‘ಇದೋ ವಾಗ್ದೇವಿಯ ಹರಕೆಯ ಶಿಶುವಾದ ನಿನಗೆ ಕೈ ಮುಗಿದು ನಮಸ್ಕರಿಸಿ ಬಿನ್ನವಿಸುತ್ತೇನೆ, ನನ್ನ ನಮಸ್ಕಾರಕ್ಕಾಗಿಯಾದರೂ ನಿನ್ನ ‘ಅಲ್ಪತೆ’ ತೊಲಗಲಿ; ನಿನ್ನ ಹೃದಯದಲ್ಲಿ ‘ಭೂಮಿ’ ಚೇತನ ಉದ್ದೀಪನವಾಗಿ ತೊಳಗಲಿ; ಕನ್ನಡ ನುಡಿ ದೀವಿಗೆಯಿಂದ ನಾಡ ಬಾಳು ಬೆಳಗಲಿ! ನನ್ನ ನಮಸ್ಕಾರದಿಂದ ನಿನ್ನ ಅಹಂಕಾರವಳಿದು ಅಲ್ಲಿ ದೇವತ್ವ ಸಂಚಾರವಾಗುತ್ತದೆಂದು ನಂಬಿ ಭಗವತಿ ಶ್ರೀ ಸರಸ್ವತಿಯ ಈ ಹರಕೆಯನ್ನು ನಿನ್ನಲ್ಲಿ ಬಿನ್ನವಿಸುತ್ತಿದ್ದೇನೆ.

ಹೇ ರಾಜಕಾರಣಿ, ಹೇ ಮಂತ್ರಿವರೇಣ್ಯ, ಹೇ ಅಧಿಕಾರಿ ಸರ್ವೋತ್ತಮ, ಹೇ ವಣಿಗ್ವರ, ಹೇ ಶ್ರಮಜೀವಿ, ಹೇ ಅಧ್ಯಾಪಕ ಮಹಾಶಯ, ಹೇ ನೇಗಿಲಯೋಗಿ, ಹೇ ಪ್ರಿಯವಿದ್ಯಾರ್ಥಿ, ನೀನು ಯಾರೇ ಆಗಿರು, ಎಲ್ಲಿಯೇ ಇರು, ಕನ್ನಡವನು ಕೈ ಬಿಡದಿರು.

ನಾಳೆ ಎಂದರಾಗದು; ಮುಂದೆ ಎಂದರಾಗದು; ಇಂದೆ ನೀನು ನಿರ್ಣಯಿಸಬೇಕು. ಇಂದೆ ಎತ್ತಿ ಪೊರೆಯಬೇಕು. ಬೆಂಕಿಗೆ ಬಿದ್ದವರನ್ನು ನಾಳೆ ಎತ್ತುತ್ತೇನೆಂದರೆ ದೊರೆಯುವುದೇನು? ಬೂದಿ! ನೀರಿಗೆ ಬಿದ್ದವರನನ್ನು ನಾಳೆ ಎತ್ತುತ್ತೇನೆಂದರೆ ಲಭಿಸುವುದೇನು? ಹೆಣ!
ಇದು ನಿನ್ನ ಭಾಷೆ … ಸಾವಿರಾರು ವರ್ಷಗಳ ಸುಪುಷ್ಟ ಸಾಹಿತ್ಯ ಭಾಷೆ. ಇದು ಮಹಾಕವಿಗಳನ್ನೂ ಶಿಲ್ಪಿಗಳನ್ನೂ ರಾಜಾಧಿರಾಜರನ್ನೂ ವೀರಾಧಿವೀರರನ್ನೂ ರಸಋಷಿ ದಾರ್ಶನಿಕರನ್ನು ಹಡೆದಿರುವ ಭಾಷೆ !… ಅನ್ಯಮೋಹಕ್ಕೆ ಇಂದು ಅವಕಾಶವಿಲ್ಲ. ಮೀನಮೇಷಕ್ಕೆ ಇದು ಸಮಯವಲ್ಲ, ಧೈರ್ಯವಿರಲಿ, ಶ್ರದ್ಧೆಯಿರಲಿ; ಮನಸ್ಸು ಚಂಚಲವಾಗದಿರಲಿ!..’

‘ಕನ್ನಡಿಗರೆ, ಎಚ್ಚರಗೊಳ್ಳಿ!’ ಎಂಬ ದೇಜಗೌ ಪುಸ್ತಕಕ್ಕೆ ಶ್ರೀ ಕುವೆಂಪು ದಿ. 20-03-51 ರಲ್ಲಿ ಬರೆದ ಈ ಮುನ್ನುಡಿಯಲ್ಲಿ ಕನ್ನಡದ ಬಗೆಗಿನ ಅವರ ಭಾವಲಹರಿಯೆಲ್ಲ ಮಡುಗಟ್ಟಿವೆ.

‘ಕನ್ನಡ ಎನೆ ಕುಣಿದಾಡುವುದೆನ್ನೆದೆ; ಕನ್ನಡ ಎನೆ ಕಿವಿ ನಿಮಿರುವುದು. ಕಾಮನಬಿಲ್ಲನು ಕಾಣುವ ಕವಿಯೊಲು ತೆಕ್ಕನೆ ಮನ ಮೈ ಮರೆಯುವುದು’ ಎಂದು ಹಾಡಿ ನಲಿದ ಶ್ರೀ ಕುವೆಂಪು ತಮ್ಮ ಕಾವ್ಯ ಜೀವನವನ್ನು ಇಂಗ್ಲಿಷ್‌ ನಿಂದ ಆರಂಭಿಸಿದರು! ಪ್ರಾರಂಭದಲ್ಲಿ ಅವರಿಗೂ ಕನ್ನಡ ಕಾವ್ಯದ ಮೇಲೆ ಉದಾಸೀನವಿತ್ತು. ಐರೀಷ್ ಕವಿ ಜೇಮ್ಸ್ ಕಸೀನ್ಸ್ ರವರ ಪ್ರಭಾವದಿಂದ ಅವರು ಕನ್ನಡದಲ್ಲಿ ಬರೆಯಲಾರಂಭಿಸಿದರು ಎಂಬ ವಿಚಾರ ಬಹತೇಕ ಎಲ್ಲರಿಗೂ ತಿಳಿದಿದೆ. 1924ರಲ್ಲಿ, ಅವರ ಇಪ್ಪತ್ತನೇ ವಯಸ್ಸಿನಲ್ಲಿ ಅದು ಆಗಿದ್ದು ಹೇಗೆಂಬುದನ್ನು ಶ್ರೀ ಕುವೆಂಪು ಅವರೇ ತಮ್ಮ ಒಂದು ಭಾಷಣದಲ್ಲಿ ಹೀಗೆ ವಿವರಿಸಿದ್ದಾರೆ:

