‘ಅಣ್ಣನ ನೆನಪು’ ಪೂರ್ಣಚಂದ್ರ ತೇಜಸ್ವಿಯವರ ಸಂಶ್ಲೇಷಣಾ ಮನೋಲಹರಿಯಲ್ಲಿ ಮೂಡಿ ಬಂದಿರುವ ಅಪೂರ್ವ ಕೃತಿ. ಶ್ರೀ ಕುವೆಂಪು ತೇಜಸ್ವಿ ಆಗಮನದ ಸಿದ್ಧತೆಯನ್ನೂ, ಆಗಮನದ ನಂತರ ತಾವು ಪಟ್ಟ ಆನಂದದ ಅನುಭೂತಿಗಳನ್ನೂ, ಕ್ಷಣ ಕಾಲ ಕಣ್ಮರೆಯಾದರೂ ಅನುಭವಿಸುತ್ತಿದ್ದ ತಲ್ಲಣ ತಳಮಳಗಳನ್ನೂ ತಮ್ಮದೇ ಆದ ಭಾವಲಹರಿಯಲ್ಲಿ ಕವನಗಳ ಮೂಲಕ ಅತ್ಯಂತ ಸಹಜರೀತಿಯಲ್ಲಿ ಲೋಕ ಮುಖವಾಗಿಸಿದರು. ಆದರೆ, ಪೂರ್ಣಚಂದ್ರ ತೇಜಸ್ವಿ ಅವರಿಗೆ ಅಣ್ಣನ ಬಗೆಗೆ ಬರೆಯುವ ಪ್ರೇರಣೆ ಬಂದಾಗ ಒಂದಷ್ಟು ಗೊಂದಲ, ಮತ್ತೊಂದಷ್ಟು ಮುಜುಗರ. ಮಗು ಕಣ್ಣು ಬಿಟ್ಟು ನೋಡಿದ್ದೇ ಅಪ್ಪ, ಅಮ್ಮನನ್ನು, ಅವರು ಇವರಿಗೆ ಕವಿಯೂ ಅಲ್ಲ, ದಾರ್ಶನಿಕರೂ ಅಲ್ಲ. ಆದರೆ, ಅವರೇ ಎಲ್ಲ! ಗಾಳಿ, ಬೆಳಕು, ಮಳೆ, ಬಿಸಿಲುಗಳ ಲೋಕವೆಲ್ಲಾ ನಂತರದಲ್ಲಿ, ಅಮ್ಮ ಅಣ್ಣರ ವಿಸ್ತರಣೆಯಾಗಿ ಅವರಿಗೆ ಬಂದದ್ದನ್ನೂ ಅನುಭಾವಿಸಿದ ತೇಜಸ್ವೀ ಮನಕ್ಕೆ ಅಣ್ಣ, ಅಮ್ಮನ ನೆನಪುಗಳೆಂದರೆ ಖಾಸಗಿತನದವು. ಅವನ್ನು ಸಾರ್ವಜನಿಕವಾಗಿ ಹೇಳುವುದು ಹೇಗೆಂಬ ಜಿಜ್ಞಾಸೆ. ಆದರೆ, ತೇಜಸ್ವಿ ಭಾವದೊಳಗಿನ ಬರೆಹಗಾರನೇ ಗೆದ್ದ ಮೇಲೆ ಅಣ್ಣ, ಅಮ್ಮರ ನೆನಪುಗಳನ್ನು ಬೊಗಸೆ ಬೊಗಸೆಯಲ್ಲಿ ಮೊಗೆ ಮೊಗೆದು ತುಂಬಿ ಕೊಡಲು ಸಾಧ್ಯವಾಯಿತು.

