ಚಿಕ್ಕಮಗಳೂರು:   ಮಾಜಿ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಚಿಕ್ಕಮಗಳೂರು ಕ್ಷೇತ್ರದ ಅಭಿವೃದ್ದಿಗೆ ಏನು ಕೊಡುಗೆ ನೀಡಿದ್ದಾರೆ. ರಾಜ್ಯಮಟ್ಟದಲ್ಲಿ ಪ್ರಭಾವಿಯಾಗಿರುವ ಅವರು ಕ್ಷೇತ್ರಕ್ಕೆ ಎಷ್ಟು ಅನುದಾನ ತಂದಿದ್ದಾರೆಂದು ಬಹಿರಂಗ ಪಡಿಸಬೇಕು ಎಂದು ಬಿಜೆಪಿ ನಗರ ಮಂಡಲ ವಕ್ತಾರ ಸುಧೀರ್ ಸವಾಲು ಹಾಕಿದರು.

ಗುರುವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ೨೦೧೩ ರಿಂದ ೨೦೧೯ರ ವರೆಗೂ ಅವರ ಪಕ್ಷವೇ ಅಧಿಕಾರದಲ್ಲಿತ್ತು. ಅವರು ವಿಧಾನ ಪರಿಷತ್ ಸದಸ್ಯರಾಗಿದ್ದರು. ಕ್ಷೇತ್ರಕ್ಕೆ ಅವರ ಕೊಡುಗೆ ಏನು ಎಷ್ಟು ಅನುದಾನ ತಂದಿದ್ದಾರೆಂದು ಪ್ರಶ್ನಿಸಿದ ಅವರು, ೨೦೧೪ರಿಂದ ಸಿ.ಟಿ.ರವಿಯವರು ಜನಪ್ರತಿನಿಧಿಗಳ ನಿಯೋಗ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಗೆ ನಿಯೋಗ ಕೊಂಡೊಯ್ಯದರೇ ಬಿಡಿಗಾಸಿನ ಕಿಮ್ಮತ್ತು ನೀಡಲಿಲ್ಲ. ತಾವು ಕಾವೇರಿ ನಿವಾಸದಲ್ಲಿ ಇದ್ದರು ನಿಯೋಗದ ಜತೆ ಕೈಜೋಡಿಸದೆ ಕ್ಷೇತ್ರಕ್ಕೆ ಅಪಮಾನ ಮಾಡಿದ್ದೀರಿ ಎಂದು ದೂರಿದರು.

ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿರುವ ಹುಲಿಯನ್ನು ನೋಡಿ ಮಕ್ಕಳು ಬೆದರುತ್ತಿದ್ದಾರೆಂಬ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಅದು ಮೇಕ್ ಇನ್ ಇಂಡಿಯಾದ ಲಾಂಚನ ಸಿಂಹ ಹುಲಿಗೂ ಸಿಂಹಕ್ಕೂ ವ್ಯತ್ಯಾಸ ಗೊತ್ತಿಲ್ಲವೇ ಎಂದಿರುವ ಅವರು, ದೇಶದ ಮೇಕ್ ಇನ್ ಇಂಡಿಯಾ ಅರಿವು ಮೂಡಿಸಲು ಮಕ್ಕಳು ಹೆದರುವ ಪ್ರಶ್ನೆಯಿಲ್ಲ. ಕಾಂಗ್ರೆಸ್‌ನವರಿಗೆ ಮೋದಿಯೆಂಬ ಸಿಂಹದ ಭಯ ಶುರುವಾಗಿದೆ ಎಂದರು.

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ಸಿ.ಟಿ.ರವಿ ಅವರು ಸಾವಿರಾರು ಕೋಟಿ ರೂ. ಅನುದಾನವನ್ನು ತಂದಿದ್ದಾರೆ. ನೀರಾವರಿ, ರಸ್ತೆ, ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಮೆಡಿಕಲ್ ಕಾಲೇಜು, ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ, ಕೇಂದ್ರೀ ಯ ವಿದ್ಯಾಲಯ ಸೇರಿದಂತೆ ಅನೇಕ ಅಭಿವೃದ್ದಿ ಕಾರ್ಯಗಳನ್ನು ನಿರ್ವಹಿಸಿದ್ದಾರೆ ಎಂದು ತಿಳಿಸಿದರು.

ಸಿ.ಟಿ.ರವಿಯವರ ಮನೆ ಬೇಗ ನಿರ್ಮಾಣ ಆಯಿತು ಎಂಬ ಗಾಯತ್ರಿ ಶಾಂತೇಗೌಡ ಹೇಳಿಕೆಗೆ ತಿರುಗೇಟು ನೀಡಿದ ಅವರು, ಸಿ.ಟಿ.ರವಿ ಮನೆ ಕಟ್ಟಿ ೧೫ ವರ್ಷ ಕಳೆದಿದೆ. ಈ ವಿಚಾರ ಚರ್ಚೆ ಮಾಡುತ್ತಿರುವುದು ಹಾಸ್ಯಾಸ್ಪದ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕ ಎಚ್.ಡಿ.ತಮ್ಮಯ್ಯ ಅವರು ಮನೆ ಕಟ್ಟುತ್ತಿದ್ದಾರೆಂಬ ಮಾತುಗಳು ಸಾರ್ವಜನಿಕವಾಗಿ ಹರಿದಾಡುತ್ತಿದೆ. ಈ ವಿಚಾರ ಮುನ್ನಲೆಗೆ ಬರಲಿ ಎಂಬ ಉದ್ದೇಶ ತಮ್ಮ ಹೇಳಿಕೆಯಲ್ಲಿ ತಿಳಿಯುತ್ತಿದೆ ಎಂದರು.

ಚುನಾವಣೆಯಲ್ಲಿ ಅಭಿವೃದ್ದಿ ಆಧಾರಿತ ಚರ್ಚೆ ಆಗಬೇಕು. ವೈಯಕ್ತಿಕ ಹೇಳಿಕೆಗಳನ್ನು ನೀಡುತ್ತಾ ಜನರ ಗಮನ ಬೇರೆಡೆ ಸೆಳೆಯುವ ವ್ಯರ್ಥ ಪ್ರಯತ್ನವನ್ನು ಕಾಂಗ್ರೆಸ್ ಮುಖಂಡರು ಮಾಡುತ್ತಿದ್ದಾರೆ ಎಂದ ಅವರು ಬೆಂಗಳೂರಿನ ವಿದ್ಯಾರಣ್ಯಪುರ ದಲ್ಲಿ ರಾಮಭಕ್ತರ ಮೇಳೆ ನಡೆದಿರುವ ಘಟನೆಯನ್ನು ಖಂಡಿಸುತ್ತದೆ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಟಿಯಲ್ಲಿ ಪುಟ್ಟೇಗೌಡ, ಕಬೀರ್, ನಜೀರ್, ಜಗದೀಶ್, ಕೌಶಿಕ್ ಸೇರಿದಂತೆ ಅನೇಕರು ಇದ್ದರು

What contribution did Gayatri Shantegowda make to the development of Chikmagalur constituency?