‘ನನ್ನ ವಿದ್ಯಾರ್ಥಿದೆಸೆಯಲ್ಲಿ ಕನ್ನಡವೆಂಬುದು ಏನೋ ಪರೀಕ್ಷೆಗಾಗಿ ಓದುವ ಒಂದು ವಿಷಯವಾಗಿತ್ತು. ನನ್ನ ಅಭಿಮಾನವೆಲ್ಲಾ ಇಂಗ್ಲಿಷಿಗೆ ಮೀಸಲಾಗಿತ್ತು. ಬಹುಶಃ ನಿಮಗಾರಿಗೂ ಎಂದೂ ಇಲ್ಲದೇ ಇರುವಷ್ಟು ತಿರಸ್ಕಾರ ಅಥವಾ ಉದಾಸೀನವಿತ್ತು ನನಗೆ ಕನ್ನಡದ ಮೇಲೆ. ಹೈಸ್ಕೂಲು ಮೊದಲನೆಯ ತರಗತಿಯಿಂದ ಮೊದಲ ವರ್ಷದ ಬಿ.ಎ ಮುಗಿಯುವವರೆಗೆ ಇಂಗ್ಲಿಷ್ ಕವಿಯಾಗಬೇಕೆಂದು ನಾನು ಭ್ರಮಿಸಿದ್ದೆ. ಇಂಗ್ಲಿಷ್ ನಲ್ಲಿಯೆ ಕವಿತೆಗಳನ್ನು ಬರೆಯಲು ಪ್ರಾಂರಭಿಸಿ ಹೈಸ್ಕೂಲಿನ ಕಡೆಯ ತರಗತಿಯಲ್ಲಿ ಓದುವ ವೇಳೆಗೆ ‘Biginners muse’ ಎಂಬ ಹೆರಿನ ಇಂಗ್ಲಿಷ್ ಕವನ ಸಂಗ್ರಹವೊಂದನ್ನು ಅಚ್ಚು ಹಾಕಿಸಿದೆ. ಆ ಕವನಗಳೆಲ್ಲ ಕೇವಲ ಅನುಕರಣದ ಕವನಗಳು. ಮಿಲ್ಟನ್, ವರ್ಡ್ಸ್ ವರ್ತ್, ಷೆಲ್ಲಿ- ಮೊದಲಾದ ಕವಿಗಳಿಂದ ಮತ್ತು ಬ್ಯಾಲೆಡ್ ಕವನಗಳಿಂದ ಭಾವಗಳನ್ನು ಎತ್ತಿಕೊಂಡು ರಚಿಸಿದ ಕವನಗಳು. . . . ಇಷ್ಟೇ ಅಲ್ಲ, ನಮ್ಮ ಸ್ವಂತ ಆಸ್ತಿಯಾದ ವೇದ ಉಪನಿಷತ್ತು, ದರ್ಶನಗಳನ್ನೂ ಇಂಗ್ಲಿಷ್ ಮುಖಾಂತರವಾಗಿಯೇ ನಾನು ಅಧ್ಯಯನ ಮಾಡಿದ್ದು. ನಾನು ಅದೇ ದಿಕ್ಕಿನಲ್ಲಿ ಅದೇ ದಾರಿಯಲ್ಲಿ ಮುಂದುವರೆದಿದ್ದರೆ ಏನಾಗುತ್ತಿತ್ತೋ!

ನನ್ನ ದಾರಿ ದಿಕ್ಕುಗಳನ್ನು ಬದಲಿಸಿದವರು ಒಬ್ಬ ಐರಿಷ್ ಕವಿ ಕಸಿನ್ಸ್ ಅವರು. ಅವರು ಮೈಸೂರಿಗೆ ಬಂದಿದ್ದಾಗ ನನ್ನ ಅಧ್ಯಾಪಕರೊಬ್ಬರ ಪ್ರಚೋದನೆಯಂತೆ ನನ್ನ ಇಂಗ್ಲಿಷ್ ಕವನಗಳನ್ನು ಅವರಿಗೆ ತೋರಿಸಿದೆ. ಅವರು ಆ ಕವನಗಳನ್ನೆಲ್ಲ ಓದಿ, ನನ್ನ ಖಾದಿ ಉಡುಪನ್ನು ಅಮೂಲ ಚೂಲವಾಗಿ ಗಮನಿಸಿ, “ಉಡುಪು ಖಾದಿ, ಕವನ ಇಂಗ್ಲಿಷ್ ಹೀಗೇಕೆ? ನಿಮ್ಮ ಭಾಷೆ ಇಲ್ಲವೇ? ಅದರಲ್ಲಿ ಬರೆಯಲಾಗುವುದಿಲ್ಲವೇ?” ಎಂದು ಕೇಳಿದರು. ಪ್ರಶಂಸೆಯನ್ನು ಕೇಳಲು ಹೋಗಿದ್ದ ನನಗೆ ಅವರ ಟೀಕೆ ಸರಿದೋರಲಿಲ್ಲ. ಅವರನ್ನು ಒಬ್ಬ ‘ಆಂಗ್ಲ ಕಾಂಗ್ರೆಸ್ ವ್ಯಕ್ತಿ’ ಯೆಂದು ಗೊಣಗಿಕೊಂಡು, ‘ಇಂಥ ಗಹನ ವಿಚಾರಗಳನ್ನು ಕನ್ನಡದಲ್ಲಿ ಹೇಳುವುದು ಅಸಾಧ್ಯ. ಅದರ ಛಂದಸ್ಸಿನಲ್ಲಿ ಯಾವ ವೈವಿಧ್ಯವೂ ಇಲ್ಲ’ ಎಂದೆ. ಅವರು ಒಂದೇ ಮಾತು ಹೇಳಿದರು; ’ಕನ್ನಡದಲ್ಲಿ ಏನಿದೆಯೋ ನನಗೆ ಗೊತ್ತಿಲ್ಲ; ಆದರೆ ಬಂಗಾಳಿಯನ್ನು ಕುರಿತು ಹೇಳುವುದಾದರೆ, ಹಿಂದೆ ಇಲ್ಲದುದನ್ನು ಇಂದು ಅವರು ಸೃಷ್ಟಿಸಿಕೊಂಡಿದ್ದಾರೆ. ರವೀಂದ್ರನಾಥ ಠಾಕೂರರು ಛಂದಸ್ಸಿನ ವೈವಿಧ್ಯದಲ್ಲಿ ಇಂಗ್ಲಿಷನ್ನು ಮೀರಿಸಿದ್ದಾರೆ. ನೀವೂ ಹಾಗೆ ಮಾಡಬೇಕು’ ಎಂದರು.