ಕುವೆಂಪು ನಮ್ಮ ಕಾಲದ ಅತಿ ಸಂಕೀರ್ಣ ವ್ಯಕ್ತಿತ್ವದ ಪ್ರತಿಭೆ ಎಂಬುದು ತೇಜಸ್ವೀ ಗಮನಕ್ಕೆಬಂದಿದೆ. ಆದರೆ ಆ ವ್ಯಕ್ತಿತ್ವವನ್ನು ಜತನವಾಗಿ ಎಳೆ ಬಿಡಿಸುವಲ್ಲಿ ತೇಜಸ್ವೀ ಪ್ರತಿಭೆ ಗೋಚರವಾಗುತ್ತದೆ, ಕುವೆಂಪು ಅವರನ್ನು ಕೇವಲ ಕವಿ ಎಂದೋ, ಕಾದಂಬರಿಕಾರರೆಂದೋ, ತತ್ವ ಮೀಮಾಂಸಕರರೆಂದೋ, ವಿಚಾರವಾದಿಯೆಂದೋ, ಮಹಾಕವಿ ಎಂದೋ ಪರಿಗಣಿಸಿದಾಗ ಅಥವಾ ಬಿಡಿ ಬಿಡಿಯಾಗಿ ಅವರ ಕಥೆ ಕಾವ್ಯಗಳನ್ನು ಅವಲೋಕಿಸಿದಾಗ ಸ್ಪಷ್ಟವಾಗಿ ಸರಳವಾಗಿ ಕಾಣುವ ಕುವೆಂಪು ವ್ಯಕ್ತಿತ್ವ ಒಟ್ಟಂದದಲ್ಲಿ ನೋಡಿದ ಕೂಡಲೇ ಅತ್ಯಂತ ಸಂಕೀರ್ಣವಾಗುವ ಜಟಿಲತೆಯನ್ನು ತೇಜಸ್ವಿ ಅತ್ಯಂತ ಸ್ಪಷ್ಟವಾಗಿ ಗುರುತಿಸಿದ್ದಾರೆ.

ಇದಕ್ಕೆ ತೇಜಸ್ವೀ ನೀಡುವ ಒಂದು ಉದಾಹರಣೆ, ಹಲಸಿನ ಹಣ್ಣಿನದು. ಹಲಸಿನ ಹಣ್ಣಿನ ರುಚಿ ಸವಿದವರಿಗೆ ಅದನ್ನು ದೂರದಿಂದ ನೋಡಿದರೂ ಹಣ್ಣಿನ ರುಚಿಸ್ವಾದಗಳು ಮನದಲ್ಲಿ ಮೂಡಿ ಬರುತ್ತದೆ. ಆದರೆ ಹಲಸಿನ ಹಣ್ಣೆಂದರೆ ರಸಭರಿತ ತೊಳೆಗಳು ಮಾತ್ರವೇನಾ? ಮುಳ್ಳು ಮುಳ್ಳಾದ ಸಿಪ್ಪೆ, ಅಂಟು ಅಂಟಾದ ನಾರು, ಗಟ್ಟಿಯಾದ ಬೀಜ ಎಲ್ಲ ಎಲ್ಲವೂ ಸೇರಿದರೆ ಮಾತ್ರ ಹಲಸಿನ ಹಣ್ಣಾಗುವಂತೆ ಒಬ್ಬ ಕವಿಯ ಸಮಗ್ರ ಭಾವಾನುಭಾವಗಳಿಂದ ಆ ವ್ಯಕ್ತಿತ್ವವನ್ನು ದರ್ಶಿಸಬೇಕೇ ಹೊರತು, ಬಿಡಿ ಬಿಡಿಯಾಗಿ ಹಿಂಜಿಟ್ಟುಕೊಳ್ಳವುದರಿಂದಲ್ಲ. ಈ ಪರಿಪೂರ್ಣ ಭಾವದ ತೇಜಸ್ವಿ ಲಹರಿಯ ಕೆಲ ನೋಟಗಳು ಇಲ್ಲಿವೆ. ‘ಮನುಜ ಜಾತಿ ತಾನೊಂದೇ ವಲಂ’ ಎಂದ ಪಂಪ ಮಹಾಕವಿ ಹೃದಯ ಸ್ಪಂದನ ಒಂದು ಸಾವಿರ ವರ್ಷಗಳ ತರುವಾಯ ಕಕುವೆಂಪು ಹೃದಯದಲ್ಲಿ ಅನುಕರಣಿಸಿದುದನ್ನು ಗಮನಿಸುವ ತೇಜಸ್ವಿ ಹೇಳುವುದು: ‘ಸಾಹಿತ್ಯ ಪರಂಪರೆಯ ಅಸಾಧಾರಣ ಶಕ್ತಿಯ ಬಗೆಗೆ ಅಚ್ಚರಿಯಾಗುತ್ತದೆ. ಮಹಾಬಲಿಷ್ಟವಾಗಿ ಕಾಣುವ ಕೋಟೆ ಕೊತ್ತಲಗಳೂ, ಸ್ತೂಪ ಸೌಧಗಳೂ ಕಾಲನ ಹೊಡೆತಕ್ಕೆ ಸಿಕ್ಕಿ ನಿರ್ನಾಮವಾಗುತ್ತವೆ! ಅತ್ಯಂತ ದುರ್ಬಲವಾಗಿ ಕಾಣುವ ಪದಪುಂಜಗಳು ಹಿಂದೆ ಬದುಕಿದ್ದ ಕವಿಯೋರ್ವನ ಕ್ಷಣಿಕ ಭಾವಸ್ಪಂದನವನ್ನು ಅಜರಾಮರವಾಗಿ ಉಳಿಸುತ್ತವೆ!’

‘ಕುವೆಂಪು ಫೋಟೋಗ್ರಾಫರಿಗೆ ಹೇಳಿ ಮಾಡಿಸಿದಂಥ ಮಾಡೆಲಿನ ಹಾಗಿದ್ದರು’ ಎಂದು ಸ್ಮರಿಸುವ ತೆಜಸ್ವಿ ತಾವು ಅವರ ಫೋಟೋಗಳನ್ನು ಸರಿಯಾಗಿ ತೆಗೆಲಾರದುದರ ಬಗೆಗ ವಿಷಾದವಾಗುತ್ತಾರೆ. ಏಕೆಂದರೆ, ಅವರ ಕೈಗೆ ಕ್ಯಾಮರ ಬರುವ ವೇಳೆಗೆ ಕುವೆಂಪು ಅವರಿಗೆ ಸಾಕಷ್ಟು ವಯಸ್ಸಾಗಿತ್ತು. ಅಲ್ಲದೇ ಫೋಟೋಗ್ರಫಿ ಆಗ ತುಂಬಾ ದುಬಾರಿ ಹಾಬಿ. ತಾವು ಬಡತನದಲ್ಲಿ ಬದುಕದಿದ್ದರೂ ಒಟ್ಟಾರೆಯಾಗಿ ಜನರ ಜೀವನ ಮಟ್ಟವೇ ತುಂಬಾ ಕೆಳಗಿದ್ದುದರಿಂದ ತಮ್ಮ ಫೋಟೋಗ್ರಫಿಗೂ ಸಾಕಷ್ಟು ದುಡ್ಡು ಸಿಗುತ್ತಿರಲಿಲ್ಲವೆನ್ನುತ್ತಾ ‘ನಾನು ಕೊಂಡ ಮೊಟ್ಟಮೊದಲ ಕ್ಯಾಮರ ಹದಿನೆಂಟು ರೂಪಾಯಿಯ ಕೊಡಾಕ್ ಬೇಬಿ ಬ್ರೌನಿ. ಯಾವ್ಯಾವುದಕ್ಕೋ ಕೇಳಿ ತಗೊಂಡ ದುಡ್ಡಿನಿಂದೆಲ್ಲಾ ಫಿಲಂ ತಂದು ಫೋಟೋ ತೆಗೆಯುತ್ತಿದ್ದೆ. ಅವುಗಳಲ್ಲಿ ಅಣ್ಣನ ಫೊಟೋಗಳೂ ಇದ್ದುವು. ಅವುಗಳ ಅಮೂಲ್ಯತೆಯ ಅರಿವಿದ್ದಿದ್ದರೆ ಸಾಕಷ್ಟು ಜೋಪಾನ ಮಾಡುತ್ತಿದ್ದೆನೋ ಏನೋ! ನೆಗೆಟಿವ್‌ಗಳನ್ನೂ, ಫೊಟೋಗಳನ್ನೂ ಸರಿಯಾಗಿ ಇಡದೆ ಅವುಗಳಲ್ಲಿ ಅರ್ಧದಷ್ಟು ಹಾಳಾಗಿ ಹೋಗಿವೆ’ ಎಂದು ತಮ್ಮ ಫೋಟೋಗ್ರಫಿಯ ಹಿನ್ನೆಲೆಯಲ್ಲೂ ತಮ್ಮ ಅಣ್ಣನ ಕವಿ ಸ್ವರೂಪವನ್ನು ತೆರೆದಿಟ್ಟಿದ್ದಾರೆ.

