ಸಪ್ನ ಬುಕ್ ಹೌಸ್‌ನಲ್ಲಿ ಲಭ್ಯವಿರುವ ಕೇಶವ ರೆಡ್ಡಿ ಹಂದ್ರಾಳ ಅವರ ಹೊಸ ಕಥಾ ಸಂಕಲನ ‘ಸೋನಾಗಾಚಿ’ ಕಥಾ ಸಂಕಲನಕ್ಕೆ ವಿಮರ್ಶಕ ಆರ್. ಡಿ. ಹೆಗಡೆ ಆಲ್ಮನೆ ಬರೆದ ಮುನ್ನುಡಿ ಇಲ್ಲಿದೆ. ಇದನ್ನು ಕೇಶವ ರೆಡ್ಡಿ ಹಮದ್ರಾಳ ಅವರ ಫೇಸ್‌ಬುಕ್ ಗೋಡೆಯಿಂದ ಪಡೆದು ಕೃತಜ್ಞತಾಪೂರ್ವಕವಾಗಿ ಇಲ್ಲಿ ಪ್ರಕಟಿಸಲಾಗಿದೆ.

ಸಂಯಮದ ಕತೆಗಾರಿಕೆ
ಪ್ರಸಿದ್ಧ ಕತೆಗಾರರಾದ ಕೇಶವ ರೆಡ್ಡಿ ಹಂದ್ರಾಳರ ಕಥೆಗಳಿಗೆ ಮುನ್ನುಡಿಯ ಔಪಚಾರಿಕತೆ ಬೇಕಾಗುವುದಿಲ್ಲ ಎಂದು ಭಾವಿಸಿದ್ದವನು ನಾನು. ಆದರೂ ತಮ್ಮ ಈ ಕಥಾಸಂಕಲನ ‘ಸೋನಾಗಾಚಿ’ಗೆ ನಾನು ಮುನ್ನುಡಿ ಬರೆಯಬೇಕೆನ್ನುವುದು ಅವರ ಅಪೇಕ್ಷೆ. ಅವರ ಈ ಪ್ರೀತಿ-ವಿಶ್ವಾಸಗಳಿಗೆ ನಾನು ಋಣಿಯಾಗಿದ್ದೇನೆ.

ಕನ್ನಡಸಾಹಿತ್ಯದಲ್ಲಿ ನನಗೆ ನನ್ನ ಆಸಕ್ತಿಯ ಅರಿವಾದದ್ದು ಸ್ವಲ್ಪ ತಡವಾಗಿ. ನಂತರದ ದಿನಗಳಲ್ಲಿ ಕನ್ನಡದ ಮಹತ್ವದ ಕತೆಗಳನ್ನು ಹುಡುಕಿ ಓದುವಾಗ ನಮ್ಮ ಕತೆಗಾರರೆಲ್ಲ ನಿರೂಪಿಸುವುದು ಕಲ್ಪಿತ ವಾಸ್ತವಗಳನ್ನೇ ಎಂದು ಕಂಡುಕೊಂಡಿದ್ದೆ. ಆದರೆ ನನ್ನ ಆಲೋಚನೆ ಪ್ರಶ್ನಾರ್ಹವಾಗುವಂತೆ ಹಂದ್ರಾಳರ ಕತೆಗಳು ಸಂಭವಿಸುತ್ತಿವೆ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಇವರ ಕಥಾಸಂಕಲನ ‘ಜಡೆಗೆ ಗುಲ್ ಮೊಹರ್ ಕೈಗಳ’ನ್ನು ಓದಿದ್ದೆ. ಆಗ “ಇವು ಕೆಟ್ಟು ಕೆರ ಹಿಡಿದ ಮನುಷ್ಯರ ಕತೆಗಳು” ಎಂದು ನನಗೆನಿತ್ತು. ಆ ಕತೆಗಳು ಹುಟ್ಟಿಸಿದ ಪರವಶತೆಗೆ ಮತ್ತು ಅವು ನಿರೂಪಿಸುವ ಮನುಷ್ಯಸ್ವಭಾವದ ಚಾರಿತ್ರ್ಯಕ್ಕೆ ಎತ್ತಿದ್ದ ಉದ್ಗಾರ ಅದಾಗಿತ್ತು. ಹಂದ್ರಾಳರ ಕಥನದ ಜಾನಪದ ಲಯ ಕೂಡ ನನ್ನನ್ನು ಬೆರಗಾಗಿಸಿತ್ತು. ಆಮೇಲೆ ಇವರ ಕತೆಗಳನ್ನು ಹುಡುಕಿ ಹುಡುಕಿ ಓದುತ್ತಿದ್ದೆ. ಇವರ ಕಥನಕೌಶಲ್ಯಕ್ಕೂ ಗದ್ಯಕ್ಕೂ ಮಾದರಿಯಾಗುವ ‘ಒಕ್ಕಲ ಒನಪು’ ಮತ್ತು ‘ಮರೆತ ಭಾರತ’ದ ಅಂಕಣಗಳನ್ನು ಓದಿದ್ದೇನೆ; ಅನಂತರ ಇವರ ಹದಿನೆಂಟು ಕತೆಗಳ ಸಂಕಲನ ‘ಅಲ್ಲಮನ ಆತ್ಮಲಿಂಗ’ವನ್ನೂ ಓದಿದೆ. ಸಾಹಿತ್ಯದ ಶಕ್ತಿಯಲ್ಲೂ ನಮ್ಮ ಸುತ್ತಲಿನ ಸಹಜೀವಿ ಜನಸಾಮಾನ್ಯರ ಬಗೆಗೂ ಕೌತುಕವನ್ನು ಹೆಚ್ಚಿಸುವ ಮನೋಜ್ಞವಾದ ಕತೆಗಳನ್ನು ಹಂದ್ರಾಳರು ಇವತ್ತಿಗೂ ಬರೆಯುತ್ತಿದ್ದಾರೆ. ನಿಜಕ್ಕೂ ಕತೆಗಾರ ಕೇಶವ ರೆಡ್ಡಿ ಹಂದ್ರಾಳರು ಅದೃಷ್ಟವಂತರು. ಆದ್ದರಿಂದ ಇವರು ಅಭಿನಂದನಾರ್ಹರು.

