ಚಿಕ್ಕಮಗಳೂರು: ಬಿಜೆಪಿಯವರು ತೋರಿಸುವ ಆಸೆ, ಆಕಾಂಕ್ಷೆ ಇನ್ನಿತರೆ ಅಮಿಷಗಳಿಗೆ ಒಳಗಾಗದೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಕೆಪಿಸಿಸಿ ವಕ್ತಾರ ಹೆಚ್.ಹೆಚ್.ದೇವರಾಜ್ ತಿಳಿಸಿದರು.

ಅವರು ಬುಧವಾರ ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಜಾಗರ ಹೋಬಳಿ, ಶಿರವಾಸೆ ಪಂಚಾಯಿತಿ ವ್ಯಾಪ್ತಿಯ ಕಳವಾಸೆ, ಹೊಸಕೊಪ್ಪ, ಬೀಕನಹಳ್ಳಿ, ಸಿದ್ದಾಪುರ, ಕೊಂಕಳಮನೆ, ಗಾಳಿಗುಡ್ಡೆ ಗ್ರಾಮದ ೨೫ ಕ್ಕೂ ಹೆಚ್ಚು ಯುವಕರು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಬಿ.ಎಲ್.ಪ್ರವೀಣ್ ಬೆಟ್ಟಗೆರೆ ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಬಾವುಟವನ್ನು ನೀಡಿ ಬರಮಾಡಿಕೊಂಡು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ೫ ಗ್ಯಾರಂಟಿ ಯೋಜನೆಗಳು ಜನರ ಮನಸ್ಸಿನಲ್ಲಿ ನೆಲೆಯೂರಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿ ಇಂದು ಜನವಿರೋಧಿ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಕೆ.ಮಹಮದ್ ಮಾತನಾಡಿ, ಇಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾದ ಉತ್ತಮವಾದ ವಾತಾವರಣ ಇದೆ. ಎಲ್ಲರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗಡೆ ಗೆಲುವಿಗೆ ಶ್ರಮಿಸೋಣ. ರಾಜ್ಯ ಕಾಂಗ್ರೆಸ್ ಸರ್ಕಾರದ ೫ ಗ್ಯಾರಂಟಿ ಯೋಜನೆಗಳನ್ನು ಮನೆ ಮನಗೆ ತಲುಪಿಸುವ ಕೆಲಸವನ್ನು ಮಾಡೋಣ ಎಂದರು.

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಬಿ.ಎಲ್.ಪ್ರವೀಣ್ ಬೆಟ್ಟಗೆರೆ ಮಾತನಾಡಿ, ಜಾಗರ ಹೋಬಳಿ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮಗಳ ಯುವಕರು ಯಾವುದೇ ಸಮಯದಲ್ಲೂ ಕರೆದರೂ ಸಹ ಒಟ್ಟಾಗಿ ಕೆಲಸ ಮಾಡಲು ಮುಂದಾಗುತ್ತಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮುನ್ನಡೆ ಕೊಡಿಸಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮುನ್ನಡೆ ಕೊಡಿಸುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ಭರವಸೆ ನೀಡಿದರು.

ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ, ಜಿಲ್ಲಾ ವಕ್ತಾರ ರೂಬಿನ್ ಮೊಸಸ್, ಶಿರವಾಸೆ ಗ್ರಾಮ ಪಂಚಾಯಿತಿ ಸದಸ್ಯೆ ಪ್ರೇಮಾಕ್ಷಿ, ಕಳವಾಸೆ ಗ್ರಾಮ ಪಂಚಾಯಿತಿ ಸದಸ್ಯ ಗಣೇಶ್, ಸಿದ್ದಾಪುರ ಗ್ರಾಮ ಪಂಚಾಯಿತಿ ಸದಸ್ಯ ರವಿ, ಪ್ರಣಿತ್, ಪ್ರವೀಣ್, ರಮೇಶ್, ರವಿ, ದಿನೇಶ್, ಶರತ್, ಅಶ್ವಿತ, ಆದರ್ಶ, ವಿಕ್ರಂ, ಸುದೀಪ್, ಸತೀಶ್, ರಂಜಿತ್, ನವೀನ್ ಅಶೋಕ್ ಸೇರಿದಂತೆ ಮತ್ತಿತರರು ಇದ್ದರು.

Joining Congress program after leaving BJP party in district congress office