ತೇಜಸ್ವಿಯ ಪುಟ್ಟ ಬಾಲ್ಯ ಹೇಗಿತ್ತೆಂಬುದನ್ನು ಕುವೆಂಪು ಕವಿತೆಗಳು ವರ್ಣಿಸಿದರೆ, ತೇಜಸ್ವಿಯ ‘ಅಣ್ಣನ ನೆನಪು’ಗಳು ಆ ಪುಟ್ಟ ಹುಡುಗ ಶಾಲೆಗೆ ಹೋಗುವ ಮೊದಲ ದಿನದಿಂದ ತೆರೆದುಕೊಳ್ಳುತ್ತವೆ. ಒಂದು ದಿನ ಬೆಳಿಗ್ಗೆ ಹೇಮಾವತಿ ತಾಯಿಯವರು ಸ್ನಾನದ್ವೇಷಿಗಳಾಗಿದ್ದ ಮಕ್ಕಳು ತೇಜಸ್ವಿ, ಚೈತ್ರರಿಗೆ ಸ್ನಾನ ಮಾಡಿಸಿ, ಒಗೆದ ಬಟ್ಟೆ ಹಾಕಿ, ಕೊಳೆಯಾಗಿದ್ದ ಕೈಕಾಲುಗಳನ್ನೆಲ್ಲಾ ತೊಳೆದು ರಿಪೇರಿ ಮಾಡಿದಾಗ ಮಕ್ಕಳಿಗೆ ‘ಇವತ್ತು ಸ್ಕೂಲಿಗೆ ಸೇರಿಸುತ್ತಾರೆ’ ಎಂದು ಗೊತ್ತಾಯಿತು. ಸ್ಕೂಲಿಗೆ ಹೋಗಲು ಸುತರಾಂ ಇಷ್ಟವಿಲ್ಲದೆ ಮಕ್ಕಳು ಅಸಹನೆಯಿಂದ ತಂದೆಯ ಕೈಗಳನ್ನು ಹಿಡಿದುಕೊಂಡು ಒಂಟಿಕೊಪ್ಪಲ್ ಶಾಲೆಯವರೆಗೆ ನಡೆಯುತ್ತಾ ಹೋದರು. ಆಗ ದಾರಿಯುದ್ದಕ್ಕೂ ತಂದೆ ಹೇಳಿದ ಬುದ್ದಿಮಾತುಗಳಲ್ಲಿ ತೇಜಸ್ವಿ ನೆನಪು ಉಳಿಸಿಕೊಂಡ ಸಾಲು, ‘ ನೀವು ಓದಿ, ಬರೆಯಲು ಕಲಿತು ನಿಮ್ಮ ಕಾಲ ಮೇಲೆ ನೀವು ನಿಲ್ಲಬೇಕು. ನಾನು, ನಿಮ್ಮ ಅಮ್ಮ ಎಲ್ಲಿ ಯಾವಾಗಲೂ ನಿಮ್ಮ ಜೊತೆ ಇರುತ್ತೇವೆ? ಲೋಕ ಹೀಗೆ ಇರುತ್ತೆ ಎಂದು ನೀವು ತಿಳಿಯಬಾರದು….’

