ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಸುಮಾರು 90 ಕಿ.ಮೀ. ದೂರದಲ್ಲಿರುವ ಮೇಕೆದಾಟು ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುವ ಒಂದು ಸುಂದರ ನಿಸರ್ಗ ತಾಣ. ಕಾವೇರಿ ಹಾಗೂ ಅರ್ಕಾವತಿ ನದಿಗಳು ಸೇರುವ ಸಂಗಮಸ್ಥಳದಿಂದ ಸುಮಾರು 4 ಕಿ.ಮೀ. ದೂರದಲ್ಲಿದೆ ಮೇಕೆದಾಟು. ಒಂದು ಮೇಕೆಯು ನೆಗೆದು ದಾಟುವಷ್ಟು ಕಿರಿದಾದ ಪ್ರದೇಶದಲ್ಲಿ ಹರಿಯುವ ಕಾವೇರಿ ನದಿಯು ಆಳವಾದ ಕಂದಕಕ್ಕೆ ಧುಮುಕಿ ಹರಿಯುತ್ತದೆ. ಒಂದು ಮೇಕೆಯನ್ನು ಹುಲಿಯೊಂದು ಬೆನ್ನಟ್ಟಿದಾಗ ಅದು ಒಂದು ಬಂಡೆಯಿಂದ ಮತ್ತೊಂದು ಬದಿಯ ಬಂಡೆಗೆ ಹಾರಿ ತನ್ನ ಜೀವ ಉಳಿಸಿದಕೊಂಡಿದ್ದರಿಂದ ಈ ಸ್ಥಳಕ್ಕೆ ಮೇಕೆದಾಟು ಎಂಬ ಹೆಸರು ಬಂತೆಂಬ ಪ್ರತೀತಿಯಿದೆ.

ಇಂತಹ ಮೇಕೆದಾಟು ಈಗ ಸುದ್ದಿಯ ಕೇಂದ್ರವಾಗಿರುವುದಕ್ಕೆ ಕಾರಣ ಕರ್ನಾಟಕ ರಾಜ್ಯ ಸರಕಾರವು ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಮೇಕೆದಾಟು ಅಣೆಕಟ್ಟು ಯೋಜನೆ. ಮೇಕೆದಾಟು ಯೋಜನೆಯ ಉದ್ದೇಶ ವ್ಯರ್ಥವಾಗಿ ಸಮುದ್ರವನ್ನು ಸೇರುತ್ತಿರುವ 66 ಟಿಎಂಸಿ ನೀರನ್ನು ಸಂಗ್ರಹಿಸಲು ಅಣೆಕಟ್ಟನ್ನು ನಿರ್ಮಿಸಿ ಆ ನೀರನ್ನು ದಿನೇ-ದಿನೇ ಹೆಚ್ಚುತ್ತಿರುವ ಬೆಂಗಳೂರು ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳ ಕುಡಿಯುವ ನೀರಿನ ಬೇಡಿಕೆಯನ್ನು ಪೂರೈಸಲು ಬಳಸುವುದು, ಜಲಾನಯನ ಪ್ರದೇಶದ ರೈತರ ಹಕ್ಕನ್ನು ಸಂರಕ್ಷಿಸುವುದು, ಹಾಗೂ 400 ಮೆಗಾವ್ಯಾಟ್‌ ವಿದ್ಯುತ್ತನ್ನು ಉತ್ಪಾದಿಸುವುದು. ಆದರೆ ಇದಕ್ಕೆ ತಮಿಳುನಾಡು ತನ್ನ ಅಡ್ಡಗಾಲನ್ನು ಹಾಕುತ್ತಿದ್ದು ಇದೊಂದು ವಿವಾದವಾಗಿ ಪರಣಮಿಸಲು ಕಾರಣವಾಗಿದೆ.

