ಚಿಕ್ಕಮಗಳೂರು:  ಜಿಲ್ಲೆಯ ಪ್ರವಾಸಿ ತಾಣಗಳಾದ ಬಾಬಾ ಬುಡನ್ ಗಿರಿ ಹಾಗೂ ಸೀತಾಳಯ್ಯನ ಗಿರಿಯಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ ೨೦೨೪ರ ಅಂಗವಾಗಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಇಂದು ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಯಿತು.

ಜಿ.ಪಂ.ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಗೋಪಾಲಕೃಷ್ಣ ಬಿ. ಮಾತನಾಡಿ ಪ್ರಜಾಪ್ರಭುತ್ವ ಬಲಿಷ್ಠಗೊಳಿಸಲು ಪ್ರತಿಯೊಬ್ಬರು ಮತದಾನದಲ್ಲಿ ಭಾಗವಹಿಸಬೇಕು. ಒಂದೊಂದು ಮತವು ಸದೃಢ ಭಾರತ ನಿರ್ಮಾಣಕ್ಕೆ ಸಂಜೀವಿನಿಯಾಗಿದೆ.

ಮತದಾನ ನಮ್ಮ ಹಕ್ಕು ಯಾರು ಸಹ ಮತದಾನದಿಂದ ದೂರ ಉಳಿಯದೆ ಮತ ಚಲಾಯಿಸಬೇಕು ಎಂದ ಅವರು ಪ್ರಜಾಪ್ರಭುತ್ವದ ಹಬ್ಬವನ್ನು ಎಲ್ಲರೂ ಮತ ಚಲಾಯಿಸುವ ಮೂಲಕ ಆಚರಿಸಬೇಕು. ಪ್ರತಿ ೫ ವರ್ಷಕ್ಕೊಮ್ಮೆ ಬರುವ ಚುನಾವಣೆಯಲ್ಲಿ ಪ್ರತಿಯೊಬ್ಬ ಅರ್ಹ ಮತದಾರರು ಮತದಾನ ಕೇಂದ್ರಗಳಿಗೆ ತೆರಳಿ ಮತ ಚಲಾಯಿಸುವ ಮೂಲಕ ಯೋಗ್ಯ ವ್ಯಕ್ತಿಯನ್ನು ಆರಿಸಿ ಕೊಳ್ಳುವಂತೆ ಹೇಳಿದರು.

ಜಿಲ್ಲೆಯು ಪ್ರವಾಸಿಗರಿಗೆ ಪ್ರಸಿದ್ಧ ತಾಣವಾಗಿದ್ದು, ಇಲ್ಲಿನ ಗಿರಿ ಪ್ರದೇಶದ ಪ್ರಕೃತಿ ಸೌಂದರ್ಯವು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಈ ಪ್ರವಾಸಿ ತಾಣದ ಸೌಂದರ್ಯವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಜಿಲ್ಲಾಧಿಕಾರಿಗಳು ಗಿರಿ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತ ಪ್ರದೇಶವನ್ನಾಗಿ ಈಗಾಗಲೇ ಘೋಷಿಸಿದ್ದಾರೆ. ಇಲ್ಲಿಗೆ ಪ್ರವಾಸಕ್ಕಾಗಿ ಬರುವ ಪ್ರವಾಸಿಗರು ಪ್ಲಾಸ್ಟಿಕ್‌ನ್ನು ಬಳಸಿ ಎಲ್ಲೆಂದರಲ್ಲಿ ಬಿಸಾಡುವುದರಿಂದ ಪ್ರಕೃತಿ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ. ಪ್ರವಾಸಿಗರು ಪ್ಲಾಸ್ಟಿಕ್‌ನ್ನು ಬಳಸಬಾರದೆಂದು ಹೇಳಿದರು.

ಸ್ವಚ್ಚತಾ ಕಾರ್ಯದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು, ಹೋಂ ಸ್ಟೇ, ಜೀಪ್ ಅಸೋಷಿಯೇಷನ್ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Voting awareness through cleanliness