ಆದರೇನು? ತಂದೆ ಇವರನ್ನು ಶಾಲೆಗೆ ಬಿಟ್ಟು ಮನೆ ಸೇರುವುದರೊಳಗಾಗಿ ಈ ಮಕ್ಕಳು ಶಾಲೆಯಿಂದ ಪರಾರಿಯಾಗಿ ಮನೆ ತಲುಪಿದ್ದರು! ನಂತರ ಆ ಶಾಲೆಗೆ ಹೋಗದಿದ್ದರೂ ಮನೆಯಲ್ಲೇ ಬೆತ್ತ ಹಿಡಿದು ಕುಳಿತ ಅಮ್ಮನಿಂದ ಅ,ಆ,ಇ,ಈ ತಿದ್ದುವುದನ್ನು ಕಲಿಯಬೇಕಾಯಿತು. ಆನಂತರ ಮನೆಯ ಬಳಿ ಆರಂಭವಾದ ಶ್ರೀಮತಿ ಸುನಂದಮ್ಮ ಅವರು ತೆರೆದ ಶಾಲೆ ಈ ಮಕ್ಕಳನ್ನು ತನ್ನೆಡೆಗೆ ಬರಮಾಡಿಕೊಂಡಿತ್ತು! ತೇಜಸ್ವಿ ಮಿಡಲ್ ಸ್ಕೂಲ್ ನಾಲ್ಕನೇ ಕ್ಲಾಸಿಗೆ ಬರುವ ಹೊತ್ತಿಗೆ ಕನ್ನಡ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಕಾಯಿಲೆ ಅನ್ನುವಷ್ಟು ಬಲವಾಗಿ ರೂಢಿಸಿಕೊಂಡಿದ್ದರು. ಹೇಗೂ ಮನೆಯಲ್ಲೇ ರಾಶಿ ರಾಶಿ ಪುಸ್ತಕಗಳಿದ್ದವು. ಇಹಪರದ ಪರಿವೆಯೇ ಇಲ್ಲದೇ ಓದುತ್ತಾ ಕುಳಿತಿರುತ್ತಿದ್ದ ಹುಡುಗನನ್ನು ಅಮ್ಮ ಹುಡುಕಿ ಎಬ್ಬಿಸಿ ಊಟ ಮಾಡಿಸಬೇಕಿತ್ತು. ಆಗ ಸಿಕ್ಕಿದ ‘ಕಾನೂರು ಹೆಗ್ಗಡತಿ’ ಭಾಗಗಳನ್ನು ಬರೆದವರಾರು ಎಂದೂ ತಿಳಿಯದೇ ಓದು ಓದುತ್ತಾ ಒಂದು ಆತ್ಮೀಯ ಪರಿಚಿತ ಲೋಕ ಹೊಕ್ಕ ಪರಿಯೇ ವಿಶೀಷ್ಟ! ಕಾನೂರು ಹೆಗ್ಗಡತಿ ಓದಿದ ಮೇಲೆ ‘ಕುಪ್ಪಳಿ ಕಥೆ ಹೇಳಿ’ ಎಂದು ಅಪ್ಪನನ್ನು ಪೀಡಿಸುವ, ಕುಪ್ಪಳ್ಳಿಯಲ್ಲಿ ಸಾಕಿದ್ದ ಧೀರ ಗಾಂಭೀರ್ಯ ತುಂಬಿದ್ದ ಶಿಕಾರಿನಾಯಿಗಳ ವಿಷಯ ಕೇಳುತ್ತಿದ್ದ ಹಾಗೆಯೇ ‘ನಾವೂ ನಾಯಿ ಸಾಕೋಣ’ ಎಂದು ಹಟ ಹಿಡಿಯುವ ತೇಜಸ್ವಿ ತುಂಟತನ ಅದೆಷ್ಟು ಆಪ್ತವೆನಿಸುತ್ತವೆ!