ಸುಮಾರು 1952ರಲ್ಲೇ ಚಿಗುರೊಡೆದಿದ್ದ ಈ ಪ್ರಸ್ತಾಪವನ್ನು ಸರಕಾರ ಕೆಲ ಕಾರಣಗಳಿಂದ ಕೈಬಿಟ್ಟಿತ್ತು. ಕಾವೇರಿ ವಿವಾದ ಸರ್ವೋಚ್ಚ ನ್ಯಾಯಾಲಯದಲ್ಲಿ ಇತ್ಯರ್ಥವಾಗಿ ಯಾವ-ಯಾವ ರಾಜ್ಯಕ್ಕೆ ಎಷ್ಟೆಷ್ಟು ನೀರು ಸಿಗಬೇಕೆಂದು ನಿರ್ಧರಿಸಿದ ನಂತರ ಕರ್ನಾಟಕ ಯೋಜನೆಯನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿತು.  ಇದಕ್ಕೆ ವಿರೋಧ ವ್ಯಕ್ತಪಡಿಸಿವ ಮಿಳುನಾಡಿನ ವಾದವೇನೆಂದರೆ ಕಾವೇರಿ ನ್ಯಾಯಾಧಿಕರಣದ ನೀರು ಹಂಚಿಕೆಯ ವಿಚಾರಣೆಯ ಸಮಯದಲ್ಲಿ ಮೇಕೆದಾಟು ವಿಚಾರ ಪ್ರಸ್ತಾಪವಾಗಿಲ್ಲ. ಈಗ ಕರ್ನಾಟಕ ಯೋಜನೆಗೆ ಮುಂದಾದರೆ ಅದು ತಮಿಳುನಾಟಿನ ರೈತರಿಗೆ ತೊಂದರೆಯಾಗುವುದರಿಂದ ಇದಕ್ಕೆ ತನ್ನ ಒಪ್ಪಿಗೆಯಿಲ್ಲ ಎನ್ನುವುದು ತಮಿಳುನಾಡಿನ ವಾದ.

ಇದಕ್ಕೆ ಕರ್ನಾಟಕದ ಪ್ರತ್ಯುತ್ತರವೆಂದರೆ ಪ್ರತಿವರ್ಷ ತಮಿಳುನಾಡಿಗೆ ಬಿಡಬೇಕಾದ 177.25 ಟಿಎಂಸಿ ನೀರನ್ನು ಬಿಡುವುದು ನಮ್ಮ ಹೊಣೆ, ಅಷ್ಟು ಪ್ರಮಾಣದ ನೀರನ್ನು ಬಿಡದಿದ್ದರೆ ಪ್ರಶ್ನಿಸಬಹುದು. ಭಾರೀ ಮಳೆಯ ಕಾರಣ 2018ರಲ್ಲಿ 310 ಟಿಎಂಸಿಗಿಂತಲೂ ಹೆಚ್ಚು ನೀರು ಹರಿದಿದೆ. ಮೆಟ್ಟೂರು ಜಲಾಶಯದಲ್ಲಿ ಅಧಿಕ ನೀರನ್ನು ಸಂಗ್ರಹಿಸಲು ಸಾಧ್ಯವಿಲ್ಲದ್ದರಿಂದ 100 ಟಿಎಂಸಿಗೂ ಅಧಿಕ ನೀರು ಸಮುದ್ರಕ್ಕೆ ಹರಿದುಹೋಗಿ ವ್ಯರ್ಥವಾಗಿದೆ. ಹೀಗಾಗಿ, ಮೇಕೆದಾಟುವಿನಲ್ಲಿ ಅಣೆಕಟ್ಟು ಇದ್ದರೆ ಲೆಕ್ಕಾಚಾರದ ಪ್ರಕಾರ ನೀರನ್ನು ಬಿಡಲು ಸಾಧ್ಯವಾಗುವುದಲ್ಲದೇ ಕನಿಷ್ಟ 60 ಟಿಎಂಸಿ ನೀರನ್ನು ಸಂಗ್ರಹಿಸಬಹುದು. ಇದರಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಗೂ ರಾಮನಗರ ಜಿಲ್ಲೆಯ ಹೆಚ್ಚುತ್ತಿರುವ ನೀರಿನ ಬೇಡಿಕೆಯನ್ನೂ ಪೂರೈಸಬಹುದು ಹಾಗೂ ವಿದ್ಯುತ್ ಉತ್ಪಾದನೆಯನ್ನೂ ಮಾಡಬಹುದು. ನೀರಿನ ಹಂಚಿಕೆಯ ವಿಚಾರದಲ್ಲಿ ಕುಡಿಯುವ ನೀರಿನ ಯೋಜನೆಗೆ ಮೊದಲ ಆದ್ಯತೆ ಇರಬೇಕೆಂದು ಅಂತರರಾಷ್ಟ್ರೀಯ ಜಲನೀತಿಯೂ ಹೇಳುತ್ತದೆ. ಹೀಗಾಗಿ ನಾವು ಕೈಗೆತ್ತಿಕೊಂಡಿರುವ ಮೇಕೆದಾಟು ಯೋಜನೆ ನ್ಯಾಯಸಮ್ಮತವಾಗಿದೆ ಎನ್ನುವುದು ಕರ್ನಾಟಕದ ವಾದವಾಗಿದೆ.

