ಚಿಕ್ಕಮಗಳೂರು: ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರು ಅಮೇರಿಕಾದಿಂದ ಹಣ ಸಂಪಾದನೆ ಮಾಡಿಕೊಂಡು ಬಂದ ಬಿಡದಿ ವ್ಯಕ್ತಿಯ ೯ ವರ್ಷದ ಮಗಳಿಗೆ ಕಣ್ಣಿಗೆ ಬಟ್ಟೆ ಕಟ್ಟಿ ಬಚ್ಚಿಡುತ್ತಾರೆ. ನಂತರ, ವ್ಯಕ್ತಿಯನ್ನು ಬೆದರಿಸಿ ಎಲ್ಲ ಆಸ್ತಿಯನ್ನು ಬರೆಸಿಕೊಳ್ಳುತ್ತಾರೆ ಎಂದು ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರು ಗಂಭೀರ ಆರೋಪ ಮಾಡಿದರು.

ಮೂಡಿಗೆರೆಯಲ್ಲಿ ಬುಧವಾರ ಸುದ್ದಿಗಾರರೋಂದಿಗೆ ಮಾತನಾಡಿ ಎಲ್ಲದಕ್ಕೂ ನನ್ನ ಬಳಿ ದಾಖಲೆಯಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಅಮೆರಿಕಾದಿಂದ ಹಣ ಸಂಪಾದನೆ ಮಾಡಿಕೊಂಡು ಬಂದ ಮನುಷ್ಯನ ಆಸ್ತಿ ಬರೆಸಿಕೊಂಡಿದ್ದರು. ಬಿಡದಿ ಹತ್ರ ರಸ್ತೆ ಪಕ್ಕದಲ್ಲಿ, ಅವರು ಒಂದು ಐಟಿ ಕಂಪನಿಯನ್ನು ಸ್ಥಾಪನೆ ಮಾಡಿದ್ದರು. ಅದರ ಹಿಂದಿನ ದಿನ ಇವರು ಒಂದು ಸುಳ್ಳು ಕ್ರಯ ಪತ್ರ ಸ್ಥಾಪನೆ ಮಾಡುತ್ತಾರೆ. ಅದರ ದಾಖಲೆ ನನ್ನ ಬಳಿ ಇದೆ ಎಂದರು.

ಆಸ್ತಿ ಬರೆಸಿಕೊಂಡಿದ್ದ ಕೇಸ್ ಅನ್ನು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‌ಗೆ ಹಾಕಿದರು. ಅಲ್ಲಿ ಅವರಿಗೆ ಭಾರಿ ಮುಖಭಂಗ ಆಯ್ತು. ಇದಾದ ನಂತರ ಆಸ್ತಿ ಮಾಲೀಕನ ೯ ವರ್ಷದ ಮಗಳನ್ನ ತೆಗೆದುಕೊಂಡು ಹೋಗಿ ಪಕ್ಕದ ಮನೆಯಲ್ಲಿ ಕಣ್ಣಿಗೆ ಬಟ್ಟೆ ಕಟ್ಡಿ ಇಡ್ತಾರೆ. ನಿನ್ನ ಮಗಳು ಬೇಕು ಅಂದ್ರೆ ಸಹಿ ಮಾಡು ಎಂದು ಬೆದರಿಸುತ್ತಾರೆ. ಆ ಮಗುವಿನ ತಾಯಿ ಎಲ್ಲಾ ಬರೆದುಕೊಟ್ಟು ನನ್ನ ಮಗಳ ಕರೆದುಕೊಂಡು ಬನ್ನಿ ಎಂದು ಗಂಡನ ಕಾಲು ಹಿಡಿಯುತ್ತಾಳೆ ಎಂದು ಹೇಳಿದರು.