ಒಳ್ಳೆಯ ಕತೆಗಾರ ಬರೀ ಕನಸುಗಳನ್ನು ಊಡುವುದಿಲ್ಲ, ಓದುಗರನ್ನು ಅವರ ದೈನಂದಿನ ವಾಸ್ತವಗಳಿಂದ ದೂರ ಒಯ್ಯುವುದೂ ಇಲ್ಲ. ಇವರು ಸೃಷ್ಟಿಸಿದ ಬ್ರೆಕ್ಟ್, ಅಲ್ಲಮಪ್ರಭು, ಮಧುಕೇಶ್ವರ, ‘ಆನಂದವಿಹಾರ್’ ಕತೆಯ ರಾಮಲಾಲ್, ಅತ್ತರು ಮಾರುವ ಸಲೀಮ್, ಮಾದೇಗೌಡ ಇವರು ತಮ್ಮ ಅಸ್ತಿತ್ವವನ್ನು ಕೊನೆಗೂ ಉಳಿಸಿಕೊಳ್ಳುವುದನ್ನು ಅನುಲಕ್ಷಿಸಿ ಈ ಮಾತು ಹೇಳಬೇಕಾಗಿದೆ. ಸಾಮಾನ್ಯರಲ್ಲಿ ಸಾಮಾನ್ಯರಾದರೂ ಇವರೆಲ್ಲ ಕೊನೆಗೆ ತಮ್ಮ ನಿಜಕ್ಕೆ ಮರಳುವ ಧೀಮಂತರು. ಹಂದ್ರಾಳರ ಕತೆಗಳಿಗಾಗಿಯೇ ಇವರು ನಿಜವಾಗುವ ಪಾತ್ರಗಳಲ್ಲ; ನಿಜ ಜೀವನದಲ್ಲಿಯೂ ನಾವು ಕಾಣುವ ಇಂತಹ ಅಪರೂಪದ ವ್ಯಕ್ತಿಗಳೇ ಹಂದ್ರಾಳರ ಕತೆಗಳಲ್ಲಿ ಹೊಸದಾಗಿ ಜೀವ ಧಾರಣೆ ಮಾಡಿ ಹೀರೋಗಳಾಗುತ್ತಾರೆ. ಅನೂಹ್ಯಳ ಸುತ್ತ ಕಟ್ಟಿಕೊಂಡಿದ್ದ ಬ್ರೆಕ್ಟನ ಕನಸು ಮುರಿದು ಬಿದ್ದಾಗ ಆತ ವಾಸ್ತವಕ್ಕೆ ಮರಳುತ್ತಾನೆ. ‘ಸೋನಾಗಾಚಿ’ಯ ಅಲ್ಲಮಪ್ರಭು ವೇಶ್ಯೆಯನ್ನು ವರಿಸಿ ಉದ್ಧಾರವಾಗುತ್ತಾನೆ. ಇವರೆಲ್ಲರ ಉದ್ದಾರ ಕತೆಗಾರನ ಕಲ್ಪನೆಯಲ್ಲಷ್ಟೆ ರೂಪು ಪಡೆದದ್ದಲ್ಲ. ನಮ್ಮ ಸುತ್ತ ಕಾಣುವ ವ್ಯಕ್ತಿಗಳ ದೈನಂದಿನ ವಾಸ್ತವಗಳೇ ಇಲ್ಲಿ ಕತೆಯಾಗುತ್ತವೆ. ಸಾಮಾನ್ಯ ಮನುಷ್ಯನ ವಿವೇಕ ಮತ್ತು ಜಾಣತನಗಳನ್ನು ಈ ಕತೆಗಳು ಗೆಲ್ಲಿಸುತ್ತವೆ. ಬೈಎಲೆಕ್ಶನ್ ನಲ್ಲಿ ಹುರಿಯಾಳಾಗಿ ನಿಲ್ಲುವ ಗಿರಿಗೌಡನಳ್ಳಿಯ ಮಾದೇಗೌಡನ ಒಂದು ಕತೆಯಿದೆ ಇಲ್ಲಿ. ಮಾದೇಗೌಡ ಇಂದಿನ ನಡತೆಗೆಟ್ಟ ಶಕ್ತಿರಾಜಕಾರಣಕ್ಕೆ ತನ್ನ ಹುಂಬತನದಲ್ಲಿ ಬಲಿಯಾದವನು. ಅವನು ಚುನಾವಣೆಯಲ್ಲಿ ಸೋತು, ಕೈ ಬರಿದಾಗಿ ನಿಂತಾಗ, ಹತಾಶೆಗೊಳ್ಳದೆ ಮತ್ತೆ ತನ್ನ ರಾಗಿ ಮಿಶನ್ ಕೆಲಸಕ್ಕೆ ನಿಲ್ಲುತ್ತಾನೆ. ಇವು ಹಂದ್ರಾಳರ ಕಥಾಜಗತ್ತು. ಓದುಗರ ಮನವೊಲಿಸಲು ಹಂದ್ರಾಳರು ಎಲ್ಲಿಯೂ ಕಲ್ಪನೆಯನ್ನು ಉತ್ಪ್ರೇಕ್ಷಿಸುವುದಿಲ್ಲ. ಇವರು ಕಾಣುವ ವಾಸ್ತವ ಜಗತ್ತು ತೃಣಮಾತ್ರವೂ ಕಲ್ಪಿತ ಎನಿಸುವುದಿಲ್ಲ.

