ಚಿಕ್ಕಮಗಳೂರು: ಜಿಲ್ಲೆಯಲ್ಲಿ ಈ ಬಾರಿ ಮತದಾನ ಪ್ರಮಾಣ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಸ್ವೀಪ್ ಸಮಿತಿ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ. ಇದರ ಅಂಗವಾಗಿ ಚಿಕ್ಕಮಗಳೂರು ನಗರದಲ್ಲಿ ಏ.೨೦ ರಂದು ವಿವಿಧ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗೋಪಾಲಕೃಷ್ಣ ಅವರು ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರಿನ ಎಂ.ಜಿ. ರಸ್ತೆಯ ಉದ್ದಕ್ಕೂ ಬೆಳಿಗ್ಗೆಯಿಂದ ಸಂಜೆಯವರೆಗೆ ವಿವಿಧ ಸ್ಪರ್ಧೆಗಳು, ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ಎಂ.ಜಿ. ರಸ್ತೆಯಲ್ಲಿ ಬೆಳಿಗ್ಗೆ ೬.೩೦ಕ್ಕೆ ಯೋಗ, ೭.೩೦ಕ್ಕೆ ಜುಂಬಾ, ನಂತರ ಸ್ಲೋ ಸೈಕಲ್ ರೇಸ್, ವಾಕಿಂಗ್ ರನ್, ಉಲ್ಟಾ ರನ್ ಇದರ ಜತೆಗೆ ಫನ್ನಿ ಗೇಮ್, ದೇಶಿಯ ಕ್ರೀಡೆಗಳು, ರಂಗೋಲಿ ಸ್ಪರ್ಧೆ, ಮಹಿಳೆಯರಿಗೆ ತರಕಾರಿ ತಿನ್ನುವ ಸ್ಪರ್ಧೆ, ಪುರುಷರಿಗೆ ಮುದ್ದೆ ತಿನ್ನುವ ಸ್ಪರ್ಧೆ, ವೇಷ ಭೂಷಣ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಇದೇ ವೇಳೆಯಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಮೆಹಂದಿ ಸಹ ಹಾಕಲಾಗುವುದು ಎಂದು ಹೇಳಿದರು.

ಸಂಜೆ ೪ ಗಂಟೆಗೆ ಡಾಗ್ ಶೋ, ಚಿತ್ರಕಲೆ ಪ್ರದರ್ಶನ, ಆಹಾರ ಮಳಿಗೆಗಳು ತೆರೆಯಲಾಗುವುದು, ಇದರ ಜತೆಗೆ ಸಂಜೆ ಆಜಾದ್ ಪಾರ್ಕ್ ವೃತ್ತದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಯುವ ಮತದಾರರನ್ನು ಸೆಳೆಯಲು ೧೮ ಕೆ.ಜಿ. ತೂಕದ ಕೇಕ್‌ವನ್ನು ಕಟ್ ಮಾಡಲಾಗುವುದು. ಬಿಪಿ, ಶುಗರ್, ಹಿಮೋಗ್ಲೋಬಿನ್ ಪರೀಕ್ಷೆ ಸಹ ಉಚಿತವಾಗಿ ನಡೆಸಲಾಗುವುದು ಎಂದರು.

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಮತದಾನ ಆಗಿರುವ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಆ ಪ್ರದೇಶಗಳಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಇದರ ಜತೆಗೆ ಕಡಿಮೆ ಮತದಾನಕ್ಕೆ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಂತಹ ಮತಗಟ್ಟೆಗಳಲ್ಲಿ ಕೋ ಆಡಿನೇಟರ್ ನೇಮಕ ಮಾಡಲಾಗಿದ್ದು, ಅವರುಗಳು ನಿಖರವಾದ ಕಾರಣವನ್ನು ಪತ್ತೆ ಹಚ್ಚಿ ವರದಿ ನೀಡಲಿದ್ದಾರೆ ಎಂದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ.೭೮ ರಷ್ಟು ಮತದಾನ ನಡೆದಿತ್ತು. ಈ ಬಾರಿ ಶೇ. ೮೩ಕ್ಕೆ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಸ್ವೀಪ್ ಸಮಿತಿಯಿಂದ ಹಲವು ಕಾರ್ಯಕ್ರಮ ಆಯೋಜನೆ ಮಾಡಿದೆ ಎಂದ ಅವರು, ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಚಿಸುವವರು ಗೂಗಲ್ ಫಾರಂ ಲಿಂಕ್ ಮೂಲಕ ತಮ್ಮ ಹೆಸರು ನೊಂದಾಯಿಸಬೇಕು ಅಥವಾ ಸ್ಥಳದಲ್ಲೇ ನೋಂದಣಿ ಮಾಡಬೇಕು ಎಂದು ಹೇಳಿದರು.

Various awareness programs in the city for A.20