ನಾನು ಅದೆಲ್ಲಾ ಅಸಾಧ್ಯವೆಂದುಕೊಂಡು ಕೇವಲ ನಿರಾಶೆಯಿಂದ ಹೊರಗೆ ಬಂದೆ. ಬರುವ ದಾರಿಯಲ್ಲಿ ಕಸಿನ್ಸ್ ಅವರ ಹೇಳಿಕೆಯ ಪರಿಣಾಮವಾಗಿಯೋ ಅಥವಾ ಅದರಿಂದ ನನ್ನ ಮನಸ್ಸಿನ ಮೇಲಾದ ಪರಿಣಾಮದಿಂದಲೋ ಒಂದು ಕನ್ನಡ ಹಾಡು ನನ್ನ ಮನದಲ್ಲಿ ಮೂಡಿ ಬಂದಿತು. ಆ ಹಾಡನ್ನು ನನ್ನ ಕೊಠಡಿಯಲ್ಲಿದ್ದ ಸಹಪಾಠಿ ರಾಗವಾಗಿ ಹಾಡಿದರು. ಆಗ ನನಗನಿಸಿತು, ಇಂಗ್ಲಿಷ್‌ನಲ್ಲಿ ಹಾಡುವುದಕ್ಕಾಗುವುದಿಲ್ಲ. ರಾಗವಾಗಿ ಓದುವುದಕ್ಕೂ ಆಗುವುದಿಲ್ಲ. ಕನ್ನಡದಲ್ಲಿ ಬರೆದರೆ ಈ ಎರಡೂ ಉಂಟು ಎಂದು. (ಕು.ಸ.ಗ ಸಂ; ಪು:222)

ಈ ಘಟನೆಯ ನಂತರ ಶ್ರೀ ಕುವೆಂಪು ಕನ್ನಡಕ್ಕೆ ಮುಡಿಪಾದರು, ಕನ್ನಡದ ದೀಕ್ಷೆ ತೊಟ್ಟರು, ಕನ್ನಡತನಕ್ಕಾಗಿ ತಮ್ಮನ್ನು ಪೂರ್ಣ ಸಮರ್ಪಿಸಿಕೊಂಡರು. ಅವರ ಬೌದ್ಧಿಕ ಮತ್ತು ಮಾನಸಿಕ ವ್ಯಾಪಾರಗಳಲ್ಲೆಲ್ಲಾ ಪೂರ್ಣವಾಗಿ ಆವರಿಸಿಕೊಂಡ ಕನ್ನಡತನದ ಸೊಗಸು ನೂರ್ಮಡಿಯಾಗಿ ಮಹಾಕಾವ್ಯ, ಮಹಾ ಕಾದಂಬರಿಗಳು, ಅಪೂರ್ವ ನಾಟಕಗಳು, ಖಂಡಕಾವ್ಯಗಳು, ಅಸಂಖ್ಯ ಭಾವಗೀತೆಗಳು, ಮಂತ್ರಾಕ್ಷತೆಗಳು ರೂಪುಗೊಂಡು ಕನ್ನಡ ರಾಜ ರಾಜೇಶ್ವರಿಗೆ ನೈವೇದ್ಯವಾದುವು. ಶ್ರೀ ಕುವೆಂಪುರವರು ತಮ್ಮ ಅರ್ಧ ಶತಮಾನದ ತಪಶ್ಯಕ್ತಿಯನ್ನು ಕನ್ನಡ ನಾಡು ನುಡಿಗಳ ಹಿರಿಮೆಯನ್ನು ಉನ್ನತೀಕರಿಸಲು ಧಾರೆ ಎರೆದರು. ಸಾಹಿತ್ಯ ಮಾತ್ರವಲ್ಲ, ತಮ್ಮ ಭಾಷಣಗಳಲ್ಲಿ, ಸಂದರ್ಶನಗಳಲ್ಲಿ, ಪತ್ರಗಳಲ್ಲಿ ಕನ್ನಡದ ಅಪಾರಶಕ್ತಿ ಸಾಮಥ್ಯಗಳನ್ನು ಘಂಟಾಘೋಷನಾಗಿ ಸಾರಿದರು. ಕಡೆಗೆ ಅವರ ಅಭಿಮಾನ ‘ಕನ್ನಡ ಎನೆ ಕುಣಿದಾಡುವುದೆನ್ನದೆ, ಕನ್ನಡ ಎನೆ ಕಿವಿ ನಿಮಿರುವುದು, ಕಾಮನಬಿಲ್ಲನು ಕಾಣುವ ಕವಿಯೊಲು ತೆಕ್ಕನೆ ಮನ ಮೈ ಮರೆಯುವುದು’ ಎಂದು ಹಾಡಿ ಕುಣಿದು,

‘ಬಾಳುವುದೇತಕೆ/ ನುಡಿ ಎಲೆ ಜೀವ,
ಸಿರಿಗನ್ನಡದಲಿ ಕವಿತೆಯ ಹಾಡೆ!
ಸಿರಿಗನ್ನಡದೇಳಿಗೆಯನು ನೋಡೆ!
ಕನ್ನಡ ತಾಯಿಯ ಸೇವೆಯ ಮಾಡೆ!’

ಎನ್ನುವ ಮಟ್ಟಕ್ಕೆ ಬೆಳೆಯಿತು. ತಮ್ಮ ಬಾಳಿರುವುದೇ ಸಿರಿಗನ್ನಡದಲ್ಲಿ ಕವಿತೆಯನ್ನು ಹಾಡಿ, ಸಿರಿಗನ್ನಡದ ಏಳಿಗೆಯನ್ನು ನೋಡಿ, ಕನ್ನಡ ತಾಯಿಯ ಸೇವೆಯನ್ನು ಮಾಡಲು ಎಂಬ ದೃಢನಿರ್ಧಾರ ಅವರದಾಗಿ ಅಂತೆಯೇ ಜೀವ ಜೀವನದ ಪ್ರತೀಕ್ಷಣವನ್ನು ಕನ್ನಡಕ್ಕೆ ಮುಡಿಪಿಟ್ಟರು. ಈ ಕಾರಣದಿಂದಲೇ ಅವರಿಗೆ ಮನೆಯ ಅಂಗಳದಲ್ಲಿ ಬೆಳೆದ ಡಾಲಿಯಾ ಹೂವೂ ಶ್ರೀ ರಾಜರಾಜೇಶ್ವರಿಯ ರಾಗ ಭೋಗಾಲಯದ ಸೌಂದರ್ಯ ಗೋಪುರದಂತೆ ಕಾಣಿಸುತ್ತದೆ. ಚಿರಂತನೆಯಾದ ರಾಜೇಶ್ವರಿಯು ತನ್ನ ಮಕ್ಕಳಿಗಾಗಿ ನಶ್ವರಾವತಾರವನ್ನು ಎತ್ತಿ ಕವಿಯ ಮೂಲಕ ಸಹೃದಯರನ್ನು ಮುಟ್ಟುತ್ತಿದ್ದಾಳೆನಿಸುತ್ತದೆ. ‘ಸಿರಿಗನ್ನಡದ ಕಬ್ಬಗಳ ಹಬ್ಬಗಳು ದಿನದಿವೂ ಸವಿಯೂಟವಿಕ್ಕುವ’ ತಾಣ, ಅದು ನರಕವಾದರೂ ಸರಿ ಕವಿ ತುಂಬು ಸಂತೋಷದಿಂದ ಅಲ್ಲಿ ಕಾಲ ಕಳೆಯಬಯಸುತ್ತಾರೆ. ಅವರ ಕನ್ನಡ ಕವನಗಳ ಯಶಸ್ವಿ ವ್ಯಾಪ್ತಿ ಲಂಡನ್ನಿನಲ್ಲಿ ತುತ್ತೂರಿ ಊದುವುದು ಅವರಿಗೆ ಈಗ ಬೇಡವಾಗಿದೆ. ಬಳಿಯಲ್ಲೇ ಇರುವ ವೆಂಕಣ್ಣಯ್ಯ, ಶ್ರೀಕಂಠಯ್ಯ, ಕಸ್ತೂರಿ, ಮಾಸ್ತಿ ಇಂಥವರು ಮೆಚ್ಚಿದರೆ ಸಾಕು ಕವಿಗೆ ಪರಮ ತೃಪ್ತಿ. ಕನ್ನಡದ ಬಗ್ಗೆ ಅವರ ಕವನ ‘ಓ ನನ್ನ ಕನ್ನಡವೆ’ ಅವರ ಆ ಸಮಯದ ವೇದನೆಗೆ ನುಡಿರೂಪದ ಸಾಕ್ಷಿಯಾಗಿದೆ;