‘ಸೋನಾಗಾಚಿ’ ಯ ಕತೆಗಳನ್ನು ಇಲ್ಲಿ ಸಂಗ್ರಹವಾಗಿ ಹೇಳುತ್ತ ನಾನು ಮೆಲುಕು ಹಾಕುವುದಿಲ್ಲ. ಏಕೆಂದರೆ ಕತೆ ಸಂಭವಿಸುವ ಭಾಷೆಯ ನುಡಿಕಟ್ಟುಗಳಲ್ಲಿಯೇ ಕತೆಗಳನ್ನು ಓದಿ ಆಸ್ವಾದಿಸಬೇಕಾಗುತ್ತದೆ. ಆದರೂ ‘ಪೆಂಚಾಲಯ್ಯನ ಪೆನ್ಶನ್ ಫೈಲು’, ‘ಕತ್ತಲು ಮತ್ತು ಮಳೆ’ ‘ಇನ್ನಾದರೂ ಸಾಯಬೇಕು’ ಕತೆಗಳನ್ನು ಇಲ್ಲಿ ಉಲ್ಲೇಖಿಸದೆ ನನ್ನ ಮಾತುಗಳನ್ನು ಮುಗಿಸುವುದು ಅಸಾಧ್ಯ. ಪೆಂಚಾಲಯ್ಯ ತನ್ನ ಪೆನ್ಶನ್ ಫೈಲಿನಲ್ಲಿ ಸಿಕ್ಕಿಕೊಂಡ ಒಂದು ತೊಡಕನ್ನು ನಿವಾರಿಸಿಕೊಳ್ಳುವ ಕತೆ ‘ಪೆಂಚಾಲಯ್ಯನ ಪೆನ್ಶನ್ ಫೈಲು’. ಹೆಚ್ಚಿನ ಸಂದರ್ಭಗಳಲ್ಲಿ ಮನುಷ್ಯ ತನ್ನ ಸಹಜವಾದ ಜಾಣತನವನ್ನೇ ನೆಚ್ಚಿಕೊಳ್ಳುತ್ತಾನೆ. ಆಳದಲ್ಲಿ ನಾವೆಲ್ಲ ಅಂತಹ ಉಪಾಯಗಾರರೇ. ಕಾನೂನಿನ ಕುರುಡನ್ನೂ ನೌಕರಶಾಹಿಯ ಸಂಚುಗಳನ್ನೂ ಸಿಟ್ಟು ಮತ್ತು ವ್ಯಂಗ್ಯದಲ್ಲಿ ಹಂದ್ರಾಳರು ನಿರೂಪಿಸುವ ಸುಲಭದ ಮಾರ್ಗವನ್ನು ಹಿಡಿಯದೆ ಮನುಷ್ಯರ ತಿಳಿವಳಿಕೆಗೆ ಸಂಭ್ರಮಿಸುವ ಸಂಯಮ ತೋರುತ್ತಾರೆ ಈ ಕತೆಯಲ್ಲಿ. ಈ ಕತೆಯ ಲೋಕಗ್ರಹಿಕೆ ಅದ್ಭುತವಾಗಿದೆ.