ಮನೆಯಲ್ಲಿ ಅಣ್ಣನೇ ದೇವರ ಪೂಜೆ ಮಾಡುತ್ತಿದ್ದುದನ್ನು ವರ್ಣಿಸುತ್ತಾ ತೇಜಸ್ವಿ ಹೇಳುವುದು, ‘ಅಣ್ಣ ಒಂದು ಕೈಯಲ್ಲಿ ಗಂಟೆಯನ್ನೂ ಒಂದು ಕೈಯಲ್ಲಿ ದೀಪ ಹಚ್ಚಿದ ಆರತಿಯನ್ನೂ ಹಿಡಿದುಕೊಂಡು ಆರತಿಯನ್ನು ಅಲ್ಲಾಡಿಸದೇ ಬರೇ ಗಂಟೆಯನ್ನು ಅಲ್ಲಾಡಿಸುತ್ತಾ ಮಂಗಳಾರತಿ ಎತ್ತುವುದು ನಮಗೆ ದೊಡ್ಡ ಕೈಚಳಕದಂತೆ ಕಾಣುತ್ತಿತ್ತು. ನಾನು ಚಿಕ್ಕವನಿದ್ದಾಗ ಮಂಗಳಾರತಿ ಪ್ರಸಾದಗಳಿಗಾಗಿ ಪೂಜೆ ಮುಗಿಯುವವರೆಗೆ ಕುಳಿತಿರುತ್ತಿದೆ. ಆಮೇಲೆ ನಿಧಾನವಾಗಿ ಅಣ್ಣನ ವೈಚಾರಿಕತೆಯ ಪರಿಚಯವಾದ ನಂತರ ಅಣ್ಣನ ಪೂಜೆ, ಧ್ಯಾನ, ಭಕ್ತಿ ಇತ್ಯಾದಿಗಳನ್ನಲ್ಲಾ ಪರ್ಯಾಲೋಚಿಸಿ ಹಾಗಿದ್ದರೆ ಅಣ್ಣನ ನಿಲುವೇನು? ಎಂದು ಚಿಕ್ಕವನಿರುವಾಗಲೇ ಅಸ್ಪಷ್ಟವಾಗಿ ಚಿಂತಿಸುತ್ತಿದ್ದೆ. ಅಣ್ಣನ ಈ ವಿಚಿತ್ರ ನಿಲುವಿನ ಅರ್ಥವೇನೆಂದು ಚಿಂತಿಸುತ್ತಾ ಚಿಂತಿಸುತ್ತಾ ಜೀವಮಾನದಲ್ಲಿ ನಾನೆಂದೂ ಸಮರ್ಪಕವಾಗಿ ಅರ್ಥಮಾಡಿಕೊಳ್ಳಲಾರದ ವಿಶಿಷ್ಟ ಚಿದಂಬರ ರಹಸ್ಯಕ್ಕೇ ಅಭಿಮುಖವಾದೆ.’ ಮುಂದೆ ಕುವೆಂಪು ಅವರ ಈ ಮನೋಭಾವದ ಬಗೆಗೆ ಆಳವಾಗಿ ಆಲೋಚಿಸುವ ತೇಜಸ್ವಿ ಅವರಿಗೆ ಭಾರತೀಯ ಸನಾತನ ಧರ್ಮದ ಸತ್ಯಂತ ಕಟು ವಿಮರ್ಶೆ ಮಾಡುವ ಕುವೆಂಪು ಉಪನಿಷದ್ ದರ್ಶನಗಳ ಆರಾಧನೆಯನ್ನೂ ಮಾಡುವ ರೋಚಕತೆಯ ಅನುಭವವಾಗಿದೆ. ಜೀವನಾದ್ಯಾಂತ ದೇವಾಲಯಗಳಿಗೆ ಕಾಲಿಡದ ಕುವೆಂಪು ಅಷ್ಟೇ ಗಾಢವಾಗಿ ಧ್ಯಾನ ತಪಸ್ಯೆ, ಪ್ರಾರ್ಥನೆಗಳನ್ನೂ ಪ್ರತಿಪಾದಿಸಿದ್ದರ ಬಗ್ಗೆ ಆಶ್ವರ್ಯದ ಬೆರಗಿದೆ.

