ಜೈಪುರ: ಬೃಹತ್ ಟಾರ್ಗೆಟ್, ಅಭಿಶೇಕ್ ಶರ್ಮಾ, ರಾಹುಲ್ ತ್ರಿಪಾಠಿಯ ದಿಟ್ಟ ಹೋರಾಟ. ಅಂತಿಮ ಹಂತದಲ್ಲಿ ಗ್ಲೆನ್ ಫಿಲಿಪ್ಸ್ ಸಿಕ್ಸರ್ ಅಬ್ಬರ.ಕೊನಯ ಓವರ್‌ನಲ್ಲಿ ಒಂದೊಂದು ಎಸೆತಕ್ಕೂ ಪಂದ್ಯ ಅತ್ತ ಇತ್ತ ವಾಲತೊಡಗಿತು. ಇನ್ನೇನು ಹೈದರಾಬಾದ್ ತಂಡಕ್ಕೆ ಗೆಲುವು ಅನ್ನೋವಾಗಲೇ ಪಂದ್ಯ ಮತ್ತೆ ತಿರುವು ಪಡೆದುಕೊಂಡಿತು.

ಅಂತಿಮ ಎಸೆತದಲ್ಲಿ 5 ರನ್ ಬೇಕಿತ್ತು. ಅಬ್ದುಲ್ ಸಮಾದ್ ಕೊನೆಯ ಎಸೆತದಲ್ಲಿ ಕ್ಯಾಚ್ ನೀಡಿದರು. ರಾಜಸ್ಥಾನ ಸಂಭ್ರಮ ಆಚರಿಸುತ್ತಿದ್ದಂತೆ ಅಂಪೈರ್ ನೋ ಬಾಲ್ ಎಂದು ಡಿಕ್ಲೇರ್ ಮಾಡಿದರು. ಕೊನೆಯ ಎಸೆತ ಫ್ರೀ ಹಿಟ್. 4 ರನ್ ಅವಶ್ಯಕತೆ ಇತ್ತು. ಅಬ್ದುಲ್ ಸಮಾದ್ ಸಿಕ್ಸರ್ ಸಿಡಿಸುವ ಮೂಲಕ ಹೈದರಾಬಾದ್ ತಂಡಕ್ಕೆ 4 ವಿಕೆಟ್ ರೋಚಕ ಗೆಲುವು ತಂದುಕೊಟ್ಟರು.

215 ರನ್ ಬೃಹತ್ ಟಾರ್ಗೆಟ್ ಪಡೆದ ಸನ್‌ರೈಸರ್ಸ್ ಹೈದರಾಬಾದ್ ಉತ್ತಮ ಆರಂಭ ಪಡೆಯಿತು. ಅನ್ಮೋಲ್‌ಪ್ರೀತ್ ಸಿಂಗ್ ಹಾಗೂ ಅಭಿಷೇಕ್ ಶರ್ಮಾ ಹೋರಾಟ ನೀಡಿದರು. ಆದರೆ ಅನ್ಮೋಲ್‌ಪ್ರೀತ್ ಸಿಂಗ್ 33 ರನ್ ಸಿಡಿಸಿ ಔಟಾದರು. ಅಭಿಶೇಕ್ ಶರ್ಮಾ ಹಾಗೂ ರಾಹುಲ್ ತ್ರಿಪಾಠಿ ಜೊತೆಯಾಟದಿಂದ ಸನ್‌ರೈಸರ್ಸ್ ಹೈದರಾಬಾದ್ ಚೇತರಿಸಿಕೊಂಡಿತು.

ಅಭಿಶೇಕ್ ಶರ್ಮಾ 32 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಅಭಿಶೇಕ್ ಹಾಗೂ ರಾಹುಲ್ ತ್ರಿಪಾಠಿ ನಡುವಿನ ಜೊತೆಯಾಟಕ್ಕೆ ಆರ್ ಅಶ್ವಿನ್ ಬ್ರೇಕ್ ಹಾಕಿದರು.  ಅಭಿಶೇಕ್ ಹೋರಾಟ 55 ರನ್‌ಗೆ ಅಂತ್ಯಗೊಂಡಿತು. ರಾಹುಲ್ ತ್ರಿಪಾಠಿ ಹೋರಾಟ ಮುಂದುವರಿಸಿದರು. ಇತ್ತ ಹೆನ್ರಿಚ್ ಕಾಲ್ಸೀನ್ ಉತ್ತಮ ಸಾಥ್ ನೀಡಿದರು. ಆದರೆ ಹೆನ್ರಿಚ್ 12 ಎಸೆತದಲ್ಲಿ 26 ರನ್ ಸಿಡಿಸಿ ಔಟಾದರು.

