ನವದೆಹಲಿ: ಬಾಹುಬಲಿ ರಾಕೆಟ್‌ ಎಲ್‌ವಿಎಂ3- ಎಂ4 ಮೂಲಕ ಚಂದ್ರಯಾನ-3ರ (Chandrayaan-3) ಉಡಾವಣೆ ಯಶಸ್ವಿಯಾಯಿತು. ಆ ಮೂಲಕ ಇಸ್ರೋಗೆ (ISRO) ಮತ್ತೊಂದು ಗರಿ ಸಿಕ್ಕಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದ ಉಡ್ಡಯನ ಕೇಂದ್ರದಿಂದ ಲ್ಯಾಂಡರ್‌ (ವಿಕ್ರಮ್‌), ರೋವರ್‌ (ಪ್ರಜ್ಞಾನ) ಹೊತ್ತ ರಾಕೆಟ್‌ ನಭಕ್ಕೆ ಚಿಮ್ಮಿತು. ಮಧ್ಯಾಹ್ನ 2:35 ನಿಮಿಷಕ್ಕೆ ರಾಕೆಟ್‌ ಯಶಸ್ವಿಯಾಗಿ ಉಡಾವಣೆಗೊಂಡಿತು.

ಭಾರತದ ಚಂದ್ರಯಾನ-3 ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಇಡೀ ರಾಷ್ಟ್ರದ ಭರವಸೆಯನ್ನು ಹೊತ್ತು ಸಾಗಿದೆ. ಈ ಕಾರ್ಯಾಚರಣೆಯು ಯಶಸ್ವಿಯಾದರೆ, ರಷ್ಯಾ, ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾದ ನಂತರ ಚಂದ್ರನ ಮೇಲೆ ನಿಯಂತ್ರಿತ ಲ್ಯಾಂಡಿಂಗ್ ಸಾಧಿಸಿದ ನಾಲ್ಕನೇ ದೇಶವಾಗಿ ಭಾರತ ಹೆಸರಾಗಲಿದೆ.

ಬಾಹುಬಲಿ ರಾಕೆಟ್ ಎಂದು ಕರೆಯಲ್ಪಡುವ ಮಾರ್ಕ್-3 ಹೆವಿ-ಲಿಫ್ಟ್ ಉಡಾವಣಾ ವಾಹನದಲ್ಲಿ ಚಂದ್ರನ ಲ್ಯಾಂಡರ್ ವಿಕ್ರಮ್ ಇದೆ. ಗಗನನೌಕೆಯು ಭೂಮಿಯಿಂದ ಚಂದ್ರನೆಡೆಗೆ ತಲುಪಲು ಸುಮಾರು 40 ದಿನ ತೆಗೆದುಕೊಳ್ಳುತ್ತದೆ. ಆಗಸ್ಟ್ 23 ರಂದು ಚಂದ್ರನಲ್ಲಿ ಇಳಿಯಲಿದೆ ಎಂದು ನಿರೀಕ್ಷಿಸಲಾಗಿದೆ. ಲ್ಯಾಂಡಿಂಗ್ ನಂತರ ಇದು ಒಂದು ಚಂದ್ರನ ದಿನಕ್ಕೆ ಕಾರ್ಯನಿರ್ವಹಿಸುತ್ತದೆ. ಅಂದರೆ ಸರಿಸುಮಾರು 14 ಭೂಮಿಯ ದಿನಗಳು. ಚಂದ್ರನ ಮೇಲಿನ ಒಂದು ದಿನವು ಭೂಮಿಯ ಮೇಲಿನ 14 ದಿನಗಳಿಗೆ ಸಮಾನವಾಗಿರುತ್ತದೆ.

ಚಂದ್ರಯಾನ-3, ಮೂರು ಪ್ರಮುಖ ಘಟಕಗಳನ್ನು ಹೊಂದಿರುತ್ತದೆ. ಪ್ರೊಪಲ್ಷನ್ ಮಾಡ್ಯೂಲ್‌, ಲ್ಯಾಂಡರ್ ಮತ್ತು ರೋವರ್. ಇದು ಚಂದ್ರನ ವಾತಾವರಣದಲ್ಲಿ ಇನ್ನೂ ಅಸ್ತಿತ್ವದಲ್ಲಿರುವ ಚಂದ್ರಯಾನ-2 ರ ಆರ್ಬಿಟರ್ ಅನ್ನು ಬಳಸುತ್ತದೆ.

ಮೊದಲ ಬಾರಿಗೆ ಭಾರತದ ಚಂದ್ರನೌಕೆ ‘ವಿಕ್ರಮ್’ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ. ಅಲ್ಲಿ ನೀರಿನ ಅಣುಗಳು ಕಂಡುಬಂದಿವೆ. 2008 ರಲ್ಲಿ ಭಾರತದ ಮೊದಲ ಚಂದ್ರಯಾನದ ಸಮಯದಲ್ಲಿ ಕಂಡುಬಂದ ಈ ಸಂಶೋಧನೆಯು ಜಗತ್ತನ್ನು ಬೆಚ್ಚಿ ಬೀಳಿಸಿತ್ತು.

ವಿಕ್ರಮ್ ಸುರಕ್ಷಿತ ಮತ್ತು ಸಾಫ್ಟ್‌ ಲ್ಯಾಂಡಿಂಗ್ ಆಗುವ ನಿರೀಕ್ಷೆ ಹೊಂದಲಾಗಿದೆ. ಲ್ಯಾಂಡರ್ ನಂತರ ರೋವರ್ ಪ್ರಜ್ಞಾನ ಅನ್ನು ಬಿಡುಗಡೆ ಮಾಡುತ್ತದೆ. ಇದು ಒಂದು ಚಂದ್ರನ ದಿನಕ್ಕೆ (ಭೂಮಿಗೆ ಹೋಲಿಸಿದರೆ 14 ದಿನ) ಚಂದ್ರನ ಮೇಲ್ಮೈಯಲ್ಲಿ ಸಂಚರಿಸುತ್ತದೆ. ಬಳಿಕ ಚಂದ್ರನ ಮೇಲ್ಮೈನಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ನಡೆಸುತ್ತದೆ.

Successful launch from Chandrayaan-3 Launch Center Sriharikota