ಬೆಂಗಳೂರು: ಹಾಸನ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಈ ಕುರಿತಂತೆ ಬೆದರಿಕೆ ಹಾಕುವವರಿಗೆ ತಲೆ ಬಾಗುವುದಿಲ್ಲ ಎಂದು ಪರೋಕ್ಷವಾಗಿ ತಮ್ಮ ಸಹೋದರ ಎಚ್‌.ಡಿ.ರೇವಣ್ಣ ಕುಟುಂಬಕ್ಕೆ ಟಾಂಗ್‌ ನೀಡಿದ್ದಾರೆ.

ಮಂಗಳವಾರ ನಗರದಲ್ಲಿ ಹಾಸನ ಕ್ಷೇತ್ರದ ಪ್ರಬಲ ಆಕಾಂಕ್ಷಿ ಸ್ವರೂಪ್‌ ಅವರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ ಬಳಿಕ ಕುಮಾರಸ್ವಾಮಿ(HD Kumaraswamy) ಸುದ್ದಿಗಾರರೊಂದಿಗೆ ಮಾತನಾಡಿದರು. ಕೆಲವು ರಾಜಕೀಯ ಬೆಳವಣಿಗೆ ಕುರಿತು ಮಾಹಿತಿ ನೀಡಲು ಸ್ವರೂಪ್‌ ಬಂದಿದ್ದರು. ಹಾಸನದಲ್ಲಿ ಎಲ್ಲಾ ನಾಯಕರ ಭಾವಚಿತ್ರಗಳನ್ನು ಹಾಕಿರುವ ವಿಚಾರವು ಮಾಧ್ಯಮಗಳ ಮೂಲಕ ಗೊತ್ತಾಗಿದೆ. ರೇವಣ್ಣ (HD Revanna)ಅವರು ಸಹ ಇದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಕಳೆದು ಒಂದು ವರ್ಷದಿಂದ ಏನು ಹೇಳಿದ್ದೇನೆಯೋ ಈಗಲೂ ಅದೇ ನನ್ನ ನಿಲುವು. ಬೆದರಿಕೆ ಹಾಕುವವರಿಗೆಲ್ಲ ತಲೆ ಬಾಗುವುದಿಲ್ಲ. ನನಗೆ ಪಕ್ಷ ಮುಖ್ಯ ಎಂದು ಸ್ಪಷ್ಟಪಡಿಸಿದರು.

ಚುನಾವಣೆ(Karnataka assembly election)ಯಲ್ಲಿ 123 ಸ್ಥಾನ ಗೆಲ್ಲಬೇಕು, ಅದೇ ನಮ್ಮ ಗುರಿ. ಜನ ಮತ್ತು ಕಾರ್ಯಕರ್ತರಿಗೆ ವಿಶ್ವಾಸ ಮೂಡಿಸಬೇಕಾಗಿದೆ. ಇದರಲ್ಲಿ ಯಾವುದೇ ರಾಜಿಗೊಳಗಾಗುವ ಪ್ರಶ್ನೆಯೇ ಇಲ್ಲ. ಬೆದರಿಕೆ ತಂತ್ರವನ್ನು ಯಾರ ಬಳಿಯಾದರೂ ನಡೆಸಿಕೊಳ್ಳಲಿ, ನನ್ನ ಹತ್ತಿರ ನಡೆಸಲು ಬಂದರೆ ನಾನು ಬಗ್ಗುವುದಿಲ್ಲ. ಬ್ಲಾಕ್‌ಮೇಲ್‌ ಮಾಡುವವರು ಯಾರು ಎಂಬುದನ್ನು ಶೀಘ್ರದಲ್ಲಿಯೇ ಹೇಳುತ್ತೇನೆ ಎಂದರು.

ಭೋಜನ ವಿರಾಮದ ವೇಳೆ ಕುಮಾರಸ್ವಾಮಿ ಅವರನ್ನು ಸ್ವರೂಪ್‌ ಭೇಟಿಯಾದರು. ಈ ಸಂದರ್ಭದಲ್ಲಿ ತಮ್ಮ ಕ್ಯಾರವಾನ್‌ ಒಳಗೆ ಸ್ವರೂಪ್‌ ಅವರನ್ನು ಕರೆದುಕೊಂಡು ಹೋದ ಕುಮಾರಸ್ವಾಮಿ ಹಾಸನ ರಾಜಕೀಯ ವಿದ್ಯಮಾನಗಳ ಕುರಿತು ಗುಪ್ತವಾಗಿ ಸಮಾಲೋಚನೆ ನಡೆಸಿದರು.

ಹಾಸನ(Hassan assembly constituency)ದಲ್ಲಿ ಇತ್ತೀಚೆಗೆ ಜೆಡಿಎಸ್‌ ಅಭ್ಯರ್ಥಿಗಳ ಪೋಸ್ಟರ್‌ನಲ್ಲಿ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಪತ್ನಿ ಭವಾನಿ(Bhavani revanna) ಭಾವಚಿತ್ರ ಕಾಣುತ್ತಿದೆ. ಎರಡನೇ ಪಟ್ಟಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಇದರ ನಡುವೆಯೇ ಭವಾನಿ ಭಾವಚಿತ್ರ ಕಾಣುತ್ತಿರುವುದು ಕ್ಷೇತ್ರದ ಕಾರ್ಯಕರ್ತರಲ್ಲಿಯೇ ಗೊಂದಲವನ್ನುಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಸ್ವರೂಪ್‌, ಕ್ಷೇತ್ರದಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತು ಮಾಹಿತಿ ನೀಡಿದರು ಎನ್ನಲಾಗಿದೆ.

ಹಾಸನ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಸ್ವರೂಪ್‌ ಮಾತನಾಡಿ, ನಾನು ಕುಮಾರಸ್ವಾಮಿ ಮತ್ತು ರೇವಣ್ಣ ಇಬ್ಬರನ್ನೂ ಭೇಟಿ ಮಾಡಿದ್ದೇನೆ. ಭವಾನಿ ರೇವಣ್ಣ ಮಾತ್ರವಲ್ಲ, ಯಾರಿಗೆ ಟಿಕೆಟ್‌ ನೀಡಿದರೂ ಜೆಡಿಎಸ್‌ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇವೆ. ನನಗೆ ಟಿಕೆಟ್‌ ಸಿಗಲಿದೆ ಎಂಬ ಕಾರಣಕ್ಕಾಗಿ ಹೇಳುತ್ತಿಲ್ಲ. ಪಕ್ಷದ ವರಿಷ್ಠರು ಯಾರಿಗೆ ಟಿಕಟ್‌ ನೀಡಿದರೂ ಯಾವುದೇ ಅಭ್ಯಂತರ ಇಲ್ಲ ಎಂದು ಹೇಳಿದರು.

My stand on Hassan’s ticket has not changed: