ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ೧೮ನೇ ಲೋಕಸಭಾ ಚುನಾವಣೆಗೆ ಕಾಫಿನಾಡೆಂದು ಪ್ರಸಿದ್ಧಿ ಪಡೆದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಶುಕ್ರವಾರ ಯಾವುದೇ ಅಹಿತಕರ ಘಟನೆಗಳು ಸಂಭವಿಸದೆ ಶಾಂತಿಯುತವಾಗಿ ಮತದಾನ ನಡೆಯಿತು.

ಯುವ ಮತದಾರರು, ಪುರುಷ, ಮಹಿಳೆಯರು, ವಿಕಲಚೇತನರು ಪ್ರಜಾಪ್ರಭುತ್ವದ ಹಬ್ಬದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಮತಚಲಾಯಿಸಿದರು. ಮತಗಟ್ಟೆಯಲ್ಲಿ ಗಾಲಿಖುರ್ಚಿಯ ವ್ಯವಸ್ಥೆ ಮಾಡಲಾಗಿತ್ತು. ವಿಕಲಚೇತರು ಇದರಲ್ಲಿ ಕುಳಿತುಕೊಂಡು ಮತಗಟ್ಟೆಗೆ ಆಗಮಿಸಿದರೆ. ವಯಸ್ಸಾದವರು ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳ ಸಹಾಯದಿಂದ ಮತಗಟ್ಟೆಗೆ ಬಂದು ತಮ್ಮ ಹಕ್ಕುಚಲಾಯಿಸಿದರು.

ಬೆಳಿಗ್ಗೆಯಿಂದ ಕೆಲವು ಮತಗಟ್ಟೆಗಳಲ್ಲಿ ಮತದಾನ ನೀರಸವಾಗಿದ್ದರೆ, ಮಧ್ಯಾಹ್ನದ ಬಳಿಕ ಬಿರುಸುಪಡೆದುಕೊಂಡಿತು. ಜಿಲ್ಲೆಯ ಕೆಲವೆಡೆ ಬೆರಳೆಣಿಯಷ್ಟು ಮತದಾರರು ಇದ್ದರೆ, ಇನ್ನೂ ಹಲವು ಮತಗಟ್ಟೆಯಲ್ಲಿ ಗುರುತಿನಚೀಟಿ ಹಿಡಿದು ಮತದಾರರು ಸರದಿಸಾಲಿನಲ್ಲಿ ನಿಂತಿದ್ದು, ಇಂದು ಕೆಲವು ಮತಗಟ್ಟೆಗೆ ತೆರಳಿದಾಗ ಕಂಡು ಬಂತು.

ಈ ಜಿಲ್ಲೆಯಲ್ಲಿ ಬೆಳಿಗ್ಗೆ ೯ ಗಂಟೆಗೆ ಶೃಂಗೇರಿ ಕ್ಷೇತ್ರದಲ್ಲಿ ಶೇ.೧೩.೭, ಮೂಡಿಗೆರೆ ಶೇ.೧೧.೩೫, ಚಿಕ್ಕ ಮಗಳೂರು ಶೇ.೧೧.೦೨, ತರೀಕೆರೆ ಕ್ಷೇತ್ರದಲ್ಲಿ ಶೇ.೯.೬೯, ಹಾಸನ ಲೋಕಸಭಾ ಕ್ಷೇತ್ರಕ್ಕೆ ಸೇರ್ಪಡೆ ಗೊಂಡಿರುವ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ. ೮.೫ರಷ್ಟು ಮತದಾನವಾಗಿದ್ದರೆ, ಮಧ್ಯಾಹ್ನ ದ ಹೊತ್ತಿಗೆ ಶೃಂಗೇರಿಯಲ್ಲಿ ಶೇ.೪೯.೪೯, ಮೂಡಿಗೆರೆ ಶೇ.೪೬.೪೪, ಚಿಕ್ಕಮಗಳೂರು ಶೇ. ೪೦.೬೪, ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.೪೦.೮೬ ರಷ್ಟು ಮತದಾನವಾಗಿದೆ. ೫ ಗಂಟೆಯಲ್ಲಿ ಮೂಡಿಗೆರೆ ಕ್ಷೇತ್ರದಲ್ಲಿ ಶೇ. ೭೩, ಶೃಂಗೇರಿಯಲ್ಲಿ ಶೇ.೭೫, ಚಿಕ್ಕಮಗಳೂರು ಶೇ.೬೬ ಮತ್ತು ತರೀಕೆರೆಯಲ್ಲಿ ಶೇ. ೬೯ರಷ್ಟು ಮತದಾನವಾಗಿದೆ.