ಇದೀಗ ಈ ವಿಷಯವನ್ನು ಕರ್ನಾಟಕದ ವಿರೋಧ ಪಕ್ಷವಾದ ಕಾಂಗ್ರೆಸ್‌ ಕೈಗೆತ್ತಿಕೊಂಡಿದ್ದು ಯೋಜನೆಗಿರುವ ಅಡೆ-ತಡೆಗಳನ್ನು ನಿವಾರಿಸುವಂತೆ ಆಗ್ರಹಿಸಲು ಜನವರಿ 9, 2022ರಿಂದ ಜನವರಿ 19, 2022ರವರೆಗೆ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ. ಕೇಂದ್ರ ಸರಕಾರದ ಪರಿಸರ ಸಚಿವಾಲಯದ ಅನುಮತಿಯಷ್ಟೇ ಬಾಕಿಯಿರುವ ಈ ಯೋಜನೆಯ ಶೀಘ್ರ ಪ್ರಾರಂಭಕ್ಕೆ ಒತ್ತಾಯಿಸಿ ಪ್ರದೇಶ ಕಾಂಗ್ರೆಸ್ ಆಧ್ಯಕ್ಷ ಡಿಕೆ ಶಿವಕುಮಾರ್‌ ಹಾಗೂ ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ. ಎರಡೂ ರಾಜ್ಯಗಳ ರೈತರ ಅನುಕೂಲಕ್ಕಾಗಿ ಹಾಗೂ ಕುಡಿಯುವ ನೀರಿನ ಬವಣೆಯನ್ನು ನೀಗುವುದೇ ಈ ಕಾರ್ಯದ ಹಿಂದಿರುವ ಉದ್ದೇಶ ಎಂದು ಕಾಂಗ್ರೆಸ್‌ ಹೇಳಿದೆ.

KPCC plans padayatra to oppose delay in executing mekedatu dam construction

ಇದನ್ನೂ ಓದಿ: ಮೇಲ್ಮನೆಯಲ್ಲಿಯೂ ಮತಾಂತರ ನಿಷೇಧ ಕಾಯ್ದೆಗೆ ವಿರೋಧ ಮಾಡುತ್ತೇವೆ: ಹೆಚ್.ಡಿ.ಕುಮಾರಸ್ವಾಮಿ

ಇದನ್ನೂ ಓದಿ: New Year 2022: ಹೊಸವರ್ಷ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ, ಯಾವ ವಿಷಯಗಳಲ್ಲಿ ಎಚ್ಚರಿಕೆ ಆವಶ್ಯಕ ಎಂದು ತಿಳಿಯುವ ಕುತೂಹಲವೇ?