾಡಲಾಗಿದೆ. ಈ ಮೂಲಕ ರೈತರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, ೨೦೨೩-೨೪ ನೇ ಸಾಲಿಗೆ ಸಾವಿರ ಕೋಟಿ ರೂ ಕೃಷಿಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಶೇ ೩ ರ ಬಡ್ಡಿದರದಲ್ಲಿ ೪೨೮ ರೈತರಿಗೆ ೨೯ ಕೋಟಿ ರೂ ಕೃಷಿ ಮಧ್ಯಮಾವಧಿ ಸಾಲ ವಿತರಣಾ ಗುರಿ ನಿಗಧಿಪಡಿಸಿದ್ದು, ೨೦೨೩ ರ ಮಾರ್ಚ್ ಅಂತ್ಯಕ್ಕೆ ೧೬೯ ರೈತರಿಗೆ ೧೩.೨೧ ಕೋಟಿ ರೂ ಸಾಲ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಡಿ.ಸಿ ಶಂಕರಪ್ಪ ಮಾತನಾಡಿ ಬ್ಯಾಂಕಿನ ಅಧ್ಯಕ್ಷರು, ನಿರ್ದೇಶಕರ ಆಡಳಿತ ಮಂಡಳಿ ವಿಶ್ವಾಸದೊಂದಿಗೆ ನಾನು ಆಯ್ಕೆಯಾಗಿದ್ದು, ಮುಂದಿನ ದಿನಗಳಲ್ಲಿ ರೈತರು ಹಾಗೂ ಕೃಷಿ-ಕೃಷಿಯೇತರ ಚಟುವಟಿಕೆಗೆ ಸಾಲ ವಿತರಿಸಿ ಬ್ಯಾಂಕನ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ನಿರಂಜನ್, ರಾಮಸ್ವಾಮಿ, ಆನಂದಪ್ಪ, ಸಂದೀಪ್, ಸತೀಶ್, ರಮೇಶ್, ಪರಮೇಶ್ವರಪ್ಪ, ರಾಮಜ್ಜ, ಗಿರೀಶ್ ಚೌಹಾಣ್, ಬಸವರಾಜಪ, ಡಿಸಿಸಿ ಬ್ಯಾಂಕ್ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.

DC Shankarappa was elected unopposed as DCC Bank Vice Chairman