ಚಿಕ್ಕಮಗಳೂರು: ಇತಿಹಾಸ ಪ್ರಸಿದ್ದ ಅಯ್ಯನ ಕೆರೆಯಲ್ಲಿ ಜಲವಿಹಾರ ಬೋಟಿಂಗ್ ವ್ಯವಸ್ಥೆ ಮಾಡಿದ್ದು, ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಶಾಸಕ ಹೆಚ್.ಡಿ ತಮ್ಮಯ್ಯ ಕರೆ ನೀಡಿದರು.

ಅವರು ಇಂದು ಸಖರಾಯಪಟ್ಟಣದ ಶಕುನಿ ರಂಗನಾಥಸ್ವಾಮಿ ರಥೋತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿ.ಪಂ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಇವರುಗಳ ಸಂಯುಕ್ತಾಶ್ರಯದಲ್ಲಿ ಅಯ್ಯನಕೆರೆಯಲ್ಲಿ ಏರ್ಪಡಿಸಲಾಗಿದ್ದ ಜಲವಿಹಾರ ಬೋಟಿಂಗ್ ವ್ಯವಸ್ಥೆಗ ಚಾಲನೆ ನೀಡಿ ಮಾತನಾಡಿದರು.

ಇಂದಿನಿಂದ ೫ ದಿನಗಳವರೆಗೆ ಅಯ್ಯನಕೆರೆಯಲ್ಲಿ ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಲಾಗಿರುವ ಬೋಟಿಂಗ್‌ನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು. ಸಾರ್ವಜನಿಕರ ಸುರಕ್ಷತೆ ವಹಿಸಿ ಬೋಟಿಂಗ್ ನಡೆಸಿ, ಕುಡಿಯುವ ನೀರಿಗೂ ಕೆರೆ ನೀರನ್ನು ಬಳಸುವುದರಿಂದ ಕಲುಷಿತಗೊಳಿಸದಂತೆ ವಿನಂತಿಸಿದರು.

ಅಗತ್ಯವಿದ್ದರೆ ಮಾತ್ರ ವಿದ್ಯುತ್ ಚಾಲಿತ ಬೊಟ್‌ಗಳನ್ನು ಬಳಸಿ ಎಂದು ಕಿವಿಮಾತು ಹೇಳಿದ ಅವರು ಕ್ಷೇತ್ರ ವ್ಯಾಪ್ತಿಯ ಸಖರಾಯಪಟ್ಟಣದಲ್ಲಿ ಜ.೨೯ ರಂದು ಹೋಬಳಿ ಮಟ್ಟದ ಜನಸಂಪರ್ಕ ಸಭೆಯನ್ನು ಆಯೋಜನೆ ಮಾಡಿದ್ದು, ಈ ಭಾಗದ ನಾಗರೀಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.

ಸಂಕ್ರಾಂತಿಯ ಶುಭ ದಿನದಂದು ಜನತೆಗೆ ಶುಭಾಷಯ ಕೋರಿದ ತಮ್ಮಯ್ಯ, ದಕ್ಷಿಣಾಯದಿಂದ ಉತ್ತರಾಯಣಕ್ಕೆ ಸೂರ್ಯ ತಮ್ಮ ಪಥ ಬದಲಿಸುತ್ತಿರುವ ಈ ಸಂದರ್ಭದಲ್ಲಿ ಜನತೆಯ ಎಲ್ಲಾ ಆಶೋತ್ತರಗಳು ಈಡೇರಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೀನಾನಾಗರಾಜ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಬಿ.ಗೋಪಾಲಕೃಷ್ಣ, ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿ ಮನೆ ಸತೀಶ್, ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ ಮಂಜೇಗೌಡ, ಸಖರಾಯಪಟ್ಟಣ ಗ್ರಾ.ಪಂ ಅಧ್ಯಕ್ಷೆ ರಾಜಮ್ಮ, ಅಚ್ಚುಕಟ್ಟುದಾರ ಅಣ್ಣಯ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾದ ಮಂಜುಳಾ ಹುಲ್ಲಳ್ಳಿ ಮತ್ತಿತರರು ಉಪಸ್ಥಿತರಿದ್ದರು.

Launch of water boating system arranged at Ayyanakere