ಹೊಸಪೇಟೆ:  ದೇಶದಲ್ಲಿ ಬುದ್ಧ, ಬಸವಣ್ಣ, ಅಂಬೇಡ್ಕರ ಅವರನ್ನೇ ಬಿಟ್ಟಿಲ್ಲ. ನನ್ನ ಮೇಲೂ ಅದೇ ರೀತಿ ಹುನ್ನಾರ ನಡೆಸುತ್ತಿದ್ದಾರೆ. ನನ್ನನ್ನು ಲಿಂಗಾಯತ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ. ಆದರೆ ನಾನು ಲಿಂಗಾಯತ ವಿರೋಧಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ವಿಜಯನಗರದಲ್ಲಿ ನಡೆದ ಪ್ರಚಾರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ, ಲಿಂಗಾಯತ ಸಮುದಾಯದಲ್ಲಿ ನಿಜಲಿಂಗಪ್ಪ, ಎಸ್‌.ಆರ್‌.ಕಂಠಿ, ಜೆ.ಎಚ್‌.ಪಟೇಲ್‌ ಪ್ರಾಮಾ ಣಿಕ ಸಿಎಂ ಆಗಿದ್ದರು.

ಆದರೆ, ಸಿಎಂ ಬೊಮ್ಮಾಯಿ ಇಡೀ ರಾಜ್ಯಕ್ಕೆ ಕಳಂಕ ತಂದಿದ್ದಾರೆ. ಭ್ರಷ್ಟಸರ್ಕಾರ ನಡೆಸುತ್ತಿದ್ದಾರೆ ಎಂಬ ನನ್ನ ಹೇಳಿಕೆಯನ್ನು ಬಿಜೆಪಿಯವರು ತಿರುಚಿ ಅಪ ಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಬಸವಣ್ಣನವರು ನುಡಿದಂತೆ ನಡೆದಿದರು. ಅವರು ಹಾಕಿಕೊಟ್ಟಮಾರ್ಗದಲ್ಲಿ ನಾನೂ ನಡೆಯುತ್ತಿರುವೆ. ನಾನು ಅವರ ಅನುಯಾಯಿಯಾಗಿ ಬಸವ ತತ್ವ ಪಾಲನೆ ಮಾಡುತ್ತಿರುವೆ. ನಾನು ಯಾವತ್ತಿಗೂ ಸಾಮಾಜಿಕ ನ್ಯಾಯ ಪರಿಪಾಲನೆ ಮಾಡುವೆ ಎಂದರು.

130 ಸ್ಥಾನ ಗೆಲ್ಲುತ್ತೇವೆ: ರಾಜ್ಯದಲ್ಲಿ ಕಾಂಗ್ರೆಸ್‌ ಪರ ಅಲೆ ಇದೆ. ಯಾರು ಏನೇ ಹೇಳಲಿ, 130ಕ್ಕೂ ಅಧಿಕ ಸ್ಥಾನ ಪಡೆದು ಅಧಿಕಾರಕ್ಕೆ ಬರಲಿದ್ದೇವೆ. ಬಡವರ ಪರ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ನನ್ನ 40 ವರ್ಷಗಳ ರಾಜಕೀಯ ಅನುಭವದಲ್ಲಿ ಇಂಥ ಭ್ರಷ್ಟಸರ್ಕಾರವನ್ನು ನಾನೆಂದಿಗೂ ನೋಡಿಲ್ಲ. ವಿಧಾನಸೌಧದ ಗೋಡೆಗಳು ಕೂಡ ಲಂಚ, ಲಂಚ ಎಂದು ಪಿಸುಗುಡುತ್ತಿವೆ. ಬಸವರಾಜ ಬೊಮ್ಮಾಯಿಯಷ್ಟುಭ್ರಷ್ಟಮುಖ್ಯಮಂತ್ರಿಯನ್ನು ಕಂಡಿಲ್ಲ ಎಂದರು.