‘ಕನ್ನಡದ ಕಬ್ಬದಲಿ ರಸವುಕ್ಕುತಿಲ್ಲ;
ಕನ್ನಡದ ಕಬ್ಬಿಗರು ಬರಿಯರೆಗಳಂತೆ
ಎರರ ಕೊಳಲಿನ ದನಿಯ ಬೀರುತಿಹರಂತೆ;
ಕನ್ನಡಕೆ ಕೊರಳಿಲ್ಲ; ಹುರುಳು ತಿರುಳಿಲ್ಲ;
ಬೆಳಕಿಲ್ಲ; ಜೀವನದ ಹುರುಪೆಂಬುದಿಲ್ಲ
ಎಂಬುದನ್ನು ಕೇಳೆದೆಗಲುಗಿಕ್ಕಿದಂತೆ
ಬಾಳು ಬಾಯಾರುವುದು; ಮೂಡುವುದು ಚಿಂತೆ’

ಆ ಸಂದರ್ಭದಲ್ಲಿ ಕನ್ನಡದ ಬಗೆಗಿದ್ದ ಸಾರ್ವಜನಿಕ ತಿರಸ್ಕಾರಕ್ಕೆ ಕನ್ನಡಿ ಹಿಡಿಯುವ ಈ ಕವನದಲ್ಲಿ ಕವಿವೇದನೆಯೂ ಅಡಕವಾಗಿದೆ. ಕನ್ನಡ ಕಾವ್ಯದಲ್ಲಿ ರಸವೆಂಬುದೇ ಇಲ್ಲ, ಕನ್ನಡ ಕವಿಗಳಲ್ಲಿ ಸ್ವಂತಿಕೆ ಎಂಬುದಿಲ್ಲ, ಕನ್ನಡದಲ್ಲಿ ಹುರುಳು, ತಿರುಳುಗಳಿಲ್ಲ, ಗಟ್ಟಿದ್ವನಿಯಿಲ್ಲ, ಬೆಳಕೂ ಇಲ್ಲ; ಜೀವನದ ಹುರುಪು ಇಲ್ಲ ಎಂಬ ಎಲ್ಲಾ ಭಾವಗಳೂ ಆಗಿನ ಕಾಲಮಾನದಲ್ಲಿ ಸತ್ಯಸ್ಯ ಸತ್ಯವಾಗಿತ್ತು. ಬೇರೆಯವರೆಲ್ಲಾ ಏಕೆ, ಸ್ವತಃ ಕುವೆಂಪು ಅವರೇ ನಾಲ್ಕು ವರ್ಷಗಳ ಕೆಳಗೆ ಇದೇ ಭಾವ ಭಾವನೆಗಳಿಗೆ ನೆಲೆಬೀಡೂ ಆಗಿದ್ದರು. ಆದರೆ ಈಗ ಅವರ ಒಳಗಣ್ಣು ತೆರೆದಿತ್ತು . ಕನ್ನಡ ಭಾಷೆಯ ಶಕ್ತಿ ಸತ್ವಗಳ ಅರಿವಾಗಿತ್ತು. ಕನ್ನಡ ಸಾಹಿತ್ಯದ ಮಹತ್ವಪೂರ್ಣ ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡಿ ನೃಪತುಂಗ, ಪಂಪ, ರನ್ನ, ಬಸವಣ್ಣ, ಕುಮಾರವ್ಯಾಸ, ಲಕ್ಷ್ಮೀಶ, ರತ್ನಾಕರವರ್ಣಿಯರಂತಹ ಶ್ರೇಷ್ಠ ಕನ್ನಡದ ಕವಿಪುಂಗವರ ದರ್ಶನವನ್ನು ಪಡೆದ ಸಾರ್ಥಕತೆ ಇತ್ತು. ಈಗ ಕನ್ನನಡದಲ್ಲಿ ಹುರುಳಿಲ್ಲ, ತಿರುಳಿಲ್ಲ, ಬೆಳಕಿಲ್ಲ, ಜೀವನದ ಹುರುಪಿಲ್ಲ ಎಂಬ ಮಾತು ಕೇಳಿದ ಅವರ ಎದೆಯಲ್ಲಿ ಕತ್ತಿಯಿಂದ ಇರಿದಂತೆ ನೋವಾಗುತ್ತಿದೆ. ಆ ನೋವಿನ ಆಳದಿಂದಲೇ ಘೋಷಿಸುತ್ತಾರೆ:

‘ಕನ್ನಡಾಂಬೆಯ ಮಗನು, ಕನ್ನಡಿಗ ನಾನು!
ತಾಯ ನಿಂದೆಯ ಕೇಳಿ ನಡುಗುವುದು ಹೆಮ್ಮೆ!
ಪಂಪರನ್ನರ ಹೆತ್ತ ನುಡಿಗೆ ಕುಂದೇನು?
ಕವಿ ಚಕ್ರವರ್ತಿಗಳು ಬರುವರಿನ್ನೊಮ್ಮೆ!
ಸರಸ್ವತಿಯೆ ಕನ್ನಡಿಗನಾಸೆಯಿಂದ ಸಲ್ಗೆ!
ನನ್ನಮ್ಮ, ತಾಯೆ, ಸಿರಿಗನ್ನಡಂ ಬಾಳ್ಗೆ!