ಆದರೆ, ಕಂದಾಚಾರ, ಬೂಟಾಟಿಕೆ, ಆತ್ಮವಂಚನೆ, ಮುಂತಾದವುಗಳ ಪ್ರಶ್ನೆಯೇ ಇಲ್ಲದ ಅಣ್ಣನ ನಡವಳಿಕೆಗಳನ್ನೂ ವ್ಯಕ್ತಿತ್ವವನ್ನೂ ಹಗುರವಾಗಿ ಪರಿಗಣಿಸುವುದಾಗಲೀ ಸುಲಭ ತೀರ್ಮಾನಗಳಿಗೆ ನುಗ್ಗುವುದಾಗಲೀ ಮೂರ್ಖತನವಾಗುತ್ತದೆ ಎಂಬ ಎಚ್ಚರಿಕೆಯೂ ತೇಜಸ್ವಿಗಿದೆ. ಅಮ್ಮ ಕೊನೆ ಉಸಿರು ಎಳೆಯುತ್ತಿದ್ದಾಗ, ಅಣ್ಣ ಅಮ್ಮನ ಕಿವಿಯಲ್ಲಿ ‘ಯಾ ದೇವಿ ಸರ್ವಭೂತೇಷು ಶಾಂತಿ ರೂಪೇಣಾ ಸಂಸ್ಥಿತಾ’ ಎಂದು ದೇವಿಸ್ತೋತ್ರ ಹೇಳಿ ತಲೆಯನ್ನೊಮ್ಮೆ ನೇವರಿಸಿದ್ದನ್ನು ನೆನೆನೆನೆದಂತೆ ತೇಜಸ್ವಿ ಅವರಿಗೆ, ‘ಅಣ್ಣ ನಮಗೆಂದೂ ಅರ್ಥವಾಗದ ಏನೋ ಒಂದನ್ನು ಹೇಳಲು ಯತ್ನಿಸಿದ್ದರೆ?’ ಎನ್ನುವ ಕಳವಳ ಚಿಂತೆಯೂ ಆಗುತ್ತದೆ. ಕುವೆಂಪು ಅವರು ತಾವು ಧ್ಯಾನದ ರೂಪದಲ್ಲಿ ಆಸ್ವಾದಿಸುತ್ತಿದ್ದ ಪುಟ್ಟ ಹಕ್ಕಿಯ ಗೂಡನ್ನು ತೋರು ತೋರುತ್ತಲೇ ಪುಟ್ಟ ಹುಡುಗ ತೇಜಸ್ವಿಗೆ ಹಕ್ಕಿ ಲೋಕದ ಸೊಬಗನ್ನು ಮನವರಿಕೆ ಮಾಡಿಕೊಟ್ಟ ನಂತರವೇ ತೇಜಸ್ವಿ ಹೆಜ್ಜೆ ಮೂಡದ ಹಾದಿಯ ದಿವ್ಯ ಪಯಣಿಗರನ್ನು ವಿಸ್ಮಯದಿಂದ ನೋಡಲು ಸಾಧ್ಯ ಆದುದು! ಇದನ್ನು ತೇಜಸ್ವಿ ಅತ್ಯಂತ ಸ್ಫುಟವಾಗಿ ದಾಖಲಿಸಿದ್ದಾರೆ.

ಡಾ. ಮಂಜುಳಾ ಹುಲ್ಲಹಳ್ಳಿ