ಚಿಕ್ಕಮಗಳೂರು:  ಶಿಕ್ಷಕರ ಸಮಸ್ಯೆಗಳ ಬಗ್ಗೆ ಅರಿವಿದ್ದು, ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ವಿಧಾನ ಪರಿಷತ್ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಕೆ.ಕೆ.ಮಂಜುನಾಥ್ ಕುಮಾರ್ ಮನವಿ ಮಾಡಿದರು.

ಗುರುವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ತಾವು ಕೂಡ ಶಿಕ್ಷಕರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದು, ಶಿಕ್ಷಕರ ಸಮಸ್ಯೆಗಳು ಏನೇನು ಎಂಬ ಅರಿವಿದೆ. ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ತಮ್ಮನ್ನು ಶಿಕ್ಷಕರು ಬೆಂಬಲಿಸಿ ಆಯ್ಕೆ ಮಾಡುವಂತೆ ವಿನಂತಿಸಿದರು.

೨೦೨೪ ಜೂನ್ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ಚುನಾವಣೆ ನಡೆಯಲಿದೆ. ಸದ್ಯ ಲೋಕಸಭೆ ಚುನಾವಣೆ ನಡೆಯು ತ್ತಿದ್ದು ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ವಾತಾವರಣ ನಿರ್ಮಾಣವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರ ಗೆಲುವಿನ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದರು.

ನೈರುತ್ಯ ಶಿಕ್ಷಕರ ಕ್ಷೇತ್ರ ೩೦ ಶಾಸಕರು ಹಾಗೂ ೫ ಸಂಸದರನ್ನು ಒಳಗೊಂಡಿದೆ. ಶಿಕ್ಷಕರು ಏನೇನು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆಂಬ ಅರಿವು ಇದೆ. ಕಾಂಗ್ರೆಸ್ ಪಕ್ಷ ತಮ್ಮನ್ನು ಶಿಕ್ಷಕರ ಕ್ಷೇತ್ರದಿಂದ ಅಭ್ಯರ್ಥಿಯೆಂದು ಗುರುತಿಸಿದ್ದು, ಈಗಾಗಲೇ ಪ್ರಚಾರ ಕಾರ್ಯವನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.

ಜೆಡಿಎಸ್ ಮತ್ತು ಬಿಜೆಪಿ ತಮ್ಮ ಅಧಿಕಾರಾವಧಿಯಲ್ಲಿ ಶಿಕ್ಷಕರಿಗೆ ಅನ್ಯಾಯ ಮಾಡಿದೆ. ಹಳೇ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಶಿಕ್ಷಕರ ಬದುಕು ಬೀದಿಗೆ ಬಂದು ನಿಲ್ಲುವಂತೆ ಮಾಡಿದೆ ಎಂದು ಆರೋಪಿಸಿದರು.

ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಎಸ್.ಎಲ್.ಭೋಜೇಗೌಡರು ಆರು ವರ್ಷಗಳ ಕಾಲ ಕಾಲಹರಣ ಮಾಡಿ ಶಿಕ್ಷಕರ ಕ್ಷೇತ್ರಕ್ಕೆ ಅನ್ಯಾಯ ಮಾಡಿದ್ದಾರೆ. ಹಳೇ ಪಿಂಚಣಿ ಯೋಜನೆಯನ್ನು ಮತ್ತೇ ಜಾರಿಗೆ ತರುವುದಾಗಿ ಆಶ್ವಾಸನೆ ನೀಡಿ ಗೆದ್ದು ಬಂದರು ಹಳೇ ಪಿಂಚಣಿ ಯೋಜನೆ ಜಾರಿಗೆ ಬಂದಿದೆಯೇ ಎಂದು ಪ್ರಶ್ನಿಸಿದರು.

ಶಿಕ್ಷಕರ ಸಮಸ್ಯೆಗಳಿಗೆ ಸ್ಪಂಧಿಸದ ಎಸ್.ಎಲ್.ಭೋಜೇಗೌಡರು ಚುನಾವಣೆಯಲ್ಲಿ ಸ್ಪರ್ಧಿಸುವ ನೈತಿಕತೆ ಇಲ್ಲ ಎಂದ ಅವರು ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳನ್ನು ಈ ಚುನಾವಣೆಯಲ್ಲಿ ಸೋಲಿಸುವಂತೆ ಮನವಿ ಮಾಡಿದ ಅವರು ಎಸ್.ಎಲ್.ಭೋಜೇಗೌಡರು ಚುನಾವಣೆಯಲ್ಲಿ ಗೆಲ್ಲಲು ಕುತಂತ್ರ ಮಾಡುತ್ತಿದ್ದಾರೆ. ನಮ್ಮ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆಂದು ಆರೋಪಿಸಿದರು.

ನಾನು ಸೈದ್ದಾಂತಿಕವಾಗಿ ಗಟ್ಟಿ ಇದ್ದೇನೆ. ಸೋಲುವ ಹತಾಶ ಭಾವನೆಯಿಂದ ಇಲ್ಲಸಲ್ಲದ ಆರೋಪಗಳನ್ನು ನನ್ನ ಮೇಲೆ ಮಾಡು ತ್ತಿದ್ದಾರೆ. ಶಿಕ್ಷಕರ ಕ್ಷೇತ್ರ ಪವಿತ್ರವಾದದ್ದು, ಆಮಿಷಗಳನ್ನು ಒಡ್ಡಿ ಶಿಕ್ಷಕರ ಕ್ಷೇತ್ರವನ್ನು ಹಾಳು ಮಾಡಬೇಡಿ ಎಂದ ಅವರು ಶಿಕ್ಷಕರು ಎಚ್ಚೇತ್ತುಕೊಂಡು ತಮ್ಮಗೆ ವಂಚಿಸಿದವರಿಗೆ ತಕ್ಕಪಾಠ ಕಲಿಸಬೇಕಿದೆ ಎಂದು ಹೇಳಿದರು.

ಶಿಕ್ಷಣ ವ್ಯವಸ್ಥೆ ದುಸ್ಥಿತಿಯಲ್ಲಿದೆ. ಶಾಲೆಗಳನ್ನು ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ. ಶಿಕ್ಷಕರ ನೇಮಕಾತಿಯಾಗುತ್ತಿಲ್ಲ. ಹೊಸ ಪಿಂಚಣಿ ಯೋಜನೆ ರದ್ದುಪಡಿಸಿ ಹಳೇ ಪಿಂಚಣಿ ಯೋಜನೆ ಮರು ಜಾರಿ, ಮುಂಬಡ್ತಿ ಶಿಕ್ಷಕರ ವೇತನ ಹೆಚ್ಚಳ ಸೇರಿದಂತೆ ಶಿಕ್ಷರ ಇತರೆ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಸಿ.ಶಿವಾನಂದಸ್ವಾಮಿ, ರೂಬೆನ್ ಮೊಸೆಸ್, ಸಿಲ್ವಸ್ಟರ್, ತನೋಜ್‌ಕುಮಾರ್. ಎಚ್.ಪಿ.ಮಂಜೇಗೌಡ ಸೇರಿದಂತೆ ಅನೇಕರು ಇದ್ದರು.

I will sincerely try to solve the problems of teachers