ಹಂದ್ರಾಳರ ಕಥಾಜಗತ್ತಿನ ಮನುಷ್ಯರನ್ನ ನಿಕಟವಾಗಿ ನೋಡುವುದರಲ್ಲಿ ಒಂದು ಆನಂದವಿದೆ. ಇವರೆಲ್ಲ ಏಕಾಂತದಲ್ಲಿ ತಮ್ಮ ನೈತಿಕತೆಗೆ ನಿಜ ಎನ್ನುವಂತೆ ಯೋಚಿಸಬಲ್ಲವರು. ಯೋಚನೆಯಂತೆ ಬದುಕಿ ತೋರಿಸಬಲ್ಲ ಈ ಧೀರರು ಯಾವತ್ತೂ ಸದ್ಯಕ್ಕೆ ಸ್ಪಂದಿಸುತ್ತಾರೆ. ‘ಪರಿವರ್ತನೆ’ ಕತೆಯ ರಾಜಕಾರಣಿ ತಿರುಬೋಕಿ ಜೈಲಿನಲ್ಲಿರುವಾಗ ತನ್ನ ಅಂತರಂಗದ ಮಾತನ್ನು ಆಲಿಸುವುದು ಒಂದು ಲೋಕೋತ್ತರ ವಿದ್ಯಮಾನ. ‘ಕತ್ತಲು ಮತ್ತು ಮಳೆ’ಯ ಶಾಲ್ಮಲ ಕೂಡ ತನ್ನ ಆತ್ಮಸಾಕ್ಷಿಯಂತೆ ವರ್ತಿಸುವವಳು. ಆದರೆ ಲೋಕದ ರೀತಿಯನ್ನೂ ಬಲ್ಲವಳು. ಆದ್ದರಿಂದ ತನ್ನನ್ನು ಹಿಂದೊಮ್ಮೆ ಪ್ರೀತಿಸಿದವನ ಬಳಿಗೆ ಆಕೆ ಮರಳಿದಾಗ ಅದೊಂದು ಅನೈತಿಕ ಕ್ರಿಯೆ ಎನಿಸುವುದಿಲ್ಲ.