158 ಭರವಸೆ ಈಡೇರಿಕೆ: 2013ರಲ್ಲಿ 165 ಭರವಸೆಗಳನ್ನು ಕೊಟ್ಟಿದ್ದೆವು. ಅದರಲ್ಲಿ 158 ಭರವಸೆ ಈಡೇರಿಸಿದ್ದೇವೆ. ಜತೆಗೆ 30 ಜನಪರ ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ. ಈ ಹಿಂದೆ .158 ಕೋಟಿ ಖರ್ಚು ಮಾಡಿ ಜಾತಿ ಗಣತಿ ಮಾಡಿಸಿದ್ದೇವೆ. ಜಾತಿ ಗಣತಿ ಮೂಲಕ ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಗೊತ್ತಾಗಲಿದೆ. ಆ ವರದಿಯನ್ನು ಬಿಜೆಪಿ ಸರ್ಕಾರ ಅಂಗೀಕರಿಸಿಲ್ಲ. ಕುಮಾರಸ್ವಾಮಿಯವರೂ ಒಪ್ಪಿಲ್ಲ. ನಾವು ಅಧಿಕಾರಕ್ಕೆ ಬಂದರೆ, ಜಾತಿ ಗಣತಿ ಅಂಗೀಕರಿಸಿ, ಅದರ ಆಧಾರದ ಮೇಲೆ ಅಭಿವೃದ್ಧಿಪರ ಯೋಜನೆ ಜಾರಿ ಮಾಡುತ್ತೇವೆ ಎಂದರು.

ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಯಾರು ಎಷ್ಟೇ ವಿರೋಧ ಮಾಡಿದರೂ ಬಡವರ ಪರ ಕೆಲಸ ಮಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಹೇಳಿದರು, ಅಚ್ಛೇ ದಿನ್‌ ಆಯೆಗಾ ಅಂದ್ರು, ಅಚ್ಛೇ ದಿನ್‌ ಬಂತಾ.. ಮೋದಿ ಅವರು ದೇಶದ ಜನಕ್ಕೆ ಯಾಕ್‌ ಸುಳ್ಳು ಹೇಳಿದರು? ರೈತರ ಆದಾಯ ದುಪ್ಪಟ್ಟು ಮಾಡ್ತಿನಿ ಅಂದ್ರು, ಆದ್ರೆ ರೈತರು ಮಾಡಿದ ಸಾಲ ದುಪ್ಪಟ್ಟಾಯ್ತು, ರೈತರ ಒಂದು ರುಪಾಯಿ ಕೂಡ ಸಾಲ ಮನ್ನಾ ಮಾಡಲಿಲ್ಲ ಎಂದು ಆಕ್ರೊಶ ವ್ಯಕ್ತಪಡಿಸಿದರು.

ನ ಖಾನೆ ದೊಂಗಾ: ಮೋದಿ ಅವರು ಹೇಳಿದರು, ನ ಖಾವುಂಗಾ ನ ಖಾನೆ ದೊಂಗಾ ಎಂದು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು 40 ಪರ್ಸೆಂಟ್‌ ಕಮಿಷನ್‌ ಬಗ್ಗೆ ಪತ್ರ ಬರೆದರು. ರುಪ್ಸಾ ಸೇರಿ ಹಲವು ಸಂಸ್ಥೆಗಳು ಮೋದಿಗೆ ಪತ್ರ ಬರೆದಿವೆ. ಆದರೂ ಮೋದಿ ಕ್ರಮ ವಹಿಸಿಲ್ಲ. ಬಿಜೆಪಿ 40ರಿಂದ 50ರಷ್ಟುಕಮಿಷನ್‌ ಹೊಡೆಯಲಿಕ್ಕೆ ಬೊಮ್ಮಾಯಿಗೆ ಮೋದಿ ಅನುಮತಿ ಕೊಟ್ಟಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿರಾಜ್‌ ಶೇಖ್‌, ಹರಪನಹಳ್ಳಿ ಕಾಂಗ್ರೆಸ್‌ ಅಭ್ಯರ್ಥಿ ಅರಸಿಕೇರಿ ಕೊಟ್ರೇಶ, ಗುರುವಿನ ಕೊಟ್ರಯ್ಯ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಟವಾಳಗಿ ಕೊಟ್ರೇಶ, ಬಿ. ಹನುಮಂತಪ್ಪ, ಮಧುನಾಯ್ಕ, ದೂದಾನಾಯ್ಕ, ಟಿಎಪಿಸಿಎಂಎಸ್‌ ಅಧ್ಯಕ್ಷ ಪಾಟೀಲ್‌ ಬಸವನಗೌಡ, ಚುನಾವಣೆ ಉಸ್ತುವಾರಿ ಪರಿರ್ಣಿಕಾ ಸಿಂಧ್ಯಾ, ಜ್ಯೋತಿ ಮಹೇಂದ್ರ, ಬಿ.ವಿ. ಶಿವಯೋಗಿ, ಕೆ.ಎಂ. ಹಾಲಪ್ಪ, ವಸಂತ್‌, ಮಹೇಂದ್ರ, ಪಿ. ಟಿ. ಭರತ್‌, ಶಶಿಧರ ಪೂಜಾರ ಸೇರಿದಂತೆ ಇತರರಿದ್ದರು.

I am a follower of Basavanna not anti-Lingayat