ಚಿಕ್ಕಮಗಳೂರು: ವಿದೇಶದಿಂದ ಬಂದು ದಂಪತಿಗಳು ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು.

ಕಡೂರು ತಾಲೂಕು ಪಂಚೇನಹಳ್ಳಿಯ ಸಾಫ್ಟ್‌ವೇರ್ ಇಂಜಿನಿಯರ್ ಮಧು ಮತ್ತು ಅವರ ಪತ್ನಿ ಪಿಳ್ಳೇನಹಳ್ಳಿಯ ತನುಶ್ರೀ ಅವರು ದುಬೈನಲ್ಲಿ ವಾಸವಾಗಿದ್ದು ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ದೂರದ ದುಬೈನಿಂದ ಬಂದು ಮತ ಚಲಾಯಿಸಿದ್ದಾರೆ. ದುಬೈನಲ್ಲಿ ಮಧು ಸಾಫ್ಟ್ ವೇರ್ ಇಂಜಿನಿಯರ್ ವೃತ್ತಿಯಲ್ಲಿದ್ದು ಪತ್ನಿ ತನುಶ್ರೀ ಗೃಹಿಣಿಯಾಗಿದ್ದಾರೆ.

ಮಧು ತನ್ನ ಊರಾದ ಪಂಚೇನಹಳ್ಳಿಯಲ್ಲಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಪತ್ನಿ ತನುಶ್ರೀ ಪಿಳ್ಳೇನಹಳ್ಳಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ನಂತರ ಸುದ್ದಿಗಾರರ ಜತೆ ಮಾತನಾಡಿದ ದಂಪತಿಗಳು, ನಮ್ಮ ಹಕ್ಕು ಚಲಾಯಿಸಲು ದುಬೈನಿಂದ ಬಂದಿದ್ದೇವೆ. ಯುವ ಸಮುದಾಯವೇ ನಮ್ಮ ದೇಶದ ಶಕ್ತಿಯಾಗಿದ್ದು, ಯುವ ಸಮುದಾಯ ಉತ್ಸಹದಿಂದ ಮತದಾನ ಮಾಡಬೇಕು ಎಂದರು.

ಬೇರೆ ದೇಶಗಳಂತೆ ನಮ್ಮ ದೇಶವು ಅಭಿವೃದ್ಧಿ ಹೊಂದ ಬೇಕು. ನಮ್ಮ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಇನ್ನಷ್ಟು ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಮತದಾನ ಮಾಡಬೇಕು.

ದುಬೈಗೆ ತೆರಳಿ ಆರು ವರ್ಷವಾಗಿದೆ. ಕಳೆದ ವಿಧಾಸಭೆ ಚುನಾವಣೆಗೆ ಬರಬೇಕೆಂದು ಇಚ್ಚೆ ಇತ್ತು. ಆದರೆ, ಆ ಸಮಯಕ್ಕೆ ರಜೆ ಸಿಗದ ಕಾರಣ ಬರಲು ಸಾಧ್ಯವಾಗಿರಲಿಲ್ಲ. ಈ ವರ್ಷ ಮುಂದಿನ ತಿಂಗಳು ರಜೆ ಇತ್ತು. ಮತದಾನದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಮುಂಚಿತವಾಗಿ ರಜೆ ಪಡೆದು ಬಂದಿದ್ದೇವೆ. ನಮ್ಮ ಹಕ್ಕು ಚಲಾಯಿಸಿದ್ದೇವೆ.

Voting by couples from abroad