ಈ ಸಂಕಲನದಲ್ಲಿರುವ ಒಂದು ಅಪೂರ್ವವಾದ ಕತೆ ‘ಇನ್ನಾದರೂ ಸಾಯಬೇಕು’. ಹಂದ್ರಾಳರ ಕತೆಗಳಲ್ಲಿ ಅಸಹಜವಾದ ಸಾವು ಕಡಿಮೆ. ಆದರೆ ಈ ಕತೆಯ ಪ್ರೊಫೆಸರ್ ಋಗ್ವೇದಿ ನೇಣು ಬಿಗಿದುಕೊಂಡು ಸಾಯುತ್ತಾರೆ. ಪ್ರೊ.ಋಗ್ವೇದಿ ಸಾಯುವ ಉದ್ದೇಶ ಹೊಂದಿರಲಿಲ್ಲವಾದರೂ ತಮ್ಮ ತಲೆಯೆಲ್ಲ ತುಂಬಿಕೊಂಡ ಸಾವಿನ ಧ್ಯಾನದಿಂದ, ಆತ್ಮಹತ್ಯೆಯ ಒಂದು ಸನ್ನಿವೇಶವನ್ನು ರಿಹರ್ಸಲ್ ಮಾಡುವ ಲಘುವಾದ ಮನಸ್ಥಿತಿಯಲ್ಲೇ ತಂದುಕೊಂಡ ಸಾವು ಇದು. ಸಾಯಬೇಕೆಂದು ಬೆಂಕಿ ಹಚ್ಚಿಕೊಂಡು ಸಾಯದೆ ಆಸ್ಪತ್ರೆ ಸೇರಿದ್ದ ಶಿಷ್ಯ ವೆಂಕಟೇಶ್ ಯಾದವನನ್ನು ಕಾಣಲು ಹೋಗುವ ಪ್ರೊ.ಋಗ್ವೇದಿ ಅಲ್ಲಿ ಹೇಳುವ ಮಾತು ಅವರ ಮನಸ್ಥಿತಿಯನ್ನು ತೋರುವಂಥದ್ದು. “ಎಂಥ ಅವಿವೇಕಿಯಯ್ಯಾ ನೀನು! ಅದಕ್ಕೊಂದು ಪ್ರಾಪರ್ ಪ್ರಿಪರೇಶನ್ ಬೇಕಾಗುತ್ತೆ. ನೀನು ನೇಣು ಬಿಗಿದುಕೊಳ್ಳಬೇಕಾಗಿತ್ತು.” ಎಂದುಬಿಡುತ್ತಾರೆ. ಮಾರನೆಯ ದಿನ ತಾನೇ “ಅರೆ, ಒಂದು ಅಟೆಂಪ್ಟ್ ಏಕೆ ಮಾಡಬಾರದು?” ಎಂದು ತನ್ನ ಕುತೂಹಲಕ್ಕೆ ತನ್ನ ಪ್ರಾಣವನ್ನೇ ಕಳೆದುಕೊಳ್ಳುವ ಋಗ್ವೇದಿಯ ಕತೆ ಕೇಶವ ರೆಡ್ಡಿ ಹಂದ್ರಾಳರ ಲೋಕವೀಕ್ಷಣೆಯ ಪ್ರತಿಭೆಗೆ ಉದಾಹರಣೆಯಾಗುತ್ತದೆ. ಈ ಕತೆ ನಮ್ಮ ವಿರುದ್ಧ ನಮ್ಮನ್ನೇ ಎಚ್ಚರಿಸುತ್ತದೆ.

ಹಂದ್ರಾಳರು ಬಹಳ ಸಂಯಮಶೀಲ ಕತೆಗಾರರು, ಬದುಕನ್ನು ಗಾಢವಾಗಿ ಹಚ್ಚಿಕೊಂಡು ಕ್ಷಣ ಕ್ಷಣವನ್ನೂ ತಮ್ಮ ರುಚಿಯಂತೆ ಪಡೆದುಕೊಂಡವರು. ಆದ್ದರಿಂದ ಇವರ ಯಾವ ಕಥಾವ್ಯಕ್ತಿಯೂ ಇವರ ಕತೆಗಾರಿಕೆಯ ಉತ್ಸಾಹದಲ್ಲಿ ಅಪಚಿತ್ರಕ್ಕೆ ಒಳಗಾಗುವುದಿಲ್ಲ. ಬದಲಿಗೆ, ವೇಶ್ಯೆಯನ್ನೇ ಮದುವೆಯಾಗಿ ಈ ಪುರೋಹಿತನ ಎದುರಿಗೆ ಬಂದು ನಿಲ್ಲುವ ಶಪಥವನ್ನು ಮಾಡುವ ಅಲ್ಲಮಪ್ರಭು ಕೂಡ ತನ್ನ ಉದಾರವಾದ ನಡತೆಯಿಂದ ಬದುಕನ್ನು ಗೆದ್ದುಕೊಳ್ಳುತ್ತಾನೆ. ಹಂದ್ರಾಳರ ಹೆಚ್ಚಿನ ಕತೆಗಳು ನಮ್ಮನ್ನು ಬದುಕಿಗೆ ಮರಳಿಸುತ್ತವೆ. ಆದ್ದರಿಂದ ಇವರ ಕತೆಗಾರಿಕೆಯ ವಿಷಯದಲ್ಲಿ ನಾನು ಆಶಾವಾದಿ.