‘ಪಂಪರನ್ನರ್, ಕುಮಾರವ್ಯಾಸ. ಲಕ್ಷ್ಮೀಶ, ಹರಿಹರಾದಿಗಳುಸಿರ್ ನಮ್ಮೊಳಿರ್ಪನ್ನೆಗಂ ಆಳುಕದೀ ಕನ್ನಡಂ’ ಎಂದು ಹಿರಿಹೆಮ್ಮೆಯಿಂದ ಸಾರುತ್ತಾರೆ. ಇಂದು ಕವಿ ಕಾಣ್ಕೆ ಸತ್ಯವಾಗಿದೆ. ಪಂಪರನ್ನರನ್ನು ಹೆತ್ತ ನುಡಿ ಮುಂದೆಯೂ ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಹಿರಿಮೆಯ ಬಾಳನ್ನು ಬಾಳಿದೆ. ಆದರೆ, ಆಗಿನ ಕನ್ನಡದ ದುಃಸ್ಥಿತಿಗೆ ಕಾರಣವೇನಿರಬಹುದು? ಕವಿ ಹೇಳುತ್ತಾರೆ;

‘ಸಾಯುತಿದೆ ನಿಮ್ಮ ನುಡಿ, ಓ ಕನ್ನಡದ ಕಂದರಿರ!
ಹೊರನುಡಿಯ ಹೊರೆಯಿಂದ ಕುಸಿದು ಕುಗ್ಗಿ!
ರಾಜನುಡಿಯೆಂದೊಂದು, ರಾಷ್ಟ್ರನುಡಿಯೆಂದೊಂದು,
ದೇವನುಡಿಯೆಂದೊಂದು ಹತ್ತಿ ಜಗ್ಗಿ
ನಿರಿನಿಟಿಲು ನಿಟಿಲೆಂದು ಮುದಿ
ಕನ್ನಡಮ್ಮನ ಬೆನ್ನು ಬಳುಕಿ ಬಗ್ಗಿ!’

ಬ್ರಿಟೀಷರು ನಾಡನ್ನಾಳುವಾಗ ರಾಜನುಡಿಯಾಗಿದ್ದ ಇಂಗ್ಲಿಷ್ ಅವರು ನಾಡನ್ನು ಬಿಟ್ಟು ತೆರಳಿದ ಮೇಲೆ ಕೂಡ ಅದೇ ಹಿರಿಮೆ ಉಳಿಸಿಕೊಂಡು ಅಥವಾ ಹೆಚ್ಚು ಗಳಿಸಿಕೊಂಡು ನಮ್ಮ ದಾಸ್ಯತ್ವಕ್ಕೆ ಸಂಕೇತವಾಗಿ ಉಳಿದಿದೆ. ಇನ್ನು ರಾಷ್ಟ್ರನುಡಿ ಹಿಂದಿ, ದೇವ ನುಡಿ ಸಂಸ್ಕೃತ. ಈ ಮೂರು ಭಾಷೆಗಳಿಗೆ ಪ್ರಾಧಾನ್ಯತೆ ಸಿಕ್ಕುತ್ತಾ ಹೋದ ಹಾಗೆ ಕನ್ನಡ ಈ ಹೊರನುಡಿಗಳ ಹೊರೆಯಿಂದ ಕುಸಿದು ಕುಗ್ಗಿ ಸಾಯುವ ಹಂತವನ್ನು ಅಕ್ಷರಶಃ ತಲುಪಿತ್ತು. ಕನ್ನಡಿಗರಿಗೇ ಕನ್ನಡ ಕಲಿಯಲು, ಕನ್ನಡ ಮಾಧ್ಯಮದಲ್ಲಿ ಓದಲು, ಮಕ್ಕಳನ್ನು ಓದಿಸಲು ತಿರಸ್ಕಾರ. ಕನ್ನಡದಲ್ಲಿ ಭವಿಷ್ಯವಿಲ್ಲ ಎಂಬ ತೀರ್ಮಾನ. ನಮ್ಮಲ್ಲಿ ಏನೂ ಇಲ್ಲವಾದರೂ ಹೊಟ್ಟೆ ಬಟ್ಟೆ ಕಟ್ಟಿಯಾದರೂ ಕಾನ್ವೆಂಟ್ ಶಿಕ್ಷಣ ನೀಡಿಸಬೇಕೆಂಬ ಹಪಹಪಿಕೆ.

‘ಇರುವಲ್ಪ ಶಕ್ತಿಯನು ಇರುವಲ್ಪ ದ್ರವ್ಯವನು
ಪರಭಾಷೆ ಮೋಹಕ್ಕೆ ಚೆಲ್ಲ ಬೇಡಿ ;
ಹೂಮಾಲೆ ಸೂಡುವೆವು ಕೊರಳಿಂಗೆ ಎಂದೆನುತೆ
ನೇಣುರುಳನೆಳೆದಯ್ಯೊ ಕೊಲ್ಲಬೇಡಿ.’

ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳಿಗಿಂತ ಆಂಗ್ಲ ಮಾಧ್ಯಮದ ಮಕ್ಕಳು ಸಹಜವಾಗಿ ಕಲಿಯಬಹುದಾದುದನ್ನು ವಿಪರೀತ ಶ್ರಮ ವಹಿಸಿ ಕಲಿಯಬೇಕಾಗಿದೆ. ಈ ಮಕ್ಕಳಲ್ಲಿ ಹೆಚ್ಚಿನವರು ಬಾಲ್ಯದ ಆಟಪಾಠಗಳಿಂದ ವಂಚಿತರಾಗುತ್ತಿದ್ದಾರೆ. ಕ್ರೀಡಾಸಕ್ತಿ ಕಡಿಮೆಯಾಗುತ್ತಿದೆ. ಶಾಲೆ, ಮನೆ, ಹೋ ವರ್ಕ್ ಎಂಬ ವಿಷವರ್ತುಲ ಅವರ ಬಾಲ್ಯವನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಇದು ಮಕ್ಕಳಿಗೆ ನಾವು ಹೂಮಾಲೆ ಹಾಕುತ್ತಿದ್ದೇವೆ ಎಂಬ ಭ್ರಮೆಯಿಂದ ಹಾಕುತ್ತಿರುವ ನೇಣು. ಈ ಇಂಗ್ಲಿಷಿನ ಮರುಭೂಮಿಯಲ್ಲಿ ನಮ್ಮ ಮಕ್ಕಳ ಶಕ್ತಿ, ಬುದ್ದಿ ಪ್ರತಿಭೆಗಳು ಇಂಗಿ ಹೋಗುತ್ತಿವೆ. ಕಿರುಕುಂಡದಲ್ಲಿ ನೆಟ್ಟ ಅಶ್ವಥ್ಥದ ಸಸಿಯಂತೆ ಅವರ ಚೈತನ್ಯ ಮುದುರಿಕೊಂಡು ಗುಜ್ಜಾಗುತ್ತಿದೆ. ಮಕ್ಕಳ ನೈಜ ಸಮಸ್ಯೆ ಅರಿಯದೆ ಎಲ್ಲೋ ಕುಳಿತ ಶಿಕ್ಷಣತಜ್ಞರು ರೂಪಿಸುವ ಸೂತ್ರಗಳು ತ್ರಿಶೂಲದಂತೆ ಚುಚ್ಚುತ್ತಿವೆ. ಚೂರು ತಿಂಡಿಗೆ ಸಿಕ್ಕಿಸಿದ ಗಾಳದಂತೆ ಮಕ್ಕಳ ಪ್ರಾಣ ಹಿಂಡುತ್ತಿವೆ.