ಮಾಜಿ ಸಚಿವ ಸಿ.ಟಿ.ರವಿ ಮತ್ತು ಅವರ ಪತ್ನಿ ಪಲ್ಲವಿ ಸಿ.ಟಿ.ರವಿ ಅವರು ನಗರದ ಬಸವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿನ ತೆರೆಯಲಾಗಿರುವ ಮತಗಟ್ಟೆ ಸಂಖ್ಯೆ ೨೦೪ರಲ್ಲಿ ಮತದಾನ ಮಾಡಿದರು.

ನಂತರ ಸುದ್ದಿಗಾರರ ಜತೆ ಮಾತನಾಡಿ, ಬಲಿಷ್ಟ ಭಾರತಕ್ಕೆ ಬಲಿಷ್ಟ ನಾಯಕತ್ವ ಬೇಕು. ದೇಶದ ಅಭಿವೃದ್ಧಿ ಮತ್ತು ಬಡವರ ಏಳಿಗೆಗೆ ಶ್ರಮಿಸುತ್ತಿ ರುವ ಮೋದಿ ಅವರಂತ ನಾಯಕತ್ವ ಬೇಕು. ಮತದಾ ರರು ಬಿಜೆಪಿಗೆ ಮತ ನೀಡು ವಂತೆ ಮನವಿ ಮಾಡಿದರು.

ಮೂಡಿಗೆರೆ ತಾಲೂಕು ಕುಂದೂರು ಮತಕೇಂದ್ರದಲ್ಲಿ ನವ ವಧು ತಳವಾರ ಗ್ರಾಮದ ಸೌಮ್ಯ ಹಸಮಣೆ ಏರುವ ಮೊದಲು ತಮ್ಮ ಹಕ್ಕು ಚಲಾಯಿಸಿದರು. ಇನ್ನೂ ಸ್ವಾಮೀಜಿಗಳು ಹಾಗೂ ಗಣ್ಯರು ತಮ್ಮ ಹಕ್ಕು ಚಲಾಯಿಸಿದ್ದು ಬಾಳೆಹೊನ್ನೂರು ರಂಭಾಪುರಿ ಶ್ರೀ ರಂಭಾಪುರಿ ಮಠದ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿದರು. ನಂತರ ಮಾತನಾಡಿದ ಅವರು, ಮತದಾನ ಸಂವಿಧಾನ ಕೊಟ್ಟ ಅಧಿಕಾರ ಎಂಬುದನ್ನು ಮರೆಯಬೇಡಿ, ಸಧೃಡ ಭಾರತ ನಿರ್ಮಾಣಕ್ಕಾಗಿ ಮತದಾನ ಮಾಡಿ ಎಂದು ಮನವಿ ಮಾಡಿದರು.

ಕೊಪ್ಪ ತಾಲೂಕು ಹರಿಹರಪುರ ಶ್ರೀಮಠದ ಶ್ರೀ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ ಹರಿಹರಪುರ ಸರ್ಕಾರಿ ಶಾಲೆಯಲ್ಲಿ ತೆರೆಯಲಾಗಿರುವ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು. ಎಲ್ಲರೂ ತಪ್ಪದೆ ಮತದಾನ ಮಾಡುವಂತೆ ವಿನಂತಿಸಿದರು.
ಚಿಕ್ಕಮಗಳೂರು ಕ್ಷೇತ್ರದ ಶಾಸಕ ಎಚ್.ಡಿ.ತಮ್ಮಯ್ಯ ಚಿಕ್ಕಕುರುಬರಹಳ್ಳಿ ಸರ್ಕಾರಿ ಶಾಲೆಯಲ್ಲಿ ತೆರೆಯಲಾಗಿರುವ ಮತಗಟ್ಟೆ ಸಂಖ್ಯೆ ೧೩೮ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು.

ಇವಿಎಂ ದೋಷ ಸ್ಥಗಿತಗೊಂಡ ಯಂತ್ರ ಗಂಟೆಗೂ ಹೆಚ್ಚು ಕಾಲ ಕಾದು ಕುಳಿತ ಮತದಾರರು, ಚಿಕ್ಕಮಗಳೂರು ತಾಲೂಕು ಅರೆನೂರು ಗ್ರಾಮದಲ್ಲಿ ತೆರೆಯಲಾಗಿರುವ ಮತಗಟ್ಟೆ ಸಂಖ್ಯೆ ೫೩ರಲ್ಲಿ ಇವಿಎಂ ಯಂತ್ರದಲ್ಲಿ ದೋಷ ಕಂಡು ಬಂದಿದ್ದು ಮತದಾರರು ಒಂದು ಗಂಟೆಗೂ ಹೆಚ್ಚುಕಾಲ ಕಾದು ಕುಳಿತುಕೊಳ್ಳಬೇಯಿತು. ಮತಗಟ್ಟೆ ಅಧಿಕಾರಿಗಳು ಇವಿಎಂ ಯಂತ್ರದಲ್ಲಿ ದೋಷವನ್ನು ಸರಿಪಡಿಸಿ ಮತದಾನ ಪ್ರಕ್ರಿಯೆಗೆ ಅನುವು ಮಾಡಿಕೊಡಲಾಯಿತು.