ಈ ಮಾತುಗಳೊಂದಿಗೆ ನನ್ನದೊಂದು ನೆನಪನ್ನೂ ಇಲ್ಲಿ ಜೋಡಿಸುವ ಇಚ್ಛೆ ನನಗೆ. ಕೆಲವು ವರ್ಷಗಳ ಹಿಂದೆ ಇವರು ನಮ್ಮದೊಂದು ಪರ್ಯಾಯ ಸಾಹಿತ್ಯಸಮ್ಮೇಳನದಲ್ಲಿ ನಮ್ಮ ಜೊತೆಯಾಗಿದ್ದರು. ಆಗ ಕುಂ. ವೀರಭದ್ರಪ್ಪನವರನ್ನು ಉದ್ಘಾಟಕರನ್ನಾಗಿ ಒಪ್ಪಿಸಿ ನೆರವಾದವರೂ ಇವರೇ. ಆದರೆ ಸ್ವತಃ ಕನ್ನಡದ ಮಹತ್ವದ ಕತೆಗಾರರಾಗಿ ಆ ಸಾಹಿತ್ಯವೇದಿಕೆಯ ಮೇಲೆ ಮೆರೆಯಲು ಒಪ್ಪಿಕೊಳ್ಳಲಿಲ್ಲ. ತನ್ನ ಕತೆಯಂತೆ ತಾನೂ ಇರಬಲ್ಲ ಹಂದ್ರಾಳರು ನನಗೆ ಇಷ್ಟವಾಗಲು ಇದೂ ಒಂದು ಕಾರಣ.

ಇಡೀ ಸಮಾಜಕ್ಕೇ ದೀವಟಿಗೆಯ ಬೆಳಕು ಹಿಡಿಯುತ್ತೇನೆ ಎನ್ನುವ ರಣೋತ್ಸಾಹದ ಬಂಡಾಯದ ಕತೆಗಳಿಗೆ ಹಂದ್ರಾಳರು ಒಲಿದವರಲ್ಲ. ಈ ವೈಚಾರಿಕತೆ ಇವತ್ತಿನ ಕಾಲಧರ್ಮ. ಇದರಿಂದ ದೂರವುಳಿದು,‌ ಓದುಗನ ಅಂತರಂಗವನ್ನೂ ಅಂತಃಕರಣವನ್ನೂ ಸ್ಪರ್ಶಿಸುವ ಕತೆಗಾರಿಕೆಗೆ ಇವರು ಒಲಿದಿದ್ದಾರೆ. ಹಂದ್ರಾಳರ ಈ ಜೀವನಪ್ರೀತಿಗೆ ಬೆರಗಾಗಿದ್ದೇನೆ.

ನನ್ನಿಂದ ತಮ್ಮ ‘ಸೋನಾಗಾಚಿ’ ಕತೆಗಳ ಬಗ್ಗೆ ಈ ಮಾತು ಸಾಧ್ಯವಾಗುವಂತೆ ಮಾಡಿದ ಕೇಶವ ರೆಡ್ಡಿ ಹಂದ್ರಾಳರಿಗೆ ಧನ್ಯವಾದಗಳು.

ಆರ್.ಡಿ.ಹೆಗಡೆ ಆಲ್ಮನೆ
೧೫-೧೦-೨೦೨೧ ವಿಜಯದಶಮಿ

ಇದನ್ನೂ ಓದಿ: Opinion: ನಾವು ನಡುಪಂಥೀಯರಲ್ಲ, ನೇರಪಂಥೀಯರು: ಕಥೆಗಾರ ಮಧು ವೈಎನ್