‘ಕಂದ ಕನ್ನಡನಿವನು ಕೈ ಬಿಡದಿರಮ್ಮಾ,
ನೊಂದು ಬಂದಿಹನು ಹಾಲೂಡಿ ಪೊರೆಯಮ್ಮ.
ಕಂದಗಲ್ಲವೆ ಮೊದಲ ಪಾಳಿ ನಿನ್ನೆದೆಗಮ್ಮ?
ಕಂದನಗಲ್ಲವೆ ನಿನ್ನ ಜೀವದಾನಂದವಮ್ಮಾ?
ಕಂದನನು ತೊರೆದನ್ಯರಾ ಮಗುವ ಮೋಹ ಮಾಡಿ
ಕಂದನೆಂದರೆ ಕರುಳು ನೋಯದೇ ಹೇಳಮ್ಮಾ?’

ಕನ್ನಡವೇ ಕನ್ನಡಿಗರನ್ನು ತಾಯಿ ಎಂದು ಸಂಬೋಧಿಸುತ್ತಾ ತನ್ನನ್ನು ತಿರಸ್ಕರಿಸುವುದು ಬೇಡ ನಾನು ನಿಮ್ಮ ಕಂದ, ನಿಮ್ಮ ಅಕ್ಕರೆಯ ಪ್ರೀತಿ ಮೊದಲು ನಿನಗೇ ಸಲ್ಲಿಸಬೇಕು ಎಂದು ಕೋರುತ್ತಿರುವ ಈ ಕವಿತೆ ಕನ್ನಡದ ದೈನ್ಯಸ್ಥಿತಿಯನ್ನು ತೆರೆದಿಡುತ್ತದೆ. ಹೀಗೆ ನಮ್ಮ ನಾಡು ನುಡಿಯನ್ನು ನಾವೇ ತಿರಸ್ಕಾರ ಮಾಡಿದರೆ, ಅದರಲ್ಲಿ ಹುರುಳಿಲ್ಲ ಎಂದರೆ, ಅದಕ್ಕೆ ಸಲ್ಲಬೇಕಾದ ನಿಜದ ಸನ್ಮಾನ, ಗೌರವ ಯಾರಿಂದ ತಾನೇ ದೊರಕಿತು? ನಮ್ಮ ನುಡಿಯೇ ಹಾಳಾದರೆ, ನಮ್ಮ ಪಾಡೇನು? ಇದ್ದೂ ಸತ್ತ ಹಾಗೆ!

‘ನಿಮ್ಮ ನುಡಿ ನಿಮ್ಮ ಗಂಡಸುತನಕೆ ಹಿರಿಸಾಕ್ಷಿ;
ಗೆಲವಿದ್ದರದಕೆ ನಿಮಗಿಹುದು ಶಕ್ತಿ.
ನುಡಿ ಮಡಿದರೆ ಎಲ್ಲರೂ ಮೂಕ ಜಂತುಗಳಂತೆ;
ಬಾಲವಲ್ಲಾಡಿಪುದೆ ಪರಮ ಭಕ್ತಿ’

ನಮ್ಮ ನುಡಿ ನಮಗೆ ನೀಡುವ ಹೆಗ್ಗಳಿಕೆಯನ್ನು ಬೇರೆ ಯಾರೂ, ಯಾವ ನುಡಿಯೂ ನೀಡಲಾರದು. ನಮ್ಮ ಮನೆ ಎಷ್ಟೇ ಪುಟ್ಟದಾಗಿದ್ದರೂ ಅದು ನಮ್ಮದು. ಅದಕ್ಕೆ ಯಜಮಾನಿಕೆ ನಮ್ಮದು. ಬೇರೆ ಯಾರೇ ಮನೆಗೆ ಬಂದರೂ ಅವರು ಅತಿಥಿಗಳಷ್ಟೇ, ಅವರೇ ಆ ಮನೆಯನ್ನು ಆಕ್ರಮಿಸಿಕೊಳ್ಳಬಾರದು.

ಪರಕೀಯ ದಾಸ್ಯದಿಂದ ಮುಕ್ತಿ ಪಡೆಯಲು ಹಗಲಿರುಳೆನ್ನದೆ ನಿರಂತರವಾಗಿ ಸ್ವಾತಂತ್ರಕ್ಕೆ ಹೋರಾಟ ಮಾಡಿದ ಹಾಗೆ ಇಂದು ಪರಕೀಯ ಭಾಷೆಗಳಿಂದ ಮುಕ್ತಿ ಪಡೆಯಲು ಕನ್ನಡಕ್ಕಾಗಿ ಹೋರಾಡುವ ಸ್ಥಿತಿ ಕನ್ನಡದ ಮಕ್ಕಳಿಗೆ ಬಂದಿದೆ. ಕನ್ನಡವೆಂದರೆ ಕನ್ನಡಿಗರು ತೋರುವ ಅಭಿಮಾನ ಅದೆಷ್ಟು ಟೊಳ್ಳು ಎಂಬುದಕ್ಕೆ ಇದು ಸಾಕ್ಷಿ.

ಕನ್ನಡಕ್ಕಾಗಿ ದೀಕ್ಷೆಯನ್ನು ತೊಟ್ಟು, ಕಂಕಣ ಕಟ್ಟಿದ ಕುವೆಂಪು ತಾವು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಆಗಿದ್ದರೂ ತಮ್ಮ ಮಕ್ಕಳನ್ನು ಮಾತೃಮಂಡಳಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿಸಿದರು. ಆದರೆ ಇಂದು ವೇದಿಕೆಗಳಲ್ಲಿ ಕನ್ನಡ ಜಪ ಮಾಡುವ ನೂರರಲ್ಲಿ ಒಬ್ಬರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಕ್ಕೆ ಸೇರಿಸಲಾರರು. ಇದೇ ಮುಖ್ಯ ಕಾರಣವಾಗಿ ಇಂದು ಕನ್ನಡ ಮಾಧ್ಯಮವನ್ನು ಪ್ರಾಥಮಿಕ ಹಂತದಲ್ಲಿ ಕಡ್ಡಾಯಗೊಳಿಸಬೇಕೆಂದು ಚಿಂತಿಸಿದರೂ ಅದಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಆಂಗ್ಲ ಮಾಧ್ಯಮ ಶಾಲೆಗಳು ಬೀಗುತ್ತಿವೆ, ಇದನ್ನೇ ಕವಿ ಹೇಳಿದುದು:

‘ ಪರಕೀಯರೆಲ್ಲರಾಶೀರ್ವಾದದ ಕರವೆತ್ತಿ
ಹರಸುತ್ತ ಬರುವರೈ ಮೊದಲು ಮೊದಲು
ಕಡೆಗದುವೆ ಕುತ್ತಿಗೆಗೆ ಕರವಾಳವಾಗುವುದು …’

ನಮ್ಮ ಭಾಷೆಯನ್ನು ಕೀಳು ತೊದಲು ಎಂದು ಅದನ್ನು ಬಿಟ್ಟು ಪರಭಾಷಾ ವ್ಯಾಮೋಹಕ್ಕೆ ಸಿಲುಕಿದ ಕನ್ನಡಿಗರಿಗೆ ಆ ವರದ ಹಸ್ತವೇ ಕತ್ತಿ ಹಿಡಿದು ಬೀಸುತ್ತಿದ್ದರೂ ತಮ್ಮ ವಿನಾಶ ಕಾಲದ ಅರಿವು ಇನ್ನು ಆಗಿಲ್ಲ. ಇದರ ಅರಿವಾಗಲು ಶಿವ ಪ್ರಳಯಕಾಲದ ಡಿಂಡಿಮವನ್ನೇ ಬಾರಿಸಬೇಕೇನೋ!

‘ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ!
ಸತ್ತಂತಿಹರನು ಬಡಿದೆಚ್ಚರಿಸು,
ಕಚ್ಚಾಡುವರನು ಕೂಡಿಸಿ ಒಲಿಸು,
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು,
ಒಟ್ಟಿಗೆ ಬಾಳುವ ತೆರದಲಿ ಹರಸು…’

ಬದುಕಿದ್ದೂ ಸತ್ತಂತಿರುವ, ಭಾಷಾಭಿಮಾನವಿಲ್ಲದ ಜೀವಂತ ಹೆಣಗಳನ್ನು ಬಡಿದೆಚ್ಚರಿಸುವ; ಸ್ವಹಿತಾಸಕ್ತಿಯ ಕಚ್ಚಾಟದಲ್ಲಿ ನಾಡು-ನುಡಿಯು ಏಳಿಗೆ ಮರೆತಿರುವವರನ್ನು ಒಂದುಗೂಡಿಸುವ ಡಿಂಡಿಮವನ್ನು ಈಗ ಕರ್ನಾಟಕ ಹೃದಯಶಿವನೇ ಬಾರಿಸಬೇಕಾಗಿದೆ.

‘ನೃಪತುಂಗನೇ ಚಕ್ರವರ್ತಿ ಪಂಪನಲ್ಲಿ ಮುಖ್ಯ ಮಂತ್ರಿ !
ರನ್ನ ಜನ್ನ ನಾಗವರ್ಮ
ರಾಘವಾಂಕ ಹರಿಹರ
ಬಸವೇಶ್ವರ ನಾರಾಯಣಪ್ಪ ಸರ್ವಜ್ಞ ಷಡಕ್ಷರ
ಸರಸ್ವತಿ ರಚಿಸಿದೊಂದು ನಿತ್ಯ ಸಚಿವ ಮಂಡಲ …’

ಈ ನಿತ್ಯ ಸಚಿವ ಮಂಡಲವನ್ನು ಹೊಂದಿರುವ ಕನ್ನಡವನ್ನು ಕನ್ನಡಿಗರು ಅವಜ್ಞೆ ಮಾಡಿದರೆ ತನ್ನ ಕಂದನನ್ನು ತಾಯಿಯೇ ಕೈಬಿಟ್ಟಂತೆ. ಕನ್ನಡವೇ ಮುದ್ದು ಮಗುವಾಗಿ ತನ್ನ ತಾಯಿಯನ್ನು;

‘ ಹೆರರ ಮಕ್ಕಳ ಮೀರಿ ನಿನ್ನವನು ಚೆಲುವನಮ್ಮಾ
ನೀನು ಒಲಿದರೆ ಮುಗಿಲ ಸರಿಸಮ ನಿಲ್ಲುವನಮ್ಮಾ;
ವಿಶ್ವವನೇ ಗೆಲುವನಮ್ಮಾ! ಲೋಕವನ್ನೊಲಿಸುವನು,
ನಿನ್ನನು ನಲಿಸುವನು.
ತಾನೊಲಿದು ನಲಿವನಮ್ಮಾ !’

‘ಕನ್ನಡಿಗರ ಸರ್ವತೋಮುಖವಾದ ಉದ್ದಾರ ಕನ್ನಡದಿಂದಲೇ ಸಾಧ್ಯ. ಕನ್ನಡಿಗರಿಗೆ ಕನ್ನಡವೇ ಗತಿ! ಭಾರತ ಜನನಿಯ ತನುಜಾತೆಯಾದ ಕನ್ನಡ ಮಾತೆಯ ಸೇವೆಗೆ ನಾವೆಲ್ಲರೂ ಸಿದ್ಧರಾಗಬೇಕು. ಕನ್ನಡ ನಾಡಿನಲ್ಲಿ ವಿದ್ಯಾಭ್ಯಾಸದ ಎಲ್ಲಾ ಘಟ್ಟಗಳಲ್ಲೂ ಕನ್ನಡವೇ ಶಿಕ್ಷಣ ಮಾಧ್ಯಮವಾಗಬೇಕು. ಕನ್ನಡವೇ ಪ್ರಧಾನ ಭಾಷೆ ಆಗಬೇಕು. ಅಂದೇ ನಮ್ಮೆಲ್ಲರಿಗೂ ಅಮೃತಕ್ಷಣ. ಆ ದಿವ್ಯ ಮಹೂರ್ತ ಬೇಗನೆ ಒದಗಿ ಬರುವಂತೆ ಭಾರತಿ ನಮ್ಮನ್ನು ಆಶೀರ್ವದಿಸಲಿ, ಅನುಗ್ರಹಿಸಲಿ’ (ಜನಮನ: 5- 5- 57 )ಹೀಗೆ ತಮ್ಮ ಉಸಿರು ಉಸಿರಿನಲ್ಲಿ ಕನ್ನಡವನ್ನೇ ತುಂಬಿಕೊಂಡು ಪ್ರತಿ ಕ್ಷಣವೂ ಕನ್ನಡವನ್ನು ಜನಮನದಲ್ಲಿ ಸ್ಥಿರವಾಗಿ ಸ್ಥಾಪಿಸುವುದು ಹೇಗೆ ಎಂಬ ಚಿಂತನೆ ಅಪ್ಪಿಕೊಂಡ ಕವಿವರ್ಯರು ಹೇಳುತ್ತಾರೆ:

‘ಎಲ್ಲಾದರೂ ಇರು, ಎಂತಾದರು ಇರು,
ಎಂದೆಂದಿಗೂ ನೀ ಕನ್ನಡವಾಗಿರು.
ಕನ್ನಡ ಗೋವಿನ ಓ ಮುದ್ದಿನ ಕರು,
ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು!’