ನರಸಿಂಹರಾಜಪುರ ತಾಲೂಕು ಮೆಣಸೂರು ಗ್ರಾಮದಲ್ಲಿ ತೆರೆಯಲಾಗಿರುವ ಮತಗಟ್ಟೆಯಲ್ಲಿ ಇವಿಎಂ ದೋಷ ಕಂಡು ಬಂದಿದ್ದು ಒಂದು ಗಂಟೆಗೂ ಹೆಚ್ಚು ಕಾಲ ಮತದಾನ ಸ್ಥಗಿತಗೊಂಡಿತ್ತು. ಕೆಲಸಕ್ಕೆ ತೆರಳುವ ಕಾರ್ಮಿಕರು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಇವಿಎಂ ಮಿಶಿನ್ ದುರಸ್ತಿ ನಂತರ ಮತದಾನ ಪ್ರಕ್ರಿಯೇ ಮುಂದೂವರೆಯಿತು. ಬಯಲು ಸೀಮೆ ಭಾಗದಲ್ಲಿ ಉರಿ ಬಿಸಿಲಿನ ನಡುವೆ ಮತದಾರರು ಮತಗಟ್ಟೆಯಲ್ಲಿ ಸರತಿಯಲ್ಲಿ ನಿಂತು ಮತದಾನ ಮಾಡಿದರು.

ಮತದಾನ ಮಾಡಿದ ಪ್ರಮುಖರು: ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶಹೆಗ್ಡೆ, ವಿಧಾನಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್,ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಶಾಸಕರಾದ ಟಿ.ಡಿ.ರಾಜೇಗೌಡ, ನಯನಮೋಟಮ್ಮ, ಹೆಚ್.ಡಿ.ತಮ್ಮಯ್ಯ, ಕೆ.ಎಸ್.ಆನಂದ್, ಜಿ.ಹೆಚ್.ಶ್ರೀನಿವಾಸ, ಮಾಜಿ ಸಚಿವರಾದ ಸಿ.ಟಿ.ರವಿ, ಡಿ.ಎನ್.ಜೀವರಾಜ್,ಬಿ.ಬಿ.ನಿಂಗಯ್ಯ, ಮೋಟಮ್ಮ, ಮಾಜಿಶಾಸಕರಾದ ಡಿ.ಎಸ್.ಸುರೇಶ್, ಎಂ.ಪಿ.ಕುಮಾರಸ್ವಾಮಿ, ಕಡೂರಿನ ವೈ.ಎಸ್.ವಿ.ದತ್ತ,ಎಸ್.ಎಂ.ನಾಗರಾಜ್ ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿಶಾಂತೇಗೌಡ, ಎಐಸಿಸಿ ಪ್ರಧಾನಕಾರ್ಯದರ್ಶಿ ಬಿ.ಎಂ.ಸಂದೀಪ ಮತಚಲಾಯಿಸಿದ್ದಾರೆ.

ಪಿಳ್ಳೇನಹಳ್ಳಿಯಲ್ಲಿ ಗುರುವಮ್ಮ ಎಂಬುವರು ತಮ್ಮ ಕುಟುಂಬದವರ ಸಹಾಯದಿಂದ ಮತಗಟ್ಟೆಗೆ ಆಗಮಿಸಿದ್ದರು.ಯಾರೊಬ್ಬರೂ ಮತದಾನದ ಗುಟ್ಟನ್ನು ಬಿಟ್ಟುಕೊಡಲಿಲ್ಲ, ಕೆಲವು ಗ್ರಾಮಗಳಲ್ಲಿ ಹೇಗಿದೆ ಓಟಿಂಗ್ ಎಂದು ಕೇಳಿದರೆ, ಎರಡು ಪಕ್ಷಕ್ಕೂ ಇದೆ ಎಂದು ಹೇಳಿದರು.
ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿಶಾಂತೇಗೌಡ ಮಾತನಾಡಿ, ತಾವು ಲಕ್ಯಾ, ಚಿಕ್ಕಗೌಜ,ಹಿರೇಗೌಜ,ಸಾದರಹಳ್ಳಿ, ಉದ್ದೇಬೋರಹಳ್ಳಿ, ಸಿಂದಿಗೆರೆ ಸೇರಿದಂತೆ ಕೆಲವು ಗ್ರಾಮಗಳಿಗೆ ಭೇಟಿನೀಡಿದ್ದು, ಪಕ್ಷದ ಪರವಾಗಿ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಆಶಯ ವ್ಯಕ್ತಪಡಿಸಿದರು.

Peaceful polling in Chikmagalur district