ಗಂಡ ಹೆಂಡತಿ ಮಗುವಿನ ಬಳಿ ಹೋದಾಗ ಕಣ್ಣಿಗೆ ಬಟ್ಟೆ ಕಟ್ಟಿ ಬಚ್ಚಿಟ್ಟಿದ್ದ ಹೆಣ್ಣು ಮಗುವನ್ನು ಮುಂದೆ ಕರೆದುಕೊಂಡು ಬಂದು ಕಣ್ಣಿಗೆ ಕಟ್ಟಿದ್ದ ಬಟ್ಟೆ ಬಿಚ್ಚುತ್ತಾರೆ. ಆ ಮಗು ಅಪ್ಪ ಅಂತ ಓಡಿ ಬರುತ್ತದೆ. ಮತ್ತೆ ಒಳಗೆ ತೆಗೆದುಕೊಂಡು ಹೋಗ್ತಾರೆ. ಇದಕ್ಕೆ ನನ್ನ ಮುಂದೆ ದಾಖಲೆ ಇದೆ. ಇದನ್ನ ಎಲೆಕ್ಷನ್ ನಲ್ಲಿ ಬಳಸಿಕೊಳ್ಳಿ ಎಂದು ಲಾಯರ್ ಒಬ್ಬರು ನನಗೆ ಸಂಪೂರ್ಣ ದಾಖಲೆ ತಂದುಕೊಟ್ಟರು.

ನಾನು ಅನ್ಯಾಯಕ್ಕೊಳಗಾದ ವ್ಯಕ್ತಿಯ ಬಳಿಗೆ ಹೋದಾಗ ಆ ಪುಣ್ಯಾತ್ಮ ನಾನು ಕರ್ನಾಟಕದಲ್ಲಿ ಯಾರಿಗೂ ಮತ ಹಾಕಲ್ಲ. ನಾನು ಓಟರ್ ಲಿಸ್ಟ್‌ನಲ್ಲಿಯೇ ಇಲ್ಲ. ಈ ಕರ್ನಾಟಕ ಸಾಕು ಎಂದರು. ಅವರ ಹೆಸರು ನನಗೆ ಮರೆತೋಗಿದೆ, ಬಹಳ ವರ್ಷ ಆಯ್ತು. ಎಲ್ಲವನ್ನೂ ಕಳೆದುಕೊಂಡ ಮೇಲೆ ಅವರು ಜೀವನಕ್ಕಾಗಿ ಬೇರೆಯವರ ಅಧೀನದಲ್ಲಿ ಕೆಲಸ ಮಾಡ್ತಾರೆ ಎಂಬ ದೊಡ್ಡ ಅಪರಾಧ ಕೃತ್ಯವನ್ನೇ ಮಾಧ್ಯಮಗಳ ಮುಂದೆ ಬಿಚ್ಚಿಡುತ್ತಾರೆ ಎಂದರು.

ಇದಾದ ನಂತರ ಸಂಬಂಧಪಟ್ಟ ವ್ಯಕ್ತಿಗೆ ಆಸ್ತಿ ಮಾರಾಟ ಮಾಡಿದ್ದೀಯೆಂದು ಚೆಕ್ ಕೊಡ್ತಾರೆ ೧೬ ಲಕ್ಷ ರೂ. ಮೌಲ್ಯದ ಹಾಗೂ ೪ ಲಕ್ಷ ರೂ. ಮೌಲ್ಯದ ಎರಡು ಚೆಕ್ ಕೊಡುತ್ತಾರೆ ಆದರೆ, ಅವರು ಕೊಟ್ಟ ಆ ಎರಡೂ ಚೆಕ್‌ಗಳು ಲ್ಯಾಪ್ಸ್ ಆಗುತ್ತವೆ. ಆಗ ವ್ಯಕ್ತಿಯ ಮುಂದೆ ಹೇಳ್ತಾರೆ ಏಯ್…. ಇದನ್ನ ಹೊರಗೆ ಹೇಳುದ್ರೆ ಕಬ್ಬನ್‌ಪಾರ್ಕ್‌ನಲ್ಲಿ ಏನಾಗುತ್ತೆ ಅಂತಾ ತಿಳ್ಕೋ ಎಂದು ಬೆದರಿಸುತ್ತಾರೆ. ಇವರು ಕಾಂಗ್ರೆಸ್ ಅಧ್ಯಕ್ಷರು ಅಬ್ಬಾ.. ಸೋನಿಯಾ, ರಾಹುಲ್ ಅವರಿಗೆ ಬಹಳ ಇಷ್ಟ ಎಂದು ವಾಗ್ದಾಳಿ ಮಾಡುತ್ತಾರೆ ಎಂದು ತಿಳಿಸಿದರು

Former Prime Minister H.D. Deve Gowda press conference