ಕನ್ನಡವನ್ನು ಉಸಿರಾಗಿಸಿಕೊಂಡವರು ಎಲ್ಲೇ ಇದ್ದರೂ ಕರ್ನಾಟಕದಲ್ಲೇ ಇದ್ದಂತೆ. ಅವರು ಮುಟ್ಟುವ ನೆಲವೇ ಕರ್ನಾಟಕ. ಏರುವ ಮಲೆ ಸಹ್ಯಾದ್ರಿ, ಮುಟ್ಟುವ ಮರ ಶ್ರೀಗಂಧದ ಮರ, ಕುಡಿಯುವ ನೀರೇ ಕಾವೇರಿ. ಕನ್ನಡಿಗರೆಲ್ಲರಿಗೆ ಈ ಭಾವ ಬರಬೇಕೆಂಬುದೇ ಕವಿಯ ನಿತ್ಯ ಹಾರೈಕೆ. ಅದಕ್ಕೇ ಹೇಳುತ್ತಾರೆ:

‘ದೀಕ್ಷೆಯ ತೊಡು ಇಂದೇ,
ಕಂಕಣ ಕಟ್ಟಿಂದೇ,
ಕನ್ನಡ ನಾಡೊಂದೇ,
ಎಂದೆಂದಿಗೂ ತಾನೊಂದೇ! ‘

ಈ ರೀತಿಯ ದೀಕ್ಷೆಯನ್ನು ತೊಟ್ಟು ಕನ್ನಡದ ಮಕ್ಕಳು ಕಣ್ತೆರೆದು ಎದ್ದು, ಕುರಿತನವನ್ನು ನೀಗಿ ನಖದಂಷ್ಟ್ರ ಕೇಸರಗಳನ್ನು ಬೆಳೆಸಿಕೊಂಡು ಸಿಂಹವಾಗಿ ನಿಂತರೆ ಮಾತ್ರ ಕನ್ನಡ ನಾಡು-ನುಡಿಯ ಏಳಿಗೆ ಸಾಧ್ಯ.

ಪ್ರಪಂಚದ ಕೆಲವೇ ಕೆಲವು ಪ್ರಾಚೀನ ಭಾಷೆಗಳಲ್ಲಿ ಒಂದಾದ ಕನ್ನಡಕ್ಕೆ ಎರಡು ಸಾವಿರ ವರ್ಷಗಳ ಸಂಸ್ಕೃತಿ-ಪರಂಪರೆ ಇದೆ. ಇಷ್ಟನ್ನು ನೆನೆದರೆ ಸಾಕು, ಕನ್ನಡಿಗರಲ್ಲಿ ಆತ್ಮಗೌರವ ಉಕ್ಕಿ ಹರಿಯುವಂತಾಗಬೇಕು. ಆದರೂ ಅನ್ಯಭಾಷೆಗಳ ಪಿಡುಗಿಗೆ, ಪೀಡನೆಗೆ ಕನ್ನಡವನ್ನೇ ಬಲಿ ಕೊಟ್ಟಿರುವ ಈ ದೈನ್ಯ ಸ್ಥಿತಿಗೆ ಕನ್ನಡಿಗರೆಲ್ಲರ ಸ್ವಯಂಕೃತಾಪರಾಧವೇ ಒಂದು ಮುಖ್ಯ ಜಾರಣವೂ ಹೌದು.

ಕುವೆಂಪು ಅವರ ಸಾಹಿತ್ಯ ಸೇವೆಯನ್ನು ಗಮನಿಸಿ ಅವರಿಗೆ 60 ವರ್ಷ ತುಂಬಿದ ಸಂದರ್ಭದಲ್ಲಿ, ಮೈಸೂರು ಸರ್ಕಾರ ಅವರಿಗೆ ರಾಷ್ಟ್ರಕವಿ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಿತು. ಆಗ ಕುವೆಂಪು ಅವರು ಮುಖ್ಯಮಂತ್ರಿ ನಿಜಲಿಂಗಪ್ಪನವರಿಗೆ ಬರೆದ ಪತ್ರದ ಭಾವ ಇದು;

‘ … ಪ್ರೌಢ ಮತ್ತು ವಿಶ್ವವಿದ್ಯಾನಿಲಯಗಳ ಶಿಕ್ಷಣಕ್ರಮದಲ್ಲಿ ಕನ್ನಡಕ್ಕೆ ದೊರೆಯಬೇಕಾದ ಮನ್ನಣೆ ದೊರೆತಿಲ್ಲ ಎಂದು ತಿಳಿಸಲು ತುಂಬಾ ವಿಷಾದವಾಗುತ್ತದೆ. ಕನ್ನಡ ಮಾಧ್ಯಮ ತೃಪ್ತಿಕರವಾದ ರೀತಿಯಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ .ಕನ್ನಡ ಭಾಷಾ ಸಾಹಿತ್ಯಗಳ ವ್ಯಾಸಂಗಕ್ಕೆ ಸಾಕಷ್ಟು ಪ್ರೋತ್ಸಾಹ ದೊರೆತಿಲ್ಲ. ಶಿಕ್ಷಣ ಕ್ರಮದಲ್ಲಿ ಕನ್ನಡದ ಸ್ಥಾನಮಾನಗಳಿಗೆ ಸಾಕಷ್ಟು ರಕ್ಷಣೆ ದೊರೆತಾಗ, ರಾಷ್ಟ್ರಕವಿ ಪ್ರಶಸ್ತಿ ದೊರೆತಾಗ ಉಂಟಾದ ಸಂತೋಷಕ್ಕಿಂತ ನೂರ್ಮಡಿಯಾದ ಸಂತೋಷ ನನಗಾಗುತ್ತದೆಂದು ಹೇಳಿದರೆ ನೀವು ಖಂಡಿತ ನಂಬುವವರು ಎಂದು ತಿಳಿದಿದ್ದೇನೆ. ಕವಿಯ ಹಂಬಲವನ್ನು ಪೂರೈಸಿದರೆ ಕವಿಗೆ ನಿಜವಾದ ಮನ್ನಣೆ ದೊರೆತಂತಾಗುತ್ತದೆ. ಕವಿಗೆ ಅದಕ್ಕಿಂತ ಬೇರೆ ಭಾಗ್ಯ ಬೇಕಿಲ್ಲ ‘

ಕವಿ ಈ ಮಾತುಗಳನ್ನು ಹೇಳಿ ಅರವತ್ತು ವರ್ಷಗಳೇ ಸಂದಿವೆ. ಇನ್ನೂ ಕವಿ ಬಯಸಿದ ಮನ್ನಣೆಯನ್ನು ನೀಡಲು ಸಾಧ್ಯವಾಗದ ನಮ್ಮ ಕನ್ನಡತನಕ್ಕೆ ಏನು ಹೇಳಬೇಕು ? ಆದರೂ, ಯಾವುದು ಏನೇ ಆದರೂ ಕನ್ನಡವೇ ಸತ್ಯ! ಅನ್ಯವೆನಲದೇ ಮಿಥ್ಯ.