ಚಿಕ್ಕಮಗಳೂರು: ತಾಲೂಕಿನ ಇತಿಹಾಸ ಪ್ರಸಿದ್ಧ ಸೀತಾಳಯ್ಯನ ಗಿರಿಯಲ್ಲಿರು ಶ್ರೀ ಸೀತಾಳಮಲ್ಲಿಕಾರ್ಜುನಸ್ವಾಮಿ ರಥೋತ್ಸವದಲ್ಲಿ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.

ದೇವಾಲಯದಲ್ಲಿ ಪ್ರಧಾನ ಅರ್ಚಕರ ನೇತೃತ್ವದಲ್ಲಿ ಬೆಳಿಗ್ಗೆ ದೇವರಿಗೆ ಪುಷ್ಪಾಲಂಕಾರ ನೆರವೇರಿಸಿ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸೀತಾಳ ಮಲ್ಲಿಕಾರ್ಜುನ ಸ್ವಾಮಿಗೆ ಕಂಕಣ ಕಟ್ಟುವ ಮೂಲಕ ಮೊದಲಹಬ್ಬದೊಂದಿಗೆ ಆರಂಭವಾದ ಜಾತ್ರಾ ಮಹೋತ್ಸವ ೭ ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಗಳನ್ನು ನಡೆಸಲಾಗುತ್ತದೆ.

ನಾಡಿನ ಭಕ್ತರು ಸುತ್ತುವರೆದು ಹರೆಭೂತನನ್ನು ಕರೆತಂದು ಉಪವಾಸ ವ್ರತದೊಂದಿಗೆ ಬೆಳಗ್ಗೆ ಹರೆ ಉಜ್ಜಿಸಿದರು. ನಾಡಿನ ಅರ್ಚಕರುಗಳು ಮುಳ್ಳಪ್ಪಕಟ್ಟೆ, ಹಾಲುಮಲ್ಲಪ್ಪ, ಚೆಂಗರಮಲ್ಲಪ್ಪ ಕಟ್ಟೆ ಸೇರಿದಂತೆ ರಥದ ಸುತ್ತ ಬಿನ್ನ ಹಾಕಿ ನಾಡಿನ ಪ್ರಮುಖರನ್ನು ಆಹ್ವಾನಿಸಿದ ನಂತರ ರಥ ಎಳೆಯಲಾಯಿತು.

ನಾಡಿನವರು ಮುಳ್ಳಪ್ಪಸ್ವಾಮಿಯನ್ನು ದೇವಾಲಯಕ್ಕೆ ಕರೆತಂದು ಪೂಜೆ ಸಲ್ಲಿಸಿದರೆ, ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿ ತೇರಿಗೆ ಮುಟ್ಟಿಸುತ್ತಾರೆ. ಬಳಿಕ ನಾಡಿನವರೆಲ್ಲ ಉತ್ಸವ ನಡೆಸುತ್ತಾರೆ. ನಂತರ ಒಟ್ಟಾಗಿ ತೇರು ಎಳೆಯುವುದು ಇಲ್ಲಿನ ಸಂಪ್ರದಾಯ.ರಥವನ್ನು ಎಳೆಯುವಾಗ ಕುಳಿತಿದ್ದ ಭಕ್ತರ ಬಳಿ ಬಾಳೆಹಣ್ಣನ್ನು ಎಸೆದು ಭಕ್ತಿ ಸಮರ್ಪಿಸಿದರು.

ಜಾತ್ರಾ ಮಹೋತ್ಸವದ ಅಂಗವಾಗಿ ಸುತ್ತಮುತ್ತಲ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದ್ದು ಮನೆಗಳಿಗೆ ತಳಿರು ತೋರಣಕಟ್ಟಿ ನೆಂಟರಿಷ್ಟರನ್ನು ಆಹ್ವಾನಿಸಿ ಕುಟುಂಬದೊಂದಿಗೆ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

History Famous Sri Seethalamallikarjunaswamy Chariotsavam