ರಾಹುಲ್ ತ್ರಿಪಾಠಿ ಬ್ಯಾಟಿಂಗ್‌ನಿಂದ ಹೈದರಾಬಾದ್ ತಂಡ ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿತು. ಆದರೆ ತ್ರಿಪಾಠಿ 27 ಎಸೆತದಲ್ಲಿ 49 ರನ್ ಸಿಡಿಸಿ ನಿರ್ಗಮಿಸಿದರು.ನಾಯಕ ಆ್ಯಡಿನ್ ಮರ್ಕ್ರಮ್ ಕೇವಲ 6 ರನ್ ಸಿಡಿಸಿ ಔಟಾದರು. ಗ್ಲೆನ್ ಫಿಲಿಪ್ಸ್ ಕ್ರೀಸ್‌ಗಿಳಿಯುತ್ತಿದ್ದಂತೆ ಚಿತ್ರಣ ಬದಲಾಯಿತು. 19ನೇ ಓವರ್‌ನಲ್ಲಿ ಫಿಲಿಪ್ಸ್ ಬ್ಯಾಟಿಂಗ್ ರಾಜಸ್ಥಾನ ರಾಯಲ್ಸ್ ತಂಡದ ಲೆಕ್ಕಾಚಾರ ಉಲ್ಟಾ ಆಯಿತು. 2 ಸಿಕ್ಸರ್ ಹಾಗೂ 1 ಬೌಂಡರಿ ಸಿಡಿಸಿ ಹೈದರಾಬಾದ್ ಗೆಲುವಿನ ಆಸೆಯನ್ನು ಮತ್ತಷ್ಟು ಬಲಗೊಳಿಸಿದರು. ಆದರೆ ನಾಲ್ಕನೇ ಎಸೆತದಲ್ಲಿ ಫಿಲಿಪ್ಸ್ ವಿಕೆಟ್ ಪತನಗೊಂಡಿತು. ಫಿಲಿಪ್ಸ್ 7 ಎಸೆತದಲ್ಲಿ 25 ರನ್ ಸಿಡಿಸಿ ನಿರ್ಗಮಿಸಿದರು.

ಫಿಲಿಪ್ಸ್ ಅಬ್ಬರದ ಬ್ಯಾಟಿಂಗ್‌ನಿಂದ ಸನ್‌ರೈಸರ್ಸ್ ಹೈದರಾಬಾದ್ ಗೆಲುವಿಗೆ ಅಂತಿಮ 6 ಎಸೆತದಲ್ಲಿ 17 ರನ್ ಅವಶ್ಯಕತೆ ಇತ್ತು. ಅಬ್ದುಲ್ ಸಮಾದ್ ಪ್ರಬಲ ಹೊಡೆತ ಕ್ಯಾಚ್ ಆಗಿತ್ತು. ಜೀವದಾನ ಪಡೆದುಕೊಂಡರು. ಎರಡನೇ ಎಸೆತ ಸಿಕ್ಸರ್ ಗಟ್ಟಿದ ಅಬ್ದುಲ್ ಸಮಾದ್ ಹೈದರಾಬಾದ್ ಆತಂಕಕ್ಕೆ ಕೊಂಚ ರಿಲೀಫ್ ನೀಡಿದರು. ಕೊನೆಯ ಎಸೆತದಲ್ಲಿ ಕ್ಯಾಚ್ ನೀಡಿದ ಅಬ್ದುಲ್ ಸಮಾದ್ ನಿರಾಸೆಗೊಂಡರು. ಆದರೆ ಅದು ನೋ ಬಾಲ್ ಆಗಿತ್ತು. ಅಂತಿಮ ಫ್ರಿ ಹಿಟ್ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಹೈದರಾಬಾದ್ ತಂಡಕ್ಕೆ 4 ವಿಕೆಟ್ ರೋಚಕ ಗೆಲುವು ತಂದುಕೊಟ್ಟರು.

ರಾಜಸ್ಥಾನ ಇನ್ನಿಂಗ್ಸ್: ರಾಜಸ್ಥಾನ ರಾಯಲ್ಸ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು. ರಾಜಸ್ಥಾನದ ಬೌಂಡರಿ ಸಿಕ್ಸರ್ ಅಬ್ಬರಕ್ಕೆ ತವರಿನ ಅಭಿಮಾನಿಗಳು ಫುಲ್ ಖುಷಿಯಾದರು. ಯಶಸ್ವಿ ಜೈಸ್ವಾಲ್ 18 ಎಸೆತದ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 35 ರನ್ ಸಿಡಿಸಿದರು. ಜೋಸ್ ಬಟ್ಲರ್ ಬ್ಯಾಟಿಂಗ್ ಪ್ರದರ್ಶನಕ್ಕೆ ಹೈದರಾಬಾದ್ ತತ್ತರಿಸಿತು. ಬಟ್ಲರ್ 59 ಎಸೆತದಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ 95 ರನ್ ಸಿಡಿಸಿ ಔಟಾದರು. ನಾಯಕ ಸಂಜು ಸ್ಯಾಮ್ಸನ್ 38 ಎಸೆತದಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ ಮೂಲಕ ಅಜೇಯ 66 ರನ್ ಸಿಡಿಸಿದರು. ಶಿಮ್ರೊನ್ ಹೆಟ್ಮೆಯರ್ ಅಜೇಯ 7 ರನ್ ಸಿಡಿಸಿದರು. ಈ ಮೂಲಕ 2 ವಿಕೆಟ್ ನಷ್ಟಕ್ಕೆ ರಾಜಸ್ಥಾನ ರಾಯಲ್ಸ್ 214 ರನ್ ಸಿಡಿಸಿತು.

An exciting win for the Hyderabad team in the free hit