ಚಿಕ್ಕಮಗಳೂರು:  ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಯಾವುದೇ ಗೊಂದಲಗಳಿಲ್ಲ, ಲೋಕಸಭೆ ಚುನಾವಣೆಯಲ್ಲಿ ಸಮನ್ವಯತೆಯಿಂದ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಹೆಚ್ಚು ಮತಗಳಿಂದ ಗೆಲ್ಲಿಸುತ್ತೇವೆ ಎಂದು ಎರಡೂ ಪಕ್ಷಗಳ ನಾಯಕರು ಜಂಟೀ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಚುನಾವಣೆ ಗೆಲುವಿಗೆ ಎರಡೂ ಪಕ್ಷದ ನಾಯಕರನ್ನೊಳಗೊಂಡ ಸಮನ್ವಯ ಸಮಿತಿಯನ್ನೂ ರಚಿಸಲಾಗಿದೆ. ಎರಡೂ ಪಕ್ಷ ಕಾರ್ಯಕರ್ತರಿಗೆ ಮೈತ್ರಿ ಕುರಿತು ಮನವರಿಕೆ ಮಾಡಿಕೊಡಲಾಗಿದೆ. ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಪರವಾಗಿ ಜಂಟೀ ಪ್ರಚಾರ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಈ ವೇಳೆ ಮಾತನಾಡಿ, ಬಿಜೆಪಿಯಿಂದ ಮೈತ್ರಿ ಅಭ್ಯರ್ಥಿಯಾಗಿ ಕಣದಲ್ಲಿರುವ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಗೆಲ್ಲಿಸಲು ಜೆಡಿಎಸ್ ಸಂಪೂರ್ಣ ಸಹಕಾರ ನೀಡಲಿದೆ. ಗೊಂದಲಗಳಿಲ್ಲದೆ ಮೈತ್ರಿಯನ್ನು ಯಶಸ್ವಿಗೊಳಿಸಲಾಗುವುದು ಎಂದರು.

ಇಂದು ಜೆಡಿಎಸ್ ಚಿಕ್ಕಮಗಳೂರು ಕ್ಷೇತ್ರಮಟ್ಟದ ಕಾರ್ಯಕರ್ತರ ಸಭೆ ನಡೆಸಿ ಈ ಸಂಬಂಧ ಕರೆಕೊಟ್ಟಿದ್ದೇವೆ. ಕೋಟಾ ಶ್ರೀನಿವಾಸ್ ಪೂಜಾರಿ ಪರ ಕೆಲಸ ಮಾಡುವಾಗ ಸಣ್ಣ ಲೋಪವೂ ಕಾಣಿಸಿಕೊಳ್ಳದಂತೆ ಎಚ್ಚರಿಕೆ ವಹಿಸಲು ಸೂಚಿಸಿದ್ದೇವೆ ಎಂದರು.

ಗ್ರಾಮಾಂತರ ಮಟ್ಟದಲ್ಲಿ ಜೆಡಿಎಸ್‌ನ ಕಾರ್ಯಕರ್ತರ ವಿಶ್ವಾಸ ಗಳಿಸಿಕೊಂಡು ಕೆಲಸ ಮಾಡುವಂತೆ ಬಿಜೆಪಿ ನಾಯಕರಲ್ಲೂ ಮನವಿ ಮಾಡಿದ್ದೇವೆ. ಕೋಟಾ ಶ್ರೀನಿವಾಸ ಪೂಜಾರಿ ಸರಳ, ಸಜ್ಜನ ವ್ಯಕ್ತಿ ಅವರನ್ನು ಪರಿಷತ್‌ನಲ್ಲಿ ನಾವು ಹತ್ತಿರದಿಂದ ನೋಡಿದ್ದೇವೆ. ಪ್ರಾಮಾಣಿಕ ಮತ್ತು ನಿಷ್ಠಾವಂತ ವ್ಯಕ್ತಿಗೆ ಬಿಜೆಪಿ ಟಿಕೆಟ್ ನೀಡಿದೆ. ಅವರನ್ನುಗೆಲ್ಲಿಸುವ ಕರ್ತವ್ಯ ಮತ್ತು ಧರ್ಮ ನಮ್ಮದಾಗಿದೆ. ಅವರು ಕ್ಷೇತ್ರಕ್ಕೂ ಹೊಸಬರಲ್ಲ. ಗ್ರಾ.ಪಂ. ಸದಸ್ಯರಾಗಿ, ಶಾಸಕರಾಗಿ, ಸಚಿವರಾಗಿ, ವಿಧಾನ ಪರಿಸಚ್ ವಿರೋಧ ಪಕ್ಷದ ನಾಯಕರಾಗಿ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ ಅವರ ಗೆಲುವು ನಿಶ್ಚಿತ ಎಂದರು.

ವಿಧಾನ ಪರಿಷತ್ ಉಪ ಸಭಾಪತಿ, ಬಿಜೆಪಿ ಮುಖಂಡ ಎಂ.ಕೆ.ಪ್ರಾಣೇಶ್ ಮಾತನಾಡಿ, ಬಿಜೆಪಿ-ಜೆಡಿಎಸ್ ನಡುವೆ ಕೆಳ ಹಂತದಿಂದ ಹೊಂದಾಣಿಕೆ ನಡೆದಿದೆ. ಸಣ್ಣ ಪುಟ್ಟ ಗೊಂದಲಗಳನ್ನು ನಿವಾರಣೆ ಮಾಡಿಕೊಂಡಿದ್ದೇವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಹಜವಾಗಿ ಎರಡೂ ಪಕ್ಷಗಳ ನಡುವೆ ವಿರೋಧ ಇತ್ತು. ಈಗ ಅದೆಲ್ಲವನ್ನೂ ಸರಿಪಡಿಸಿಕೊಂಡು ಜೆಡಿಎಸ್ ಜೊತೆ ಸೇರಿ ಚುನಾವಣಾ ಕೆಲಸ ಆರಂಭಿಸಿದ್ದೇವೆ ಎಂದು ತಿಳಿಸಿದರು.

ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಸೇರಿ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಗೆಲ್ಲಿಸಲು ಹಾಗೆಯೇ ಕಡೂರು ಕ್ಷೇತ್ರದಲ್ಲಿ ಹಾಸನ ಲೋಕಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸುತ್ತೇವೆ ಎಂದು ತಿಳಿಸಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಸಹ ನರೇಂದ್ರ ಮೋದಿ ಅವರನ್ನು ಮುತ್ಸದ್ಧಿ ಎಂದು ಕರೆದಿದ್ದಾರೆ. ಬಿಜೆಪಿಯ ಎಲ್ಲಾ ಕಾರ್ಯಕರ್ತರಿಗೆ ಇದು ಸ್ಫೂರ್ತಿದಾಯಕ. ಪ್ರತಿ ಮಂಡಲ ಮಟ್ಟದಲ್ಲಿ ಸಮನ್ವಯತೆಯಿಂದ ಹೋಗಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ ಹೆಗ್ಡೆ ಅವರು ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಆದರೆ ಅವರು ಎಲ್ಲಿಂದ ಬದರು, ಯಾರು ಅವರಿಗೆ ಅಧಿಕಾರ ನೀಡಿದರು ಎನ್ನುವುದನ್ನು ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಕೋಟಾ ಶ್ರೀನಿವಾಸ ಪೂಜಾರಿ ಅವರ ಹಿಂದಿ ಭಾಷೆ ಬಗ್ಗೆ ಹೆಗಡೆ ಮಾತನಾಡಿದ್ದಾರೆ. ಆದರೆ ಪೂಜಾರಿ ಅವರು ಸದನದಲ್ಲಿ ಗಂಭೀರವಾಗಿ ವಿಚಾರ ಮಂಡಿಸುತ್ತಾರೆ. ಇದನ್ನು ನಾವು ನೋಡಿದ್ದೇವೆ. ಮಂತ್ರಿಯಾಗಿ ಭ್ರಷ್ಟಾಚಾರದ ಆರೋಪವಿಲ್ಲದೆ ಪ್ರಮಾಣಿಕವಾಗಿ ಕೆಲಸ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಜೆಡಿಎಸ್ ನಮ್ಮೊಂದಿಗೆ ಕೈಜೋಡಿಸಿರುವುದು ಆನೆ ಬಲ ಬಂದಂತಾಗಿದೆ ಎಂದು ತಿಳಿಸಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕೆಲಸ ಮಾಡಿದ ಬಗ್ಗೆ ಸ್ಪಷ್ಟನೆ ನೀಡಿದ ಬೋಜೇಗೌಡ, ಅದು ಚಿಕ್ಕಮಗಳೂರು ಕ್ಷೇತ್ರಕ್ಕಷ್ಟೇ ಸೀಮಿತವಾಗಿತ್ತು. ಕಾರ್ಯಕರ್ತರ ಅಭಿಪ್ರಾಯವೂ ಅದೇ ಇತ್ತು. ಈ ರೀತಿ ಟೀಕೆ ಟಿಪ್ಪಣಿಗಳು ಇರುತ್ತವೆ. ಅದೆಲ್ಲವನ್ನೂ ಈ ಚುನಾವಣೆಯಲ್ಲಿ ಮರೆತಿದ್ದೇವೆ ಇದು ಪ್ರಜಾತಂತ್ರದ ಸೌಂದರ್ಯ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ, ಮುಖಂಡರುಗಳಾದ ಸಿ.ಎಚ್.ಲೋಕೇಶ್, ಹಿರೇಮಗಳೂರು ಪುಟ್ಟಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಇತರರು ಇದ್ದರು.

There is no confusion in the BJP-JDS alliance.