ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲ್ಲೂಕು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗ್ರಾಮ ಠಾಣಾ ಜಾಗವನ್ನು ಕಬಳಿಸಿ ನಿವೇಶನಗಳಾಗಿ ಪರಿವರ್ತಿಸಿ ಮಾರಾಟ ಮಾಡುತ್ತಿರುವ ವ್ಯಕ್ತಿ ವಿರುದ್ದ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ಹೋಗಿ ದೂರು ಸಲ್ಲಿಸಲಾಗುವುದೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಮಹೇಶ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ ಈ ಸಂಬಂಧ ಹಲವಾರು ಬಾರಿ ಜಿಲ್ಲಾಡಳಿತಕ್ಕೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ಸಲ್ಲಿಸಿ ಒತ್ತಾಯಿಸಿದ್ದು ಯಾವುದೇ ಪ್ರಯೋಜನವಾಗಿಲ್ಲ ಆದ್ದರಿಂದ ಚುನಾವಣೆ ನಂತರ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಸಲಾಗುವುದು ಇದರ ಜೊತೆಗೆ ಲೋಕಾಯುಕ್ತಕ್ಕೆ ದೂರು ನೀಡಿ ತನಿಖೆ ನಡೆಸಲು ಆಗ್ರಹಿಸಿದರು.

ಸಾರ್ವಜನಿಕ ಗ್ರಾಮ ಠಾಣಾ ಸ್ವತ್ತನ್ನು ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಕಟ್ಟಡಗಳ ನಿರ್ಮಾಣ ಮಾಡಿ ಅಮಾಯಕರಿಗೆ ಮಾರಾಟ ಮಾಡಿರುವುದಲ್ಲದೇ ಜೇಸಿಬಿ ಬೃಹತ್ ಯಂತ್ರದಿಂದ ದಟ್ಟ ಕಾಡನ್ನು ಬಗೆದು ಸಮತಟ್ಟು ಮಾಡಿ ಸಾರ್ವಜನಿಕರಿಗೆ ತಿರುಗಾಡುವ ರಸ್ತೆಗೆ ಬೃಹತ್ ಹೊಂಡ ತೆಗೆದು ತೊಂದರೆ ಉಂಟು ಮಾಡಿರುತ್ತಾರೆ. ಸರ್ಕಾರಿ ಹಳ್ಳ ಪಂಚಾಯಿತಿ ರಸ್ತೆಗಳನ್ನು ಮುಚ್ಚಿ ಅಕ್ರಮ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ಸಾರ್ವಜನಿಕರಿಗೆ ವಂಚಿಸಿರುವುದಾಗಿ ಆರೋಪಿಸಿದರು.

ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಹಾಲಿ ಮಾಜಿ ಅಧ್ಯಕ್ಷರುಗಳು ಶಾಮಿಲಾಗಿ ಅಕ್ರಮ ಹಣ ಸಂಪಾದನೆಗಾಗಿ ಸರ್ಕಾರಕ್ಕೆ ವಂಚಿಸಿ ದಂಧೆ ನಡೆಯುತ್ತಿದೆ. ಸದರಿ ೩-೧೦ ಎಕರೆ ವಿಸ್ತೀರ್ಣ ಸರ್ಕಾರಿ ಗ್ರಾಮ ಠಾಣಾ ಖಾಲಿ ಜಾಗ ಯಾವುದರ ಆಧಾರದ ಮೇಲೆ ನಿವೇಶನಗಳನ್ನಾಗಿ ಮಾರ್ಪಡಿಸುತ್ತಿದ್ದಾರೆ ಹಾಗೂ ಅದರ ಖಾತೆ ಮೂಡಿಗೆರೆ ಪಟ್ಟಣ ಪಂಚಾಯಿತಿ (ಹಿಂದಿನ ಮುನ್ಸಿಪಾಲಿಟಿ) ಯಲ್ಲಿ ಯಾವಾಗ ನೊಂದಾಯಿಸಲಾಯಿತು ಎಂಬ ಬಗ್ಗೆ ಸ್ಪಷ್ಟೀಕರಣವಿರುವುದಿಲ್ಲ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಡಿ.ಆರ್ ದುಗ್ಗಪ್ಪಗೌಡ, ಮುಖಂಡರಾದ ಸವಿಂಜಯ್‌ಜೈನ್, ಓಂಕಾರಪ್ಪ, ನಿರಂಜನಮೂರ್ತಿ, ಜಗದೀಶ್, ನಾರಾಯಣಗೌಡ ಇದ್ದರು.

Delegation to Chief Minister